ಬೆಂಗಳೂರು,ಮೇ 15- ಕೃಷಿ ಶುದ್ಧೀಕರಣ ಹಾಗೂ ಉತ್ಪಾದನೆ ಹೆಚ್ಚಳದ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಗಮನ ಹರಿಸಬೇಕು. ಕೃಷಿ ವಿಜ್ಞಾನಿಗಳು ಇದಕ್ಕೆ ಪೂರಕವಾಗಿ ಸಂಶೋಧನೆ ಯಲ್ಲಿ ತೊಡಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ 59ನೇ ಘಟಿಕೋತ್ಸವದಲ್ಲಿ ಮಾತನಾಡಿದ ರಾಜ್ಯಪಾಲರು, ಅತೀ ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆಯಿಂದ ಕೃಷಿ ಉತ್ಪಾದನೆ ಹಾಗೂ ಜಲಮೂಲಗಳು ಕಲುಷಿತವಾಗುತ್ತಿದೆ. ಆಹಾರವು ಕೂಡ ರಾಸಾಯನಿಕ ಮಿಶ್ರಣವಾಗಿದೆ. ಇದಕ್ಕೆ ಪ್ರಾಕೃತಿಕ ಕೃಷಿ ಪದ್ಧತಿ ಪರಿಹಾರವಾಗಬಲ್ಲದು. ಕೃಷಿ ಶುದ್ಧೀಕರಣದತ್ತ ಯುವ ವಿಜ್ಞಾನಿಗಳು ಗಮನ ಹರಿಸಬೇಕು ಎಂದರು.
ಕಡಿಮೆ ಭೂಮಿಯಲ್ಲಿ ಹೆಚ್ಚು ಉತ್ಪಾದನೆ ಮಾಡುವ, ಡ್ರೋನ್, ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಕೆ ಮಾಡಿ ಕೃಷಿಯನ್ನು ಆರ್ಥಿಕ ಲಾಭದತ್ತ ಕೊಂಡೊಯ್ಯುವ ಪ್ರಯತ್ನ ಮಾಡಬೇಕು. ಕೃಷಿ ಕ್ಷೇತ್ರದ ನವೋದ್ಯಮಗಳು ಭವಿಷ್ಯದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಲಿವೆ. ಆದರೆ ಜೈವಿಕ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಾಗತಿಕ ತಾಪಮಾನ, ನೀರಿನ ಸಮಸ್ಯೆ, ಕ್ರಿಮಿನಾಶಕ, ರೈತರ ಆರ್ಥಿಕ ತೊಂದರೆಗಳಿಗೆ ಪರಿಹಾರ ದೊರಕುವಂತಾಗಬೇಕು. ಸುಸ್ಥಿರ ಕೃಷಿ ಜಾರಿಯಾಗಬೇಕು ಎಂದು ಹೇಳಿದರು.
ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ರಾಜ್ಯಸರ್ಕಾರ ಸಮಗ್ರ ಕೃಷಿ ಆಹಾರ ಪಾರ್ಕ್‌ಗಳ ಸ್ಥಾಪನೆ, ಕೃತಕ ಬುದ್ಧಿಮತ್ತೆಯೊಂದಿಗೆ ಡಿಜಿಟಲ್ ಕೃಷಿ ತಾಂತ್ರಿಕತೆಗಳಿಗೆ ಒತ್ತು ನೀಡುತ್ತಿದೆ. ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸಮಯಾಧಾರಿತ ಸಲಹೆ ನೀಡಲು ಕಾಲ್‌ಸೆಂಟರ್‌ಗಳನ್ನು ತೆರೆಯಲಾಗಿದೆ. ನೀರಿನ ಸದ್ಬಳಕೆ, ರೋಗ ಮತ್ತು ಕೀಟಗಳ ಹತೋಟಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಣ್ಣೆಕಾಳು, ಸಿರಿಧಾನ್ಯ, ದ್ವಿದಳಗಳ ಉತ್ಪಾದನೆಗೆ ಉತ್ತೇಜನ ನೀಡುತ್ತಿದ್ದು, ಪರಿಸರ ಸ್ನೇಹಿ ಚಟುವಟಿಕೆ, ಮಣ್ಣಿನ ಫಲವತ್ತತೆ ರಕ್ಷಣೆ, ಗುಣಮಟ್ಟದ ಬೀಜ ಉತ್ಪಾದನೆಯಲ್ಲಿ ಸ್ವಾವಲಂಬನೆ ಸರ್ಕಾರದ ಆದ್ಯತೆಗಳಾಗಿವೆ ಎಂದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು, ಪ್ರಸಕ್ತ ಕೃಷಿ ವರ್ಷದಲ್ಲಿ ಉತ್ತಮ ಮಳೆಯಾಗಿದ್ದು, ಬರ ಪರಿಸ್ಥಿತಿಯಿಲ್ಲದೆ ಉತ್ತಮ ಉತ್ಪಾದನೆ ದಾಖಲಾಗಿದೆ. ದೇಶದ ಕೃಷಿ ಬೆಳವಣಿಗೆ ಶೇ.3.8 ರಷ್ಟಿದ್ದರೆ ರಾಜ್ಯ ಅದಕ್ಕಿಂತಲೂ ಹೆಚ್ಚಿನದಾಗಿ ಶೇ.4 ರಷ್ಟು ಪ್ರಗತಿ ಕಂಡಿದೆ ಎಂದು ವಿವರಿಸಿದರು.
ಇಫ್ಕೊ ಸಂಸ್ಥೆಯ ಸ್ಥಾಪಕರಾದ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಎಸ್.ಅವಸ್ಥಿ ಮಾತನಾಡಿ, ಆಧುನಿಕ ಬೇಸಾಯ ಪದ್ಧತಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಯುವ ವಿಜ್ಞಾನಿಗಳ ಮೇಲಿದೆ. ಮಿತಿಮೀರಿದ ರಾಸಾಯನಿಕ ಬಳಕೆಯಿಂದ ಆಹಾರ ವಿಷವಾಗುತ್ತಿದೆ. ಅಂತಾರಾಷ್ಟ್ರೀಯ ಗುಣಮಟ್ಟ ಹಾಗೂ ಸ್ಥಳೀಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿ ಬೆಳೆ ಕುಸಿತ, ಮಾರುಕಟ್ಟೆ ಸಮಸ್ಯೆ, ನೀರಾವರಿ ಸಮಸ್ಯೆ, ಕೃಷಿ ಕಾರ್ಮಿಕರ ಕೊರತೆಯಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕೃಷಿ ಲಾಭದಾಯಕವಾಗಿಸುವ ಅಗತ್ಯವಿದೆ ಎಂದು ಹೇಳಿದರು.
ಇಫ್ಕೊ ಸಂಸ್ಥೆ ಪರಿಸರ ಸ್ನೇಹಿಯಾದ 9 ರಸಗೊಬ್ಬರಗಳನ್ನು ಜ್ಞಾನ, ತಂತ್ರಜ್ಞಾನ ಆಧಾರಿತವಾಗಿ ಪರಿಚಯಿಸಲಿದೆ. ಮಣ್ಣು ಹಾಗೂ ನೀರಿನ ರಕ್ಷಣೆಗೆ ಹೆಚ್ಚಿನ ಕಾಳಜಿ ಅಗತ್ಯವಿದೆ. ಬಹುಬೆಳೆಗಳ ಮಾದರಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದರು.
ಕೃಷಿ ತಂತ್ರಜ್ಞಾನ ದುಬಾರಿಯಾಗಿದ್ದು, ಈ ಸವಾಲನ್ನು ಮೆಟ್ಟಿ ನಿಂತು ಕೈಗೆಟಕುವ ದರದಲ್ಲಿ ವ್ಯವಸಾಯ ಮಾಡುವ ಹಾಗೂ ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸಬೇಕು ಎಂದು ಕರೆ ನೀಡಿದರು.
ಕೃಷಿ ವಿವಿಯ ಕುಲಪತಿ ಡಾ.ಎಸ್.ವಿ.ಸುರೇಶ್ ಪ್ರಾಸ್ತವಿಕ ಮಾತುಗಳನ್ನಾಡಿ, 2023-24ನೇ ಸಾಲಿನಲ್ಲಿ 1271 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗಿದೆ. 871 ವಿದ್ಯಾರ್ಥಿಗಳು ಸ್ನಾತಕ, 311 ಸ್ನಾತಕೋತ್ತರ, 89 ವಿದ್ಯಾರ್ಥಿಗಳಿಗೆ ಡಾಕ್ಟರೋಲ್ ಪದವಿಗಳನ್ನು ವಿವಿಧ ವಿಷಯಗಳಲ್ಲಿ ನೀಡಲಾಗಿದೆ.
ಸ್ನಾತಕೋತ್ತರದಲ್ಲಿ 62, ಸ್ನಾತಕದಲ್ಲಿ 58 ಮಂದಿ ಚಿನ್ನದ ಪದಕ ಪಡೆದಿದ್ದಾರೆ.ನಿವೃತ್ತ ಐಎಎಸ್ ಅಧಿಕಾರಿ ಸುಬ್ರಮಣಿಯನ್ ಹಾಗೂ ಇಫ್ಕೊ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.