ನವದೆಹಲಿ, ಮೇ 9 – ದೇಶದ ವಿಮಾನ ನಿಲ್ದಾಣಗಳಲ್ಲಿ ಜಾಗೃತ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ಎಲ್ಲಾ ವಿಮಾನಗಳ ತಪಾಸಣೆಯನ್ನು ಕಡ್ಡಾಯಗೊಳಿಸಿದೆ, ವಿಮಾನ ನಿಲ್ದಾಣಗಳ ಟರ್ಮಿನಲ್ ಕಟ್ಟಡಗಳಲ್ಲಿ ಸಂದರ್ಶಕರನ್ನು ನಿಷೇಧಿಸಿದೆ ಮತ್ತು ಒಟ್ಟಾರೆ ಭದ್ರತೆಯನ್ನು ಹೆಚ್ಚಿಸಿದೆ.
ದೆಹಲಿ ವಿಮಾನ ನಿಲ್ದಾಣದ ವಿಮಾನ ಸೇವೆ ಕಾರ್ಯಾಚರಣೆಗಳು ಸಾಮಾನ್ಯವಾಗಿವೆ. ಆದಾಗ್ಯೂ, ವಿಕಸನಗೊಳ್ಳುತ್ತಿರುವ ವಾಯುಪ್ರದೇಶದ ಪರಿಸ್ಥಿತಿಗಳು ಮತ್ತು ಹೆಚ್ಚಿದ ಭದ್ರತಾ ಕ್ರಮಗಳಿಂದಾಗಿ ಕೆಲವು ವಿಮಾನ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಡಿಐಎಎಲ್ ತಿಳಿಸಿದೆ.
ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್) ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಐಜಿಐಎ) ನಿರ್ವಹಿಸುತ್ತದೆ.
ಈ ನಡುವೆ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮತ್ತು ಇತರ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ ನಂತರ ದೇಶೀಯ ವಿಮಾನಗಳು ಹೊರಡುವ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪಲು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಕೇಳಿಕೊಂಡಿವೆ.
ಪ್ರಯಾಣಿಕರು ಎಲ್ಲಾ ಹ್ಯಾಂಡ್ ಮತ್ತು ಚೆಕ್ -ಇನ್ ಬ್ಯಾಗೇಜ್ ನಿಯಮಗಳನ್ನು ಪಾಲಿಸುವಂತೆ ಮತ್ತು ಸುಗಮ ಸೌಲಭ್ಯಕ್ಕಾಗಿ ಭದ್ರತೆ ಮತ್ತು ವಿಮಾನಯಾನ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸೂಚಿಸಿದೆ. ಪ್ರಸ್ತುತ ದೇಶದ ವಿವಿಧ ಭಾಗಗಳಲ್ಲಿ ಸುಮಾರು 27 ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.ದೆಹಲಿ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಕನಿಷ್ಠ 90 ವಿಮಾನಗಳನ್ನು ರದ್ದುಗೊಳಿಸಲಾಗಿದೆ.