Wednesday, April 30, 2025
Homeರಾಜ್ಯ18 ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸುವ ಕುರಿತು ಸಿಎಂ, ಸ್ಪೀಕರ್‌ ಅವರಿಗೆ ರಾಜ್ಯಪಾಲರ ಪಾತ್ರ

18 ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸುವ ಕುರಿತು ಸಿಎಂ, ಸ್ಪೀಕರ್‌ ಅವರಿಗೆ ರಾಜ್ಯಪಾಲರ ಪಾತ್ರ

Governor's role to CM, Speaker regarding lifting of suspension of 18 BJP MLAs

ಬೆಂಗಳೂರು,ಏ.30-18 ಮಂದಿ ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸುವ ಸಂಬಂಧ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್‌ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದಿದ್ದಾರೆ.

ವಿಧಾನಸಭೆಯ 18 ಬಿಜೆಪಿ ಸದಸ್ಯರ (ಶಾಸಕರು) ಅಮಾನತು ರದ್ದುಗೊಳಿಸುವ ಮನವಿಯನ್ನು ಸಕಾರಾತಕವಾಗಿ ಪರಿಗಣಿಸುವಂತೆ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಮತ್ತು ಸ್ಪೀಕರ್‌ಗೆ ಬರೆದ ಪ್ರತ್ಯೇಕ ಪತ್ರಗಳಲ್ಲಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಮೂಲ ತತ್ವಗಳನ್ನು ಎತ್ತಿಹಿಡಿಯಲು ಮತ್ತು ಅಮಾನತುಗೊಂಡ ಶಾಸಕರು ಮತ್ತೆ ಜನ ಪ್ರತಿನಿಧಿಗಳಾಗಿ ತಮ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡುವಂತಹ ನಿರ್ಧಾರ ತೆಗೆದುಕೊಳ್ಳಬೇಕೆಂಬ ಆಸೆಯನ್ನು ರಾಜ್ಯಪಾಲರು ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯಪಾಲರನ್ನು ಭೇಟಿಯಾಗಿ ಶಾಸಕರ ಅಮಾನತು ಸಂಬಂಧ ಸೋಮವಾರ ದೂರು ನೀಡಿದ್ದರು. ಅಮಾನತು ತೆರವುಗೊಳಿಸಿ ಶಾಸಕರಿಗೆ ತಮ ಅಧಿಕಾರ ಚಲಾಯಿಸಲು ಅನುವು ಮಾಡಿಕೊಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ ನೀಡಿತ್ತು. ಇದೀಗ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ, ಸ್ಪೀಕರ್‌ ಯು.ಟಿ.ಖಾದರ್‌ಗೆ ಪತ್ರ ಬರೆದು, 18 ಬಿಜೆಪಿ ಶಾಸಕರ ಅಮಾನತು ತೆರವುಗೊಳಿಸುವಂತೆ ಸಲಹೆ ನೀಡಿದ್ದಾರೆ.

ಉಭಯ ಸದನದ ಬಿಜೆಪಿ ವಿಪಕ್ಷ ನಾಯಕರು ನನ್ನನ್ನು ಭೇಟಿಯಾಗಿ 18 ಬಿಜೆಪಿ ಶಾಸಕರ ಅಮಾನತು ಸಂಬಂಧ ಮನವಿ ಪತ್ರ ಸಲ್ಲಿಸಿದ್ದಾರೆ. 18 ಶಾಸಕರ ಅಮಾನತು ಆದೇಶವನ್ನು ಮರುಪರಿಗಣಿಸುವ ಅವರ ಕೋರಿಕೆಯನ್ನು ಸ್ಪೀಕರ್‌ ಹಾಗೂ ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆ ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ಹಾಗೂ ಜನಪ್ರತಿನಿಧಿಯಾಗಿ ಅಮಾನತುಗೊಂಡ ಶಾಸಕರುಗಳು ತಮ ಜವಾಬ್ದಾರಿಯನ್ನು ಪುನರಾರಂಭಿಸಲು ಅನುವು ಮಾಡಿಕೊಡಲು ಬಿಜೆಪಿ ನಿಯೋಗದ ಮನವಿಗೆ ಸಕಾರಾತಕವಾಗಿ ಸ್ಪಂದಿಸಿ, 18 ಸದಸ್ಯರ ಅಮಾನತು ಆದೇಶ ರದ್ದತಿಗೆ ಅಗತ್ಯ ಕ್ರಮ ಕೈಗೊಳ್ಳಲು ಬಯಸುತ್ತೇನೆ. ಈ ಸಂಬಂಧ ಕೈಗೊಳ್ಳಲಾದ ಕ್ರಮವನ್ನು ನನ್ನ ಗಮನಕ್ಕೆ ತನ್ನಿ ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

ಏನಿದು ಪ್ರಕರಣ?
ಕಳೆದ ಮಾರ್ಚ್‌ 21 ರಂದು ಅಭೂತಪೂರ್ವ ಕ್ರಮದಲ್ಲಿ, ಅಶಿಸ್ತು ಮತ್ತು ಸ್ಪೀಕರ್‌ಗೆ ಅಗೌರವ ತೋರಿದ್ದಕ್ಕಾಗಿ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಸಭೆಯಿಂದ ಹೊರಹೋಗಲು ನಿರಾಕರಿಸಿದ ನಂತರ ಮಾರ್ಷಲ್‌ಗಳು ಅವರನ್ನು ವಿಧಾನಸಭೆಯಿಂದ ಬಲವಂತವಾಗಿ ಹೊರಹಾಕಿದ್ದರು.

ವಿಧಾನಸಭೆ ಮತ್ತು ಪರಿಷತ್ತಿನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು ಸಲ್ಲಿಸಿದ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ, ರಾಜ್ಯಪಾಲರು ತಮ ಪತ್ರದಲ್ಲಿ, ಪ್ರಮುಖ ವಿರೋಧ ಪಕ್ಷಕ್ಕೆ ಸೇರಿದ 18 ಶಾಸಕರ ಮೇಲೆ ವಿಧಿಸಲಾದ ಅಮಾನತು ಆದೇಶವನ್ನು ಮರುಪರಿಶೀಲಿಸುವಂತೆ ತಮ ಪ್ರಾತಿನಿಧ್ಯವನ್ನು ಸ್ಪೀಕರ್‌ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸುವಂತೆ ವಿನಂತಿಸಿರುವುದಾಗಿ ತಿಳಿಸಿದ್ದರು.

ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಮೂಲ ತತ್ವಗಳನ್ನು ಎತ್ತಿಹಿಡಿಯಲು ಮತ್ತು ಅಮಾನತುಗೊಂಡ ಸದಸ್ಯರು ಜನ ಪ್ರತಿನಿಧಿಗಳಾಗಿ ತಮ ಜವಾಬ್ದಾರಿಗಳನ್ನು ಪುನರಾರಂಭಿಸಲು, ಅವರ ವಿನಂತಿಯನ್ನು ಸಕಾರಾತಕವಾಗಿ ಪರಿಗಣಿಸಬೇಕೆಂದು ಮತ್ತು ಅಮಾನತು ರದ್ದುಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಏಪ್ರಿಲ್‌ 28 ರಂದು ರಾಜ್ಯಪಾಲರು ಬರೆದ ಪತ್ರದಲ್ಲಿ ತಿಳಿಸಲಾಗಿತ್ತು.

ಈ ಸಂಬಂಧ ತೆಗೆದುಕೊಂಡ ಕ್ರಮಗಳ ವಿವರಗಳನ್ನು ನನ್ನ ಗಮನಕ್ಕೆ ತರಬಹುದು ಎಂದು ಗೆಹ್ಲೋಟ್‌ ಹೇಳಿದ್ದಾರೆ. ವಿಧಾನಸಭೆಯ ಬಜೆಟ್‌ ಅಧಿವೇಶನದ ಕೊನೆಯ ದಿನದಂದು ಬಿಜೆಪಿ ಶಾಸಕರು ಬೃಹತ್‌ ಪ್ರತಿಭಟನೆ ನಡೆಸಿದಾಗ ಅಮಾನತುಗೊಳಿಸಿರುವ ಘಟನೆ ನಡೆದಿತ್ತು.

ಸದನದಲ್ಲಿ ವಿಪಕ್ಷ ನಾಯಕರು ಸಾರ್ವಜನಿಕ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿಯನ್ನು ವಿರೋಧಿಸುತ್ತಿದ್ದರು ಮತ್ತು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಒಳಗೊಂಡ ಹನಿಟ್ರ್ಯಾಪ್‌ ಪ್ರಯತ್ನದ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದರು. ವಿಧಾನಸಭೆಯೊಳಗೆ ಪ್ರತಿಭಟನೆಯ ಸಮಯದಲ್ಲಿ, ಕೆಲವು ಬಿಜೆಪಿ ಶಾಸಕರು ಸ್ಪೀಕರ್‌ ಅವರ ವೇದಿಕೆಯ ಮೇಲೆ ಹತ್ತಿ ಅವರ ಕುರ್ಚಿಯನ್ನು ಸುತ್ತುವರೆದರು, ಆದರೆ ಇತರರು ಸದನದ ಬಾವಿಯಿಂದ ಕಾಗದಗಳನ್ನು ಎಸೆದರು. ಮಾರ್ಷಲ್‌ಗಳು ಮಧ್ಯಪ್ರವೇಶಿಸಿ ಶಾಸಕರನ್ನು ಬಲವಂತವಾಗಿ ಹೊರಹಾಕಿದ್ದರು.

ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌‍, ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್‌ ನಾರಾಯಣ್‌‍, ಎಸ್‌‍.ಆರ್‌.ವಿಶ್ವನಾಥ್‌, ಬಿ.ಎ.ಬಸವರಾಜು, ಎಂ.ಆರ್‌. ಪಾಟೀಲ್‌‍, ಚನ್ನಬಸಪ್ಪ, ಬಿ. ಸುರೇಶ್‌ ಗೌಡ, ಉಮಾನಾಥ ಕೋಟ್ಯಾನ್‌, ಶರಣು ಸಲಗರ, ಡಾ ಶೈಲೇಂದ್ರ ಬೆಲ್ದಾಳೆ, ಸಿ.ಕೆ.ರಾಮಮೂರ್ತಿ, ಯಶ್ಪಾಲ್‌ ಸುವರ್ಣ, ಡಿ. ಲಮಾಣಿ, ಮುನಿರತ್ನ ಮತ್ತು ಬಸವರಾಜ ಮತ್ತಿಮೂಡ್‌ ಅಮಾನತುಗೊಂಡಿದ್ದರು.

RELATED ARTICLES

Latest News