Siddaramaiah :
ಬೆಂಗಳೂರು, ಮಾ.3- ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ವಿಧಾನಸಭೆ ಸಭಾಂಗಣಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಾಗಿ ಕೆಲಕಾಲ ಕಾಯಬೇಕಾದ ಸಂದರ್ಭ ಎದುರಾಯಿತು.
ಮುಖ್ಯಮಂತ್ರಿಗಾಗಿ ರಾಜ್ಯಪಾಲರು ಕಾಯುತ್ತಿರುವುದನ್ನು ಗಮನಿಸಿದ ಬಿಜೆಪಿ ಶಾಸಕ ಚನ್ನಬಸಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿ ಅಪಮಾನ ಮಾಡುತ್ತೀರ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು, ಮಾನವೀಯತೆ ಇಲ್ಲ. ಎಲ್ಲದರೂ ರಾಜಕಾರಣ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಈ ಹಂತದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪದ ಮಾತುಗಳು ಕೇಳಿಬಂದವು. ಅಷ್ಟರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನ ಪ್ರವೇಶ ಮಾಡಿದರು. ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಪಾಲರನ್ನು ಸ್ವಾಗತಿಸಿದ ಮುಖ್ಯಮಂತ್ರಿ ತಮ್ಮ ಮಂಡಿ ನೋವಿನ ಸಮಸ್ಯೆಯಿಂದಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ವೀಲ್ಡ್ ಚೇರ್ ಮೂಲಕ ಸದನ ಪ್ರವೇಶ ಮಾಡಲು ವಿಳಂಬವಾಯಿತು.
ಇದಕ್ಕೂ ಮುನ್ನ ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಎಚ್.ಕೆ.ಪಾಟೀಲ್ ಉಭಯ ಸದನಗಳ ಕಾರ್ಯದರ್ಶಿಗಳು ಸ್ವಾಗತಕೋರಿದರು.
ವಿಧಾನಸೌಧದ ಮುಂಭಾಗದಲ್ಲಿರುವ ಭವ್ಯ ಮೆಟ್ಟಿಲುಗಳ ಮೇಲೆ ಪೊಲೀಸ್ ಮಂಗಳವಾದ್ಯದೊಂದಿಗೆ ಕೆಂಪು ಹಾಸಿನ ಮೇಲೆ ಭವ್ಯ ಮೆರವಣಿಗೆ ಮೂಲಕ ರಾಜ್ಯಪಾಲರನ್ನು ವಿಧಾನಸಭೆ ಸಭಾಂಗಣಕ್ಕೆ ತರಲಾಯಿತು.
ರಾಜ್ಯಪಾಲರು ವಿಧಾನಸಭಾಧ್ಯಕ್ಷರ ಪೀಠಕ್ಕೆ ಆಗಮಿಸುತ್ತಿದ್ದಂತೆ ರಾಷ್ಟ್ರಗೀತೆಯೊಂದಿಗೆ ಜಂಟಿ ಅಧಿವೇಶನ ಆರಂಭಗೊಂಡಿತು. ರಾಜ್ಯಪಾಲರು ಹಿಂದಿಯಲ್ಲಿ ತಮ್ಮ ಭಾಷಣವನ್ನು ಓದಲಾರಂಭಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮೌನ್ಯವಾಗಿ ಆಲಿಸುತ್ತಿದ್ದರು.