ನವದೆಹಲಿ, ಫೆ.6- ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ನೆಮ್ಮದಿ ನೀಡುವ ಸುದ್ದಿಯೊಂದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೋಲ್ ವಿಚಾರದಲ್ಲಿ ವಾಹನ ಸವಾರರಿಗೆ ಆಗುವ ಕಿರಿಕಿರಿ ತಪ್ಪಿಸಲು ಮುಂದಾಗಿದೆ. ಆದ್ದರಿಂದ ವಾರ್ಷಿಕ ಮತ್ತು ಜೀವಿತಾವಧಿ ಪಾಸುಗಳನ್ನು ವಿತರಣೆ ಮಾಡಲು ಮುಂದಾಗಿದೆ. ಈ ಪಾಸುಗಳು ಶೀಘ್ರವೇ ಬಿಡುಗಡೆಯಾಗಲಿವೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸೂಚನೆಯಂತೆ ಅಧಿಕಾರಿಗಳು ಈ ಕುರಿತು ಪ್ರಸ್ತಾವನೆ ಸಿದ್ಧಗೊಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಈ ಕುರಿತು ಅಂತಿಮ ತೀರ್ಮಾನ ಕೈಗೊಂಡು, ಪಾಸುಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಈ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಒಂದು ಬಾರಿ ಹಣವನ್ನು ಪಾವತಿ ಮಾಡುವ ಮೂಲಕ ವಾರ್ಷಿಕ ಟೋಲ್ ಪಾಸುಗಳನ್ನು ಪಡೆಯಬಹುದು. ಪ್ರತಿನಿತ್ಯ ಸಂಚಾರ ನಡೆಸುವ ಮಧ್ಯಮ ವರ್ಗದ ಜನರು ಅಥವಾ ಖಾಸಗಿ ಕಾರುಗಳ ಮಾಲೀಕರಿಗೆ ಅನುಕೂಲವಾಗುವಂತೆ ಈ ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಖಾಸಗಿ ಕಾರುಗಳ ಮಾಲೀಕರು, ಪ್ರತಿನಿತ್ಯ ಸಂಚಾರ ನಡೆಸುವ ವಾಹನ ಸವಾರರು ವಾರ್ಷಿಕ ಪಾಸು ಹಾಗೂ ಜೀವಿತಾವಧಿ ಪಾಸು (15 ವರ್ಷ) ಪಡೆಯಲು ಆಯ್ಕೆಯನ್ನು ನೀಡಲಾಗುತ್ತದೆ. ವಾರ್ಷಿಕ ಪಾಸಿನ ದರ 3000 ರೂ.ಗಳು ಮತ್ತು ಜೀವಿತಾವಧಿ ಪಾಸುಗಳ ದರಗಳು 30,000 ಎಂದು ನಿಗದಿ ಮಾಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಈ ಕುರಿತು ಪ್ರಸ್ತಾವನೆ ಸಿದ್ಧಗೊಳಿಸಿದ್ದಾರೆ.
ಆದರೆ ಇದು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸರ್ಕಾರದ ಅಂತಿಮ ತಿರ್ಮಾನಕ್ಕೆ ಒಪ್ಪಿಗೆ ಸಿಕ್ಕಿಲ್ಲ. ವಾರ್ಷಿಕ ಮತ್ತು ಜೀವಿತಾವಧಿ ಪಾಸುಗಳನ್ನು ಪಡೆದ ವಾಹನ ಸವಾರರು ಪ್ರತ್ಯೇಕವಾಗಿ ಯಾವುದೇ ಹೆಚ್ಚುವರಿ ಪಾಸುಗಳನ್ನು ಪಡೆಯುವ ಅಗತ್ಯವಿಲ್ಲ. ವಾಹನ ಸವಾರರ ಫಾಸ್ಟ್ ಟ್ಯಾಗ್ ಖಾತೆಗೆ ಇದನ್ನು ಸೇರಿಸಲಾಗುತ್ತದೆ.
ಆದ್ದರಿಂದ ಈ ಮಾದರಿ ಪಾಸುಗಳು ಸವಾರರಿಗೆ ಅನುಕೂಲ ಮಾಡಿಕೊಡಲಿವೆ ಎಂದು ಅಂದಾಜಿಸಲಾಗಿದೆ. ಹಾಲಿ ಮಾಸಿಕ ಟೋಲ್ ಪಾಸುಗಳು ಜಾರಿಯಲ್ಲಿವೆ. ಸುಮಾರು 340 ರೂ. ದರ ಇದಕ್ಕೆ ನಿಗದಿಯಾಗಿದ್ದು, ವಾರ್ಷಿಕವಾಗಿ ಇದನ್ನು ಖರೀದಿ ಮಾಡಲು ವಾಹನ ಸವಾರರು 4,080 ರೂ. ಪಾವತಿ ಮಾಡಬೇಕಾಗುತ್ತದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಾರ್ಷಿಕ ಪಾಸು ಖರೀದಿ ಮಾಡಿದ ವಾಹನ ಸವಾರರು ಯಾವುದೇ ಷರತ್ತುಗಳು ಇಲ್ಲದೇ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಡೆಸಲು ಅನುಕೂಲ ಮಾಡಿಕೊಡಲಿದೆ. ವರ್ಷದಲ್ಲಿ ಇಷ್ಟು ಬಾರಿ ಮಾತ್ರ ಸಂಚಾರ ನಡೆಸಬೇಕು ಎಂಬ ನಿಯಮ ಸಹ ಇರುವುದಿಲ್ಲ. ಮಾಸಿಕ ಪಾಸು ಖರೀದಿ ಮಾಡುವುದಕ್ಕಿಂತ ಇದು ಸಹಕಾರಿ ಎಂದು ಅಂದಾಜಿಸಲಾಗಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ಕಾರುಗಳಿಗೆ ಪ್ರತ್ಯೇಕ ಪಾಸುಗಳನ್ನು ವಿತರಣೆ ಮಾಡುವ ಪ್ರಸ್ತಾಪವನ್ನು ಮಾಡಿದ್ದರು. ಈಗ ಸಚಿವಾಲಯ ವಾರ್ಷಿಕ, ಜೀವಿತಾವಧಿ ಪಾಸುಗಳನ್ನು ಪರಿಚಯಿಸಲು ಮುಂದಾಗಿದೆ.
ಮಾಹಿತಿಗಳ ಪ್ರಕಾರ 2023-24ರಲ್ಲಿ ಟೋಲ್ ಬೂತ್ಗಳಿಂದ ಸಂಗ್ರಹವಾಗಿರುವ ಆದಾಯ 55,000 ಕೋಟಿ ರೂ.ಗಳು. ಇದರಲ್ಲಿ ಖಾಸಗಿ ಕಾರುಗಳ ಆದಾಯ 8000 ಕೋಟಿ. ಶೇ.53ರಷ್ಟು ಆದಾಯ ಖಾಸಗಿ ಕಾರುಗಳಿಂದಲೇ ಬಂದಿದೆ. ಟೋಲ್ ಪ್ಲಾಜಾಗಳಲ್ಲಿ ಶೇ.60ರಷ್ಟು ವಾಹನಗಳು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯ ತನಕ ಸಂಚಾರ ನಡೆಸುತ್ತವೆ. ವಾಣಿಜ್ಯ ವಾಹನಗಳು ಹಗಲು, ರಾತ್ರಿ ಸಂಚರಿಸುತ್ತಿವೆ.