Thursday, November 21, 2024
Homeರಾಜ್ಯಎಲ್ಲರ ಚಿತ್ತ ರಾಜಭವನದತ್ತ : ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚಿದ ಕುತೂಹಲ

ಎಲ್ಲರ ಚಿತ್ತ ರಾಜಭವನದತ್ತ : ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚಿದ ಕುತೂಹಲ

ಬೆಂಗಳೂರು,ಆ.2- ಮುಡಾ ನಿವೇಶನ ಅಕ್ರಮ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಖಾಸಗಿ ದೂರಿನ ಕುರಿತು ರಾಜ್ಯಪಾಲ ಥಾವರ್‌ ಚಂದ್‌ ಗೆಲ್ಹೋಟ್‌ ಅವರು ತೆಗೆದುಕೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.

ಮುಖ್ಯಮಂತ್ರಿಗೆ ನೀಡಿರುವ ನೋಟೀಸ್‌‍ನ್ನು ಹಿಂಪಡೆಯಬೇಕೆಂದು ಸಚಿವ ಸಂಪು ಸಭೆಯಲ್ಲಿ ತೀರ್ಮಾನವನ್ನು ರಾಜ್ಯಪಾಲರು ಅಂಗೀಕರಿಸುತ್ತಾರೆಯೇ ಇಲ್ಲವೇ ತಿರಸ್ಕರಿಸುವರೇಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ನಿಂತಿವೆ. ಸಾಮಾನ್ಯವಾಗಿ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನು ಒಪ್ಪುವ ಸಾಧ್ಯತೆಗಳು ತೀರಾ ಕಡಿಮೆ.

ತಮಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿರುವ ನಿದರ್ಶನಗಳು ಸಾಕಷ್ಟಿವೆ.ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಗೆ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದೆಂದು ಸಚಿವ ಸಂಪುಟ ಸಭೆಒಂದು ಸಾಲಿನ ನಿರ್ಣಯವನ್ನು ಕೈಗೊಂಡಿದ್ದರೂ ರಾಜ್ಯಪಾಲರು ಅನುಮತಿ ನೀಡಿರುವ ಉದಾಹರಣೆಗಳು ಮುಂದಿವೆ.

ಇದೀಗ ನವದೆಹಲಿ ಪ್ರವಾಸದಲ್ಲಿರುವ ರಾಜ್ಯಪಾಲರು ಸೋಮವಾರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದ್ದು, ಅವರು ತೆಗೆದುಕೊಳ್ಳುವ ಮುಂದಿನ ನಿರ್ಧಾರ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.ಈ ಕ್ಷಣದವರೆಗೂ ರಾಜ್ಯಪಾಲರು ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಬಹಿರಂಗ ಹೇಳಿಕೆಯನ್ನು ಕೊಡದೆ ಎಲ್ಲವನ್ನೂ ಕಾಪಾಡಿಕೊಂಡು ಬಂದಿದ್ದಾರೆ. ಸರ್ಕಾರ ಶೋಕಾಸ್‌‍ ನೋಟಿಸ್‌‍ಗೆ ನೀಡುವ ಉತ್ತರವನ್ನು ನೋಡಿಕೊಂಡು ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಂಡೇ ಮುಂದಿನ ಹೆಜ್ಜೆ ಇಡಲಿದ್ದಾರೆ ಎಂದು ಗೊತ್ತಾಗಿದೆ.

ನ್ಯಾಯಾಲಯದ ತೀರ್ಪುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ತಜ್ಞರ ಸಲಹೆ ಮೇರೆಗೆ ಅವರು ತಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರದ್ವಾಜ್‌ ಮಾದರಿ ಆಗುವರೇ?:
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಕಾನೂನುಬಾಹಿರ ಡಿನೋಟಿಫಿಕೇಷನ್‌ಗಳ ಆರೋಪಗಳು ಕೇಳಿಬಂದಿದ್ದಾಗ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ್‌ ಅವರು ಸಂಪುಟದ ನಿರ್ಣಯವನ್ನೇ ಲೆಕ್ಕಿಸದೇ ವಿಚಾರಣೆಗೆ ಅನುಮತಿ ನೀಡಿದ್ದರು. 2004ರ ಸುಪ್ರೀಂಕೋರ್ಟ್‌ ತೀರ್ಪಿನ ಒಂದು ಅಂಶವನ್ನು ಕೋಟ್‌ ಮಾಡಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಕಾನೂನುಬಾಹಿರ ಡಿನೋಟಿಫಿಕೇಷನ್‌ಗಳ ಆರೋಪಗಳು ಬಂದಿದ್ದವು. ಈ ಆರೋಪಗಳ ಬಗ್ಗೆ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಲು ಮುಂದಾಗಿದ್ದ ವಕೀಲ ಸಿರಾಜಿನ್‌ ಬಾಷಾ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 2011ರಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಬಳಿಕ ಬಿಜೆಪಿ ಹೈಕಮಾಂಡ್‌ ಹಲವರಿಂದ ಕಾನೂನು ಸಲಹೆ ಪಡೆದುಕೊಂಡು ಬಿಎಸ್‌‍ವೈ ಸರ್ಕಾರದ ಮೂಲಕ ರಾಜ್ಯಪಾಲರಿಗೆ ಉತ್ತರಿಸಿತ್ತು. ಆದರೂ ಸಹ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.

ಬಳಿಕ ಸಂಪುಟ ಸಭೆ ನಡೆಸಿ ಪ್ರಾಸಿಕ್ಯೂಷನ್‌ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಸಂಪುಟ ನಿರ್ಣಯನ್ನು ಧಿಕ್ಕರಿಸಿ ಬಿಎಸ್‌‍ವೈ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದರು.

2004ರಲ್ಲಿ ಇಂತಹದೇ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಪೀಠವೊಂದು ಸ್ಪಷ್ಟವಾದ ತೀರ್ಪು ನೀಡಿದೆ. ರಾಜ್ಯಪಾಲರಾದವರು ಸಾಮಾನ್ಯವಾಗಿ ಸಚಿವರ ಸಲಹೆ, ಅಭಿಪ್ರಾಯವನ್ನು ಪಡೆದು ಕಾರ್ಯ ನಿರ್ವಹಿಸಬೇಕು ಹಾಗೂ ನಿರ್ಧಾರ ಪ್ರಕಟಿಸಬೇಕೇ ಹೊರತು ಅವರ ವಿವೇಚನೆಯಿಂದ ಅಲ್ಲ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ರಾಜ್ಯಪಾಲರು ಸ್ವಂತ ವಿವೇಚನೆಯಿಂದ ತೀರ್ಮಾನ ತೆಗೆದುಕೊಳ್ಳುವುದು ಸಮಂಜಸ ಎನಿಸುತ್ತದೆ ಎಂದು ತೀರ್ಪು ನೀಡಿತ್ತು.

ಈ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ್‌ ಇದೇ ತೀರ್ಪನ್ನು ಆಧರಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌‍ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಇತಿಹಾಸ.

ಸಾಂವಿಧಾನಿಕವಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟಿರುವ ನಿಯಮಗಳನ್ನು ರಾಜ್ಯಪಾಲರು ಪಾಲಿಸಲೇಬೇಕು. ಅನಿರ್ದಿಷ್ಟ ಕಾಲ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವ ಆಯ್ಕೆಯನ್ನು ಸಂವಿಧಾನ ನೀಡಿಲ್ಲವಾದ್ದರಿಂದ ಸಂವಿಧಾನದ ಅನ್ವಯ ಮುಖ್ಯಮಂತ್ರಿ ಅಥವಾ ಸಚಿವ ಸಂಪುಟ ಸಲಹೆಗಳನ್ನು ಆಧರಿಸಿಯೇ ರಾಜ್ಯಪಾಲರು ಅಧಿಕಾರವನ್ನು ಚಲಾಯಿಸಬಹುದಾಗಿದೆ.

ಆದರೆ ಈ ಹಿಂದೆ ಯಡಿಯೂರಪ್ಪ ವಿರುದ್ಧ ವಿಚರಣೆಗೆ ಅನುಮತಿ ವಿರುದ್ಧ ಸಂಪುಟ ಸಭೆ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದರೂ ಸಹ ಅದನ್ನು ಲೆಕ್ಕಿಸಿದೇ ಹಂಸರಾಜ್‌ ಭಾರದ್ವಾಜ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.

RELATED ARTICLES

Latest News