ನವದೆಹಲಿ,ಮೇ24- ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡಲಿದೆ. ಮೊದಲ ಏರಿಕೆ ಜನವರಿ 1ರಿಂದ ಅನ್ವಯವಾಗುತ್ತದೆ. 2ನೇ ಏರಿಕೆ ಜುಲೈ ತಿಂಗಳಿನಿಂದ ಅನ್ವಯವಾಗುತ್ತದೆ. ಕೇಂದ್ರ ಡಿಎ ಏರಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರ ಕೂಡ ಡಿಎ ಹೆಚ್ಚಳ ಮಾಡುತ್ತದೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಬಜೆಟ್ ಮಂಡನೆ ಮಾಡಿದ ಬಳಿಕ ಕೇಂದ್ರ ಸರ್ಕಾರಿ ನೌಕರರಿಗೆ ಜುಲೈ 2024ರಿಂದ ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗಲಿದೆ. ಈ ವರ್ಷದ ಜನವರಿಯಲ್ಲಿ ಸರ್ಕಾರ ಡಿಎಯನ್ನು ಶೇ.4ರಷ್ಟು ಏರಿಕೆ ಮಾಡಿತ್ತು. ಇದರಿಂದಾಗಿ ಡಿಎ ಶೇ 50ರಷ್ಟಾಗಿತ್ತು.
ಲೋಕಸಭೆ ಚುನಾವಣೆ ಮುಗಿದು ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಶೇ.5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ಜುಲೈ 1ರಿಂದ ಜಾರಿಗೆ ಬರುವಂತೆ ಡಿಎ ಶೇ 55ರಷ್ಟಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್‌ನಲ್ಲಿ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ತೀರ್ಮಾನ ಕೈಗೊಳ್ಳಲಿದೆ. ಆದರೆ ಡಿಎ ಎಷ್ಟು ಏರಿಕೆಯಾದರೂ ಸಹ ಅದು ಜುಲೈ 2024ರಿಂದ ಪೂರ್ವಾನ್ವಯವಾಗುವಂತೆ ಏರಿಕೆಯಾಗುತ್ತದೆ. ಜನವರಿ 2024ರಲ್ಲಿ ಡಿಎ ಹೆಚ್ಚಳ ಮಾಡಿದ ಬಳಿಕ ಕೇಂದ್ರ ಸರ್ಕಾರಿ ನೌಕರರು ಶೇ.50ರಷ್ಟು ಡಿಎ ಪಡೆಯುತ್ತಿದ್ದಾರೆ.
ಕಳೆದ ಹಲವು ವರ್ಷಗಳ ದಾಖಲೆಗಳನ್ನು ನೋಡಿದರೆ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಸೆಪ್ಟೆಂಬರ್ನಲ್ಲಿ ತೀರ್ಮಾನ ಕೈಗೊಳ್ಳುತ್ತದೆ. ಅದು ಜುಲೈನಿಂದ ಜಾರಿಗೆ ಬರುವಂತೆ ಆದೇಶವನ್ನು ಹೊರಡಿಸಲಾಗುತ್ತದೆ. ಆದ್ದರಿಂದ ಈಗ ಕೇಂದ್ರ ಸರ್ಕಾರಿ ನೌಕರರು ಹೊಸ ಸರ್ಕಾರ ಎಷ್ಟು ಡಿಎ ಹೆಚ್ಚಳ ಮಾಡಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಉಳಿದ 6 ಭತ್ಯೆಗಳು ಸಹ ಏರಿಕೆಯಾಗಲಿದೆ. ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಏಪ್ರಿಲ್ 2, 2024ರ ಸೂಚನೆಯಂತೆ ಭತ್ಯೆಗಳನ್ನು ಬಿಡುಗಡೆ ಮಾಡುವಂತೆ ಹೇಳಿದೆ. 2016ರ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಭತ್ಯೆಗಳನ್ನು ನೀಡಲಾಗುತ್ತದೆ.
ಈ ಭತ್ಯೆಗಳ ಏರಿಕೆ ರೈಲ್ವೆ ಉದ್ಯೋಗಿಗಳು, ರಕ್ಷಣಾ ಪಡೆಯ ಉದ್ಯೋಗಿಗಳಿಗೂ ಅನ್ವಯವಾಗುತ್ತದೆ. ಈ ಭತ್ಯೆಗಳಲ್ಲಿ ಡಿಎ, ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ಪ್ರಭಾರ ಭತ್ಯೆ, ಉನ್ನತ ಶಿಕ್ಷಣ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ ಮುಂತಾದವು ಸೇರಿವೆ. ಯಾವಾಗ ಡಿಎ ಶೇ 50ರಷ್ಟಾಯಿತೋ ಆಗ ಸರ್ಕಾರ ಹೆಚ್‌ಎಆರ್ ಅನ್ನು ಪರಿಷ್ಕರಣೆ ಮಾಡಿತು.
ಇದು ಮೂಲ ವೇತನದ ಶೇ.30, 20 ಮತ್ತು 10ರಷ್ಟು ನಗರದ ವರ್ಗೀಕರಣದಂತೆ ಆಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಯಾವ ವರ್ಗದ ನಗರದಲ್ಲಿ ವಾಸಿಸುತ್ತಾರೆ ಎಂಬುದರ ಮೇಲೆ ಹೆಚ್‌ಆರ್‌ಎ ನಿರ್ಧರಿತವಾಗುತ್ತದೆ. ಪ್ರತಿ ಬಾರಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ರಾಜ್ಯ ಸರ್ಕಾರಗಳು ಸಹ ತಮ್ಮ ನೌಕರರಿಗೆ ಡಿಎ ಹೆಚ್ಚಳ ಮಾಡುತ್ತವೆ. ಕರ್ನಾಟಕದಲ್ಲಿ ಸರ್ಕಾರಿ ನೌಕರರು ಸರ್ಕಾರ ಸ್ವೀಕಾರ ಮಾಡಿರುವ ಕೆ.ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೊಳಿಸಲಿ ಎಂದು ಕಾದು ಕುಳಿತಿದ್ದಾರೆ.
ಮಾರ್ಚ್ 2024ರಲ್ಲಿ ಸರ್ಕಾರ ಆಯೋಗದಿಂದ ವರದಿ ಸ್ವೀಕಾರ ಮಾಡಿದೆ. ಆದರೆ ಅಂದೇ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರದಿ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜೂನ್ 6ರ ತನಕ ಲೋಕಸಭೆ ಮಾದರಿ ಚುನಾವಣಾ ನೀತಿ ಸಂಹಿತೆ, ಜೂನ್ 12ರ ತನಕ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಕರ್ನಾಟಕದಲ್ಲಿ ಜಾರಿಯಲ್ಲಿರಲಿದೆ. ಬಳಿಕ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಿದೆ.