ಬೆಂಗಳೂರು,ಆ.17– ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಿದ್ದಂತೆ ಭಾರೀ ಸಂಚಲನ ಸೃಷ್ಟಿಯಾಗಿದ್ದು, ರಾಜಕೀಯವಾಗಿ ಕಾಂಗ್ರೆಸ್‌ನಲ್ಲಿ ತಳಮಳ ಕಂಡುಬಂದಿದೆ. ಇಂದು ಬೆಳಗ್ಗೆ ಪ್ರಾಸಿಕ್ಯೂಷನ್‌ನ ಅನುಮತಿ ನೀಡಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸಂಪುಟದ ಎಲ್ಲ ಸಚಿವರು ತಮ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರಸ ರ್ಕಾರ ಅದರಲ್ಲೂ ಬಿಜೆಪಿ ನಾಯಕರು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಚಿವ ಸಂಪುಟ ಸಭೆಯ ಸಲಹೆ ಮೇರೆಗೆ ನಡೆದುಕೊಳ್ಳಬೇಕಿದ್ದ ರಾಜ್ಯಪಾಲರು ಸಂಪುಟದ ಸಲಹೆಯನ್ನು ಧಿಕ್ಕರಿಸಿ ಅನುಮತಿ ನೀಡಿದ್ದಾರೆ ಎಂಬ ಆಕ್ರೋಶಗಳು ಕೇಳಿಬಂದಿವೆ. ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು ವಜಾಗೊಳಿಸಬೇಕೆಂದು ಪ್ರತಿಪಾದಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬೆಂಬಲ ವ್ಯಕ್ತಪಡಿಸಿರುವ ಸಂಪುಟದ ಎಲ್ಲಾ ಸಚಿವರು ಹಾಗೂ ಕಾಂಗ್ರೆಸ್ ನಾಯಕರು, ಬಿಜೆಪಿ ವಿರುದ್ಧ ಕೆಂಡ ಕಾರಲಾರಂಭಿಸಿದ್ದಾರೆ.ಸದ್ಯದ ಪರಿಸ್ಥಿತಿ ನೋಡಿದರೆ ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾದರೂ ನಾಯಕತ್ವ ಬದಲಾವಣೆಯ ಚರ್ಚೆಗಳು ಅಪ್ರಸ್ತುತ ಎನ್ನುವ ಪರಿಸ್ಥಿತಿ ಇದೆ.
ಇಡೀ ಕಾಂಗ್ರೆಸ್ ಪಕ್ಷವೇ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಂತಿದ್ದು, ಬಿಜೆಪಿ ವಿರುದ್ಧ ರಾಜಕೀಯ ಪ್ರತಿ ಸಮರ ಆರಂಭಿಸುವ ಲಕ್ಷಣಗಳು ಕಂಡುಬರುತ್ತಿವೆ.ಆದರೂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆ ಆರಂಭವಾದರೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯ ಪ್ರಶ್ನೆಗಳು ಎದುರಾಗಲಿವೆ. ಹೀಗಾಗಿ ಸಿದ್ದರಾಮಯ್ಯ ಪಾಳೆಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕಾಂಗ್ರೆಸ್‌ನಲ್ಲಿ ಕೆಲವರಿಗೆ ಒಳಗೊಳಗೆ ಖುಷಿಯಾದರೆ, ಇನ್ನು ಕೆಲವರಿಗೆ ರಾಜಕೀಯವಾಗಿ ಬಿಜೆಪಿ ಮುನ್ನಡೆ ಸಾಧಿಸುತ್ತದೆ ಎಂಬ ದುಗುಡ ಕಂಡುಬರುತ್ತಿದೆ.