ಬೆಂಗಳೂರು,ಆ.19- ರಾಜ್ಯಾದ್ಯಂತ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಜಿಪಿಎಸ್ ಅಳವಡಿಕೆ ಹಾಗೂ ಸ್ಕ್ವಾಡ್ ತಂಡವನ್ನು ಬಿಗಿಗೊಳಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಪರಿಷತ್ನಲ್ಲಿ ತಿಳಿಸಿದರು.
ಸದಸ್ಯೆ ಹೇಮಾಲತ ನಾಯಕ್ ಅವರು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಪ್ರಶ್ನೆ ಕೇಳಿದ್ದರು. ಸಚಿವರ ಪರವಾಗಿ ಉತ್ತರಿಸಿದ ಚಲುವರಾಯಸ್ವಾಮಿಯವರು, ಅಕ್ರಮ ಮರಳುಗಾರಿಕೆ ತಡೆಗಟ್ಟುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಹೇಳಿದರು.
ಎಲ್ಲೆಲ್ಲಿ ಮರಳುಗಾರಿಕೆ ನಡೆಯುತ್ತದೆಯೋ ಅಂತಹ ಕಡೆ ಜಿಪಿಎಸ್ ಅಳವಡಿಕೆ ಮತ್ತು ಈಗಿರುವ ಸ್ಕ್ವಾಡ್ ತಂಡವನ್ನು ಮತ್ತಷ್ಟು ಬಲಪಡಿಸಲಾಗುವುದು. ಕಟ್ಟುನಿಟ್ಟಿನ ಕ್ರಮದ ನಡುವೆಯೂ ಕೆಲವು ಕಡೆ ಇಂತಹ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತವೆ ಎಂದರು.
ಅಕ್ರಮ ಮರಳುಗಾರಿಕೆ ನಡೆಸುವವರ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಲಾರಿ, ಟ್ರ್ಯಾಕ್ಟರ್, ಎತ್ತಿನಗಾಡಿ ಮತ್ತಿತರ ವಾಹನಗಳನ್ನು ಬಿಟ್ಟು ಓಡಿಹೋಗುತ್ತಾರೆ. ಆದರೂ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿ ಕಾನೂನು ಪ್ರಕಾರವೇ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಸೇರಿದಂತೆ ಮತ್ತಿತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗದಂತೆ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ಸರ್ಕಾರಕ್ಕೆ ಬರಬೇಕಾದ ರಾಜಸ್ವವನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಎಲ್ಲಾದರೂ ನಿರ್ದಿಷ್ಟ ಪ್ರಕರಣಗಳಿದ್ದರೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಚಲುವರಾಯಸ್ವಾಮಿ ಆಶ್ವಾಸನೆ ನೀಡಿದರು.