ಬೆಂಗಳೂರು,ಆ.10- ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಮಾದರಿಯಲ್ಲಿಯೇ ಬಿಎ, ಬಿಎಸ್ಸಿ, ಬಿಕಾಂ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳಿಗೂ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೀಟು ಹಂಚಿಕೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಕ್ರಮದಿಂದ ಖಾಸಗಿ ಪದವಿ ಕಾಲೇಜುಗಳಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಇನ್ನು ಮುಂದೆ ಪ್ರತಿಷ್ಠಿತ ಖಾಸಗಿ ಪದವಿ ಕಾಲೇಜುಗಳಲ್ಲಿಯೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟು ದೊರೆಯಲಿದೆ.
ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟು ಹಂಚಿಕೆ ಮಾದರಿಯಲ್ಲಿ ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.40 ರಷ್ಟು ಸರ್ಕಾರಿ ಕೋಟಾದಡಿ ಯಲ್ಲಿ ಪದವಿ ಸೀಟುಗಳನ್ನು ಪಡೆಯಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಹಾಗಾಗಿ ಶೇ.40 ರಷ್ಟು ಸರ್ಕಾರಿ ಸೀಟುಗಳನ್ನು ವಿದ್ಯಾರ್ಥಿಗಳು ಈ ವರ್ಷದಿಂದಲೇ ಪಡೆಯಬಹುದಾಗಿದೆ. ಖಾಸಗಿ ಕಾಲೇಜುಗಳಲ್ಲಿ ಪದವಿ ಪಡೆಯಲು ಉದ್ದೇಶಿಸಿದ್ದ ವಿದ್ಯಾರ್ಥಿಗಳಿಗೆ ಇದು ಖುಷಿ ವಿಷಯವಾಗಿದೆ. ಈ ಸೀಟುಗಳನ್ನು ಕೆಇಎ ಅಥವಾ ಕಾಮೆಡ್-ಕೆ ಮಾದರಿಯಲ್ಲಿ ಹಂಚಿಕೆ ಮಾಡಲು ಚಿಂತನೆ ನಡೆಸಿದೆ.
ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಅವರು ಸರ್ಕಾರಿ ಕಾಲೇಜುಗಳನ್ನು ಅವಲಂಬಿಸಬೇಕಾಗಿತ್ತು. ಉಳ್ಳವರು ಮಾತ್ರ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿಗೆ ಪ್ರವೇಶ ಪಡೆಯುತ್ತಿದ್ದರು.
ಕೇಳಿದಷ್ಟು ಡೊನೇಷನ್ ನೀಡಿ ಪ್ರವೇಶ ಪಡೆದು ಉನ್ನತ ಹುದ್ದೆಗಳಿಗೆ ಹೋಗುತ್ತಿದ್ದರು. ಈಗ ಸರ್ಕಾರ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಮೂಲಕ ಪ್ರವೇಶ ಪಡೆಯಬಹುದಾಗಿದೆ.
ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು ಶೇ.100 ಕ್ಕೆ 100 ರಷ್ಟು ಮ್ಯಾನೇಜ್‌ಮೆಂಟ್ ಕೋಟಾದಡಿ ದಾಖಲಾತಿ ಮಾಡಿಕೊಳ್ಳುತ್ತಿದ್ದರು. ಖಾಸಗಿ ಕೋಟಾದಡಿಯೇ ದಾಖಲಾತಿ ನಡೆಯುತ್ತಿತ್ತು. ಹೀಗಾಗಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲಾಗದೇ ಪರದಾಡುತ್ತಿದ್ದರು. ಸರ್ಕಾರದ ಈ ಕ್ರಮದಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.