Thursday, November 6, 2025
Homeರಾಜ್ಯಸರ್ಕಾರದಿಂದ ರೈತರ ನಿರ್ಲಕ್ಷ್ಯ : ಬಿ.ವೈ ವಿಜಯೇಂದ್ರ ಆಕ್ರೋಶ

ಸರ್ಕಾರದಿಂದ ರೈತರ ನಿರ್ಲಕ್ಷ್ಯ : ಬಿ.ವೈ ವಿಜಯೇಂದ್ರ ಆಕ್ರೋಶ

Government's negligence towards farmers: BYV outrage

ಬೆಂಗಳೂರು.ನ.6- ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ರೈತಪರವಾದ ಒಂದೇ ಒಂದು ಯೋಜನೆಯನ್ನೂ ರೂಪಿಸಲಿಲ್ಲ. ನೆರೆ ಸಂಕಷ್ಟಿತರಿಗೆ ಪರಿಹಾರ ನೀಡಲಿಲ್ಲ, ಕನಿಷ್ಠಪಕ್ಷ ರೈತರ ಸಂಕಷ್ಟಗಳನ್ನೂ ಆಲಿಸಲಿಲ್ಲ, ರೈತರನ್ನು ವಿಪರೀತ ತಾತ್ಸಾರದಿಂದ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಳಿ ನಡೆಸಿದ್ದಾರೆ.

ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ರೈತರೆಂದರೆ ಕಾಂಗ್ರೆಸ್‌‍ ಸರ್ಕಾರಕ್ಕೆ ಅಸಡ್ಡೆಯಾಗಿದೆ. ಸರ್ಕಾರ ರೈತರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿರುವ ಧೋರಣೆಯಿಂದಾಗಿ ರೈತ ಸಮುದಾಯ ಹತಾಶೆಯ ಹಂಚಿಕೆ ತಲುಪಿದೆ. ರೈತರ ಬದುಕನ್ನು ಹಸನು ಮಾಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ತಮ ಕುರ್ಚಿ ಕಿತ್ತಾಟದಲ್ಲಿ ಮುಳುಗಿ ಆಡಳಿತ ವ್ಯವಸ್ಥೆಯನ್ನೇ ತುಕ್ಕು ಹಿಡಿಸಿ, ಭ್ರಷ್ಟಾಚಾರದ ಕೂಪವಾಗಿಸಿದ ಪರಿಣಾಮ ರೈತರು ಕಚೇರಿಗಳಿಗೆ ನಿತ್ಯವೂ ಅಲೆಯುವ ದುಸ್ಥಿತಿ ಬಂದೊದಗಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಿ ಕಚೇರಿಗಳಿಗೆ ನಿತ್ಯವೂ ಅಲೆದು ತಮ ಕೆಲಸಗಳಾಗದೇ ಮನನೊಂದು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಆತಹತ್ಯೆಗೆ ಯತ್ನಿಸಿ ಸಾವಿಗೀಡಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ರೈತ ಮಂಜೇಗೌಡರ ಸಾವು ಆಘಾತ ತಂದಿದೆ. ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಬೆಳೆ ಹಾನಿ ಪರಿಹಾರ ಸಿಗದಿದ್ದಕ್ಕೆ ರೈತ ಸಿದ್ದನಗೌಡ ಹಿರೇಗೌಡ್ರ ಆತಹತ್ಯೆಗೆ ಯತ್ನಿಸಿ ಸಾವುಬದುಕಿನ ನಡುವೆ ಹೋರಾಡುತ್ತಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ, ರೈತಶಕ್ತಿ ಯೋಜನೆ, ಕಿಸಾನ್‌ ಸಮಾನ್‌ ನಿಧಿಯನ್ನು ನಿಲ್ಲಿಸಿದೆ. 25 ಸಾವಿರಕ್ಕೆ ಸಿಗುತ್ತಿದ್ದ ಟಿಸಿ ಸಂಪರ್ಕ ಇಂದು ಕನಿಷ್ಠ 3 ಲಕ್ಷ ಬೇಕಾಗಿದೆ. ಇದಕ್ಕಾಗಿ ರೈತರು ಸಾಲ ಮಾಡಬೇಕಾದ ಪರಿಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಆತಹತ್ಯೆಗೀಡಾದ ರೈತ ಮಂಜೇಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಿ, ಗದಗ ಜಿಲ್ಲೆಯ ರೈತ ಸಿದ್ದನಗೌಡ ಹಿರೇಗೌಡ್ರರ ಬೆಳೆ ಪರಿಹಾರ ನೀಡಿ, ಅವರ ಚಿಕಿತ್ಸೆಗೆ ಸೂಕ್ತ ನೆರವು ಕಲ್ಪಿಸಲಿ. ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿ ವರ್ಗಕ್ಕೆ ಸರ್ಕಾರ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಲಿ ಎಂದು ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

RELATED ARTICLES

Latest News