Tuesday, February 25, 2025
Homeರಾಜ್ಯ6 ತಿಂಗಳಿನಿಂದ ಹಣ ಪಾವತಿಸದ ಸರ್ಕಾರ, ಸಂಕಷ್ಟದಲ್ಲಿ ಸಕ್ಕರೆ ಕಾರ್ಖಾನೆಗಳು

6 ತಿಂಗಳಿನಿಂದ ಹಣ ಪಾವತಿಸದ ಸರ್ಕಾರ, ಸಂಕಷ್ಟದಲ್ಲಿ ಸಕ್ಕರೆ ಕಾರ್ಖಾನೆಗಳು

Government not paying for 6 months, sugar factories in trouble

ಬೆಂಗಳೂರು,ಜ.25- ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿ ಸರಬರಾಜು ಮಾಡುವ ವಿದ್ಯುತ್ಗೆ ರಾಜ್ಯ ಸರ್ಕಾರ ಆರು ತಿಂಗಳಾದರೂ ಹಣ ಪಾವತಿಸದ ಕಾರಣ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಮಸ್ಯೆಗೆ ಸಿಲುಕಿದೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಹಿರಿಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಪೂರೈಸುವ ಎಥೆನಾಲ್ಗೆ ಕೇಂದ್ರ ಸರ್ಕಾರ 10 ದಿನದ ಒಳಗೆ ಹಣ ಪಾವತಿಸುತ್ತದೆ. ಆದರೆ ರಾಜ್ಯ ಸರ್ಕಾರ ಆರು ತಿಂಗಳಾದರೂ ಹಣ ಪಾವತಿಸಿಲ್ಲ. ಇದರಿಂದ ಕಾರ್ಖಾನೆಗಳು ಸಮಸ್ಯೆಗೆ ಸಿಲುಕಿವೆ. ಆದ್ದರಿಂದ 15 ದಿನಗಳಿಂದ ಒಂದು ತಿಂಗಳೊಳಗೆ ಹಣ ಪಾವತಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕಳೆದ ವರ್ಷ ಬರಗಾಲದಿಂದಾಗಿ ಎಥೆನಾಲ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಉತ್ಪಾದನೆ ಆರಂಭವಾಗಿದ್ದು, ಕಬ್ಬು ಮಾತ್ರವಲ್ಲದೆ, ಮೆಕ್ಕೆಜೋಳ ಮತ್ತು ಅಕ್ಕಿಯಿದಲೂ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷದ ಬೆಳೆಗಳಿಂದ ಈ ಬಾರಿ ಒಂದು ಸಾವಿರ ಕೋಟಿ ಎಥೆನಾಲ್ ಉತ್ಪಾದಿಸಲಾಗಿದೆ.

ಪ್ರಸ್ತುತ ಪೆಟ್ರೋಲ್ಗೆ ಮಾತ್ರ ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಡೀಸೆಲ್ ಗೂ ಇದನ್ನು ಮಿಶ್ರಣ ಮಾಡಲಾಗುವುದು. 10 ವರ್ಷದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬದಲು ಎಲೆಕ್ಟ್ರಿಕ್ ಮತ್ತು ಎಥೆನಾಲ್ನಿಂದ ಓಡುವ ವಾಹನಗಳು ಬರುತ್ತವೆ. ಅದೇ ರೀತಿ ವಿಮಾನಗಳಿಗೂ ಎಥೆನಾಲ್ ಬಳಕೆ ಮಾಡಲು ಅವಕಾಶ ಇದೆ. ಜೆಟ್ ಫ್ಯೂಯಲ್ (ವಿಮಾನಗಳ ಪೆಟ್ರೋಲ್)ಗೆ ಶೇ.5ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ಕೆಲಸ ಆಗಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದೆ.

ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ನಿಂದ ಬರುವ ಆದಾಯದಲ್ಲಿ ರೈತರಿಗೆ ಹೆಚ್ಚು ಪಾಲು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಎಥೆನಾಲ್ ನಿಂದ ಬರುವ ಆದಾಯದಲ್ಲಿ ಶೇ. 70ರಿಂದ ಶೇ. 75ರಷ್ಟನ್ನು ರೈತರಿಗೆ ಮತ್ತು ಶೇ. 25ನ್ನು ಕಂಪನಿ ಮಾಲೀಸರಿಗೆ ನೀಡಲು ಶಿಫಾರಸು ಮಾಡಿದೆ ಎಂದು ತಿಳಿಸಿದರು. ದೇಶದಲ್ಲಿ ಕಬ್ಬು ಮಹತ್ವದ ಬೆಳೆಯಾಗಿದ್ದು, ಸುಮಾರು 11 ಕೋಟಿ ರೈತರು ಕಬ್ಬು ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಪ್ರಸ್ತುತ ಸಕ್ಕರೆ ಬೆಲೆ ಕಡಿಮೆ ಇದ್ದರೂ ಕಬ್ಬು ಸರಬರಾಜು ಮಾಡುವ ರೈತರಿಗೆ ಹೆಚ್ಚಿನ ದರ ನೀಡಲಾಗುತ್ತಿದೆ.

ಪ್ರಹ್ಲಾದ್ ಜೋಶಿಗೆ ಅಭಿನಂದನೆ:
ಕಬ್ಬಿನ ದರಕ್ಕೆ ಹೋಲಿಸಿದರೆ ಸಕ್ಕರೆಗೆ ಕಡಿಮೆ ಬೆಲೆ ಇದೆ. ಹೀಗಾಗಿ ಸಕ್ಕರೆ ಬೆಲೆ ಹೆಚ್ಚಿಸಬೇಕು ಮತ್ತು ರಫ್ತಿಗೆ ಅನುಮತಿ ನೀಡಬೇಕು ಎಂದು ಹಲವು ಬಾರಿ ಕೇಂದ್ರ ಸರ್ಕಾರವನ್ನು ಮನವಿ ಮಾಡಲಾಗಿತ್ತು. ಈ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಿದೆ. ಅದಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ರಾಜ್ಯದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಸರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ನಿರಾಣಿ ಹೇಳಿದರು.

ಕಬ್ಬು ಬೆಳೆಗಾರರಿಗೆ ನಿಗದಿಪಡಿಸಿದ ಎಂಎಸ್ ಪಿ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ಸ್ವಾಗತಿಸಿದ ಅವರು, ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಂಎಸ್ ಪಿ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಎಂಡಿ, ಮೈಲಾರ್ ಸುಗರ್ಸ್ಉದಯಕುಮಾರ ಪುರಾಣಿಕಮಠ, ಅಥಣಿ ಸುಗರ್ಸ್, ಪ್ರೆಸಿಡೆಂಟ್, ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಇಡಿ ಯೋಗೇಶ್ ಪಾಟೀಲ್, ಎಂಡಿ, ಮೆಲ್ಬ್ರೋ ಸುಗರ್ಸ್ ಸಂತೋಷ್ ಮೆಳ್ಳಿಗೇರಿ, ಚೇರ್ಮನ್, ಬೀದರ್ ಕಿಸಾನ್ ಸುಗರ್ಸ್ ಕಲೇಶ ಸರ್ವಾಡ, ಡೈರೆಕ್ಟರ್, ಶ್ರೀ ಬಾಲಾಜಿ ಸುಗರ್ಸ್ ಪ್ರಜ್ವಲ್ ಪಾಟೀಲ್, ಅಡ್ವೈಸರ್, ಜೆಎಂ ಸುಗರ್ಸ್ ಮುರುಗೇಶನ್, ಚಾಮುಂಡಿ ಸುಗರ್ಸ್ನ ವಾದಿರಾಜ ಉಪಸ್ಥಿತರಿದ್ದರು.

RELATED ARTICLES

Latest News