ಬೆಂಗಳೂರು, ಸೆ.17- ಮಾನವ ಅಂಗಾಂಗಳ ಮತ್ತು ಅಗಾಂಗ ಕಸಿ ಜೋಡಣೆಗಾಗಿ ರಾಜ್ಯ ಮಟ್ಟದ ಅಧಿಕಾರಯುತ ಸಮಿತಿಯನ್ನು ಪುನರ್ ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಹಿಂದಿನ ಸಮಿತಿಯ ಅಧಿಕಾರಾವಧಿ 2025ರ ಆಗಸ್ಟ್ 20ಕ್ಕೆ ಮುಕ್ತಾಯವಾಗಿತ್ತು. ಹೊಸ ಸಮಿತಿಯನ್ನು ಸೆ. 16ರಿಂದ ಅನುಷ್ಠಾನಕ್ಕೆ ಬರುವಂತೆ ರಚಿಸಲಾಗಿದೆ.
ಸಮಿತಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೋಯುರಾಲಾಜಿ ಸಂಸ್ಥೆಯ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಇತರ 6 ಮಂದಿ ಸದಸ್ಯರನ್ನು ನಿಯೋಜಿಸಲಾಗಿದೆ.
ಬೆಂಗಳೂರಿನ ಎಚ್ಬಿಆರ್ ಬಡಾವಣೆಯ ನಿವಾಸಿಯಾಗಿರುವ ನಿವೃತ್ತ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಎಲ್. ಮೂರ್ತಿ, ಬಿಎಂಸಿಆರ್ಐ ಕಮ್ಯುನಿಟಿ ಮೆಡಿಷನ್ ಪ್ರಾಧ್ಯಾಪಕ ಹಾಗೂ ವಿಭಾಗೀಯ ಮುಖ್ಯಸ್ಥ ಡಾ.ಟಿ.ಎಸ್. ರಂಗನಾಥ್, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ, ಬಿಎಂಸಿಆರ್ಐ ವಾಣಿವಿಲಾಸ ಅಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಿತ್ರಾರಾಮಮೂರ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಅಥವಾ ಇವರನ್ನು ಪ್ರತಿನಿಧಿಸುವ ಉಪಕಾರ್ಯದರ್ಶಿ ವೃಂದಕ್ಕಿಂತಲೂ ಕಡಿಮೆ ದರ್ಜೆಯಲ್ಲಿರದ ನಾಮನಿರ್ದೇಶಿತ ಒಬ್ಬ ಅಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕರನ್ನು ಪ್ರತಿನಿಧಿಸುವ ಸಹ ನಿರ್ದೇಶಕರಿಗಿಂತ ಕಡಿಮೆ ದರ್ಜೆಯಲ್ಲಿರದ ನಾಮ ನಿರ್ದೇಶಿತ ಅಧಿಕಾರಿಯನ್ನು ಸದಸ್ಯನ್ನಾಗಿ ನೇಮಿಸಲಾಗಿದೆ.
ರಾಜ್ಯದಲ್ಲಿ ಅಂಗಾಂಗ ಕಸಿಗಾಗಿ ಲಕ್ಷಾಂತರ ಮಂದಿ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಸಮಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣಕ್ಕಾಗಿ ಸಾಕಷ್ಟು ಸಮಸ್ಯೆಯಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ರಾಜ್ಯಸರ್ಕಾರ ಅಧಿಕಾರಯುತ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.