Monday, July 7, 2025
Homeರಾಜ್ಯಹೃದಯಾಘಾತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ಮುಂದಾದ ಸರ್ಕಾರ

ಹೃದಯಾಘಾತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ಮುಂದಾದ ಸರ್ಕಾರ

Government moves to declare heart attack as a notified disease

ಬೆಂಗಳೂರು,ಜು.7- ಹಠಾತ್‌ ಸಾವಿಗೆ ಕಾರಣವಾಗುವ ಹೃದ್ರೋಗವನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸುತ್ತಿದ್ದು, ಹೃದಯ ಸಂಬಂಧದ ಕಾಯಿಲೆಗಳನ್ನು ತಪ್ಪಿಸಲು ಶಾಲೆಗಳಲ್ಲಿ ,ಸರ್ಕಾರಿ ನೌಕರರು, ಗುತ್ತಿಗೆ ನೌಕರರಿಗೆ ವಾರ್ಷಿಕ ನಿಯಮಿತ ತಪಾಸಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಹೃದ್ರೋಗಗಳಿಂದ ಸಂಭವಿಸುತ್ತಿರುವ ಹಠಾತ್‌ ಸಾವುಗಳ ಬಗ್ಗೆ ಅಧ್ಯಯನಕ್ಕಾಗಿ ರಚಿಸಲಾಗಿದ್ದ ತಜ್ಞರ ಸಮಿತಿ ವರದಿಯನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಹೃದಯಾಘಾತಗಳಿಗೆ ಜನರ ಜೀವನಶೈಲಿ ಕಾರಣವಾಗಿದೆ. ಕೋವಿಡ್‌ ಲಸಿಕೆಯೇ ಹೃದಯಾಘಾತಕ್ಕೆ ಕಾರಣ ಎಂದು ಎಲ್ಲಿಯೂ ತಿಳಿದುಬಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಅಧ್ಯಯನ ನಡೆದಿದೆ. ಲಸಿಕೆಯಿಂದ ಜನರಿಗೆ ಒಳ್ಳೆಯದಾಗಿದೆ. ಬಹಳಷ್ಟು ಜನರ ಜೀವ ಉಳಿದಿದೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್‌ ನಿಯಂತ್ರಣಕ್ಕೆ ನೀಡಲಾದ ಎಂಆರ್‌ಎನ್‌ಎ ಲಸಿಕೆಯ ಬಗ್ಗೆ ಒಂದಿಷ್ಟು ಅನುಮಾನಗಳಿವೆ. ಆದರೆ ಅದನ್ನು ನಮ ದೇಶದಲ್ಲಿ ನೀಡಲಾಗಿಲ್ಲ ಎಂದರು.ಜನಸಾಮಾನ್ಯರಲ್ಲಿದ್ದ ಅನುಮಾನವನ್ನು ಬಗೆಹರಿಸುವ ಸಲುವಾಗಿಯೇ ಮುಖ್ಯಮಂತ್ರಿಯವರು ತಂತ್ರಜ್ಞರ ಸಮಿತಿಯನ್ನು ರಚಿಸಿದ್ದರು. ಅಧ್ಯಯನ ನಡೆಸಿದ ಸಮಿತಿಯು ಲಸಿಕೆಯ ಕಾರಣದಿಂದ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಚಿಕ್ಕವಯಸ್ಸಿನವರಲ್ಲಿ ದಿಢೀರ್‌ ಹೃದಯಾಘಾತವಾಗುತ್ತಿವೆ. ನಡೆದು ಹೋಗುವಾಗ, ವ್ಯಾಯಾಮ ಮಾಡುವಾಗ ಹಠಾತ್‌ ಮರಣಗಳಾಗುತ್ತಿವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ತಜ್ಞರ ಸಮಿತಿ ಹೇಳಿದೆ. ಸಮಿತಿಯ ಶಿಫಾರಸು ಆಧಾರದ ಮೇಲೆ ಸರ್ಕಾರ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.

ಆಸ್ಪತ್ರೆಯ ಹೊರಗಡೆ ಹಠಾತ್‌ ಮರಣಗಳನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗುತ್ತಿದ್ದು, ಆ ಸಾವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದು ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆಗೊಳಪಡಿಸುವ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಲು ತಪಾಸಣೆಯನ್ನು ವ್ಯಾಪಕಗೊಳಿಸಲಾಗುತ್ತದೆ. 15 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೊಮೆಯಾದರೂ ಹೃದಯದ ತಪಾಸಣೆ ನಡೆಸಲಾಗುವುದು. ಹುಟ್ಟಿನಿಂದಲೇ ಬಂದಿರುವ (ಕಾಂಜಿನೇಟಲ್‌ ಡಿಸೀಸ್‌‍) ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು. ಆರ್‌ಬಿಎಸ್‌‍ ಯೋಜನೆಯಡಿ ಹಲವು ರೀತಿಯ ತಪಾಸಣೆಗಳಿದ್ದು, ಹೃದಯ ಸಂಬಂಧಿ ತಪಾಸಣೆಗಳನ್ನು ಅಳವಡಿಸಲಾಗುವುದು.

ಹೃದಯಾಘಾತ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಶಾಲಾ ಪಠ್ಯಕ್ರಮಗಳಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷದಿಂದ ಇದು ಅಳವಡಿಕೆಯಾಗಲಿದೆ. ಈ ವರ್ಷ ನೈತಿಕ ಪಾಠಗಳ ಬೋಧನೆಯಲ್ಲಿ ಔಪಚಾರಿಕವಾಗಿ ಇದನ್ನು ಮಕ್ಕಳಿಗೆ ತಿಳಿಸುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಹೃದಯಾಘಾತದ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆಯಾಗಿರುವ ಸಿಪಿಆರ್‌ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಪುನೀತ್‌ ರಾಜ್‌ಕುಮಾರ್‌ ಹೃದಯಜ್ಯೋತಿ ಯೋಜನೆ 86 ಆಸ್ಪತ್ರೆಗಳಲ್ಲಿ ಜಾರಿಯಲ್ಲಿದೆ. ಅದನ್ನು ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲಾಗುವುದು. ತಾಲ್ಲೂಕು ಮಟ್ಟದಲ್ಲೇ ಇಸಿಜಿ ಹಾಗೂ ಹೃದಯ ತಪಾಸಣೆ ನಡೆಸಲಾಗುವುದು.

ಎಇಡಿ ಸಲಕರಣೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಲು ಪುನೀತ್‌ ಹೃದಯ ಜ್ಯೋತಿ ಯೋಜನೆಯಡಿಯಲ್ಲೇ ಕ್ರಮ ಕೈಗೊಳ್ಳಲಾಗಿತ್ತು. ಆದರೆ ತಂತ್ರಜ್ಞರ ಕೊರತೆಯಿಂದ ತಾಂತ್ರಿಕ ಸಮಸ್ಯೆ ಎದುರಾಗಿದೆ. ನಿರ್ದಿಷ್ಟವಾದ ಸಿಬ್ಬಂದಿಗಳಿರುವ ಬಸ್‌‍ ನಿಲ್ದಾಣ, ರೈಲ್ವೆ ನಿಲ್ದಾಣಗಳಂತಹ ಸ್ಥಳಗಳಲ್ಲಿ ಎಐಡಿಗಳನ್ನು ಅಳವಡಿಸಿ ಹತ್ತಿರದ ಸ್ಥಳಗಳಿಗೆ ಸೇವೆ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಎಇಡಿಗಳು ಹೃದಯಾಘಾತದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ನೆರವಾಗಲಿವೆ ಎಂದರು.ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ವರ್ಷಕ್ಕೊಮೆ ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ನಂತಹ ತಪಾಸಣೆ ನಡೆಸಲಾಗುವುದು. ಖಾಸಗಿ ವಲಯದಲ್ಲೂ ಪ್ರತೀವರ್ಷ ಈ ರೀತಿಯ ತಪಾಸಣೆಗೆ ನಿರ್ದೇಶನ ನೀಡುವುದಾಗಿ ಹೇಳಿದರು.

ಗೃಹ ಆರೋಗ್ಯ ಯೋಜನೆಯಲ್ಲೂ ಈ ತಪಾಸಣೆಗೆ ಒಳಪಡಿಸಲಾಗುತ್ತದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಮತ್ತಷ್ಟು ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಹೃದಯಾಘಾತಗಳಿಗೆ ಪರಿಸರ ಮಾಲಿನ್ಯ, ಧೂಮಪಾನ, ಜೀವನಶೈಲಿ ಪ್ರಮುಖ ಕಾರಣಗಳಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದರು.

RELATED ARTICLES

Latest News