ಬೆಂಗಳೂರು, ಅ.1- ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಅರಣ್ಯ ಇಲಾಖೆ ಮಾಡುತ್ತಿರುವ ಕಾರ್ಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಭವನದಲ್ಲಿಂದು ಅರಣ್ಯ ಇಲಾಖೆ 69ನೇ ವನ್ಯಜೀವಿ ಸಪ್ತಾಹದ ಬಗ್ಗೆ ಜನಜಾಗೃತಿ ಮೂಡಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಂಟೇಜ್ ವಾಹನ ಯಾನಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಮಾತನಾಡಿದ ಅವರು, ತಾವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರ ಸಂಗ್ರಾಹಾಲಯದಲ್ಲಿ ಹಳೆಯ ವಾಹನಗಳನ್ನು ನೋಡಿದ್ದೆ.
ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸಲು ಹಳೆಯ ವಾಹನ ಯಾನ ಆಯೋಜಿಸಿರುವುದಕ್ಕೆ ಸಂತಸ ತಂದಿದೆ ಎಂದರು.ಪ್ರಕೃತಿ ಪರಿಸರ ಉಳಿಸುವ ಅಗತ್ಯವನ್ನು ರಾಜ್ಯಪಾಲರು ಪ್ರತಿಪಾದಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಮಾದರಿಯಾಗಿದೆ. 6395 ಆನೆಗಳು ರಾಜ್ಯದಲ್ಲಿದ್ದು, ದೇಶದಲ್ಲೇ ನಾವು ಗಜ ಗಣತಿಯಲ್ಲಿ ಮೊದಲಿಗರಾಗಿದ್ದೇವೆ ಎಂದರು.
ಸಿಖ್ ಸಮುದಾಯ ಸಮಸ್ಯೆ ನಿವಾರಣೆಗೆ ಪ್ರಧಾನಿ ಮೋದಿ ಆದ್ಯತೆ : ಜೈಶಂಕರ್
ಅದೇ ರೀತಿ ಹುಲಿ ಗಣತಿಯಲ್ಲೂ ರಾಜ್ಯ ನಂ.2 ಸ್ಥಾನ ಪಡೆದಿದೆ. ಇಲಾಖೆಯ ಹಸಿರು ಹೊದಿಕೆ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ನಗರ ಪ್ರದೇಶಗಳಲ್ಲಿ ಕೂಡ ಜನರು ನೆಮ್ಮದಿಯಿಂದ ಉಸಿರಾಡಲು ಸಾಮಾಜಿಕ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಜುಲೈ 1ರಿಂದ ಇಲ್ಲಿಯವರೆಗೆ 4 ಕೋಟಿ 75 ಲಕ್ಷ ಸಸಿಗಳನ್ನು ನೆಡಲಾಗಿದೆ. ಮುಂದಿನ ಒಂದು ವಾರದಲ್ಲಿ ಉಳಿದ 25 ಲಕ್ಷ ಸಸಿ ನೆಟ್ಟು ಈ ವರ್ಷ 5 ಕೋಟಿ ಗಿಡ ನೆಡಬೇಕು ಎಂಬ ಗುರಿಯನ್ನು ಪೂರೈಸಲಾಗುವುದು ಎಂದರು.
ಹಳೆಯ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟು, ಅವುಗಳನ್ನು ಸಂಚಾರ ಯೋಗ್ಯವಾಗಿರುವಂತೆ ನಿರ್ವಹಣೆ ಮಾಡುತ್ತಿರುವ ಹಳೆಯ ವಾಹನಗಳ ಮಾಲೀಕರಿಗೆ ಅವರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.