ಬೆಂಗಳೂರು,ಜು.4- ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ನ್ಯಾಯ ದೊರೆಯಬೇಕು. ಅದಕ್ಕಾಗಿ ಮುಂದಿನ ಅರಳೀಕಟ್ಟೆ ಮಾದರಿಯಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಿ ಅದಕ್ಕೆ ನ್ಯಾಯಾಧೀಶರೇ ಅಧ್ಯಕ್ಷತೆ ವಹಿಸುವಂತಹ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ನೂತನ ನೀತಿಯ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರಿಗೆ ನ್ಯಾಯ ಸಿಗಬೇಕು ಎಂಬ ಪರಿಕಲ್ಪನೆಯಡಿ ನೂತನ ನ್ಯಾಯ ನೀತಿಯನ್ನು ರೂಪಿಸಲಾಗುತ್ತಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ತಂದಿದ್ದರು ಎಂದು ಹೇಳಿದರು.
ಗ್ರಾಮೀಣ ಭಾಗದ ಜನರಿಗೆ ಗ್ರಾಮಮಟ್ಟದಲ್ಲೇ ನ್ಯಾಯ ಸಿಗಬೇಕು. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ಅರಳೀಕಟ್ಟೆ ನ್ಯಾಯ ಪಂಚಾಯಿತಿಗಳನ್ನು ಈಗ ಉತ್ತಮಗೊಳಿಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ತಾಲ್ಲೂಕು ಮಟ್ಟದ ನ್ಯಾಯಾಧೀಶರು ಸ್ಥಳೀಯ ನ್ಯಾಯ ಪಂಚಾಯಿತಿಗಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಜು.1 ರಿಂದ ಜಾರಿಗೆ ತಂದಿರುವ ನೂತನ ಅಪರಾಧ ಕಾನೂನುಗಳ ಕುರಿತಂತೆ ಆಕ್ಷೇಪಣೆಗಳಿದ್ದರೆ ಕೇಂದ್ರಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.ಮೈಸೂರಿನ ಮುಡಾ ಪ್ರಕರಣದ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯವರು ಕೇಳುವಂತೆ ಎಲ್ಲಾ ಪ್ರಕರಣಗಳನ್ನೂ ಸಿಬಿಐಗೆ ಕೊಟ್ಟರೆ ಸ್ಥಳೀಯ ಪೊಲೀಸರಿಗೆ ಕೆಲಸವೇ ಇಲ್ಲದಂತಾಗುತ್ತದೆ ಎಂದು ಹೇಳಿದರು.ವಿಧಾನಮಂಡಲದ ಅಧಿವೇಶನದಲ್ಲಿ ವಿರೋಧಪಕ್ಷದವರು ಯಾವ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳುತ್ತಾರೋ ಗೊತ್ತಿಲ್ಲ. ಸ್ಪೀಕರ್ ಅನುಮತಿ ಪಡೆದು ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೂ ಸರ್ಕಾರ ಸಮರ್ಥ ಉತ್ತರ ನೀಡಲಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಚರ್ಚೆಯಿಂದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೇಸರವಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ದೆಹಲಿಯಲ್ಲಿ ತಾವು ಅವರನ್ನು ಭೇಟಿ ಮಾಡಿದ್ದು, ಆ ವೇಳೆ ಅವರು ಬೇಸರದ ಯಾವ ವಿಚಾರಗಳನ್ನೂ ಪ್ರಸ್ತಾಪಿಸಲಿಲ್ಲ ಎಂದು ಹೇಳಿದರು.