Sunday, July 7, 2024
Homeರಾಜ್ಯಕೇಂದ್ರ ಸಚಿವರಾದ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಬಂದ ಹೆಚ್ಡಿಕೆಗೆ ಅದ್ಧೂರಿ ಸ್ವಾಗತ

ಕೇಂದ್ರ ಸಚಿವರಾದ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಬಂದ ಹೆಚ್ಡಿಕೆಗೆ ಅದ್ಧೂರಿ ಸ್ವಾಗತ

ಬೆಂಗಳೂರು, ಜೂ.14- ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್‌‍ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತಕೋರಿ ಅಭಿನಂದಿಸಿದರು.

ಇಂದು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ಜೆಡಿಎಸ್‌‍ನ ಮುಖಂಡರು ಸ್ವಾಗತಿಸಿದರು. ಬಳಿಕ ಸಾದರಹಳ್ಳಿ ಬಳಿ ಜೆಡಿಎಸ್‌‍ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿದರು.

ನಂತರ ಜೆಡಿಎಸ್‌‍ ಕಚೇರಿ ಜೆಪಿಭವನಕ್ಕೆ ಕುಮಾರಸ್ವಾಮಿ ಆಗಮಿಸಿದರು. ಕಚೇರಿಯಲ್ಲಿ ಹಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಶಾಸಕರು, ಪಕ್ಷದ ಮುಖಂಡರು, ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಕುಮಾರಸ್ವಾಮಿ ಅವರು, ತಮಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂಬರುವ ಚುನಾವಣೆಗಳಿಗೆ ಈಗಿನಿಂದಲೇ ತಯಾರಿ ನಡೆಸುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು. ಬಳಿಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪದನಾಭನಗರದ ನಿವಾಸಕ್ಕೆ ತೆರಳಿ, ತಂದೆತಾಯಿ ಆಶೀರ್ವಾದ ಪಡೆದುಕೊಂಡರು. ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್‌ ಗೆಲ್ಹೋಟ್‌ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಲಿದ್ದಾರೆ.

ರಾತ್ರಿ ತಿರುಪತಿಗೆ:
ಇಂದು ರಾತ್ರಿ ತಿರುಪತಿಗೆ ತೆರಳಲಿರುವ ಕುಮರಸ್ವಾಮಿ ಅವರು ನಾಳೆ ಪ್ರಾತಃ ಕಾಲ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಅನಿತಾಕುಮಾರಸ್ವಾಮಿ ಸೇರಿದಂತೆ ಕುಟುಂಬದ ಸದಸ್ಯರು ದೇವರ ದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಆನಂತರ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅವರು ಬಿಜೆಪಿ ಜೆಡಿಎಸ್‌‍ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

2ನೇ ಬಾರಿ ರಾಮನಗರದಿಂದ ಚುನಾಯಿತರಾದ ಬಳಿಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಲೋಕಸಭೆ ಪ್ರವೇಶಿಸಿದರು.ಆನಂತರ ಮತ್ತೆ ರಾಮನಗರ ಕ್ಷೇತ್ರದಿಂದ 3ನೇ ಬಾರಿ ಆಯ್ಕೆಯಾದರು. 2018ರಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಜೆಡಿಎಸ್‌‍-ಕಾಂಗ್ರೆಸ್‌‍ ಮೈತ್ರಿ ಸರ್ಕಾರದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾದರು. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ 2ನೇ ಬಾರಿಗೆ ಚುನಾಯಿತರಾಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಲೋಕಸಭೆ ಪ್ರವೇಶ ಮಾಡಿರುವ ಕುಮಾರಸ್ವಾಮಿ ಪ್ರಧಾನಿ ನರೇಂದ್ರಮೋದಿ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

RELATED ARTICLES

Latest News