ಬೆಂಗಳೂರು, ಮೇ 28-ಹೊಸ ಆಟೋ ಖರೀದಿಸಲು ತಾತನ ಮನೆಯಲ್ಲೇ ಹತ್ತು ಲಕ್ಷ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಮೊಮಗನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 9.44 ಲಕ್ಷ ಹಣ ಹಾಗೂ 81 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 17.44 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.
ನಂದಿನಿ ಲೇಔಟ್‌ನ ವಿಜಯಾನಂದ ನಗರದ ನಿವಾಸಿಯೊಬ್ಬರು ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಸ್ವಂತ ಊರಾದ ಅಮೃತ್ತೂರಿನ ಹೊಸಪಾಳ್ಯಕ್ಕೆ ಹಬ್ಬಕ್ಕೆಂದು ಹೋಗಿದ್ದರು.ಆ ಸಂದರ್ಭದಲ್ಲಿ ಅವರ ಮಗಳ ಮಗ (ಮೊಮಗ) ನಕಲಿ ಕೀ ಬಳಸಿ ಬಾಗಿಲು ತೆಗೆದು ಹತ್ತು ಲಕ್ಷ ಹಣ ಹಾಗೂ 125 ಗ್ರಾಂ ಚಿನ್ನದ ಸರ ಹಾಗೂ ಬಳೆಗಳನ್ನು ಕಳವು ಮಾಡಿಕೊಂಡು ಯಶವಂತಪುರದ ಮತ್ತಿಕೆರೆಯಲ್ಲಿರುವ ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದಾನೆ. ಅಲ್ಲದೇ ಹಣವನ್ನು ಅಂದ್ರಹಳ್ಳಿಯಲ್ಲಿರುವ ತನ್ನ ಸ್ನೇಹಿತನಿಗೆ ಕೊಟ್ಟಿದ್ದಾನೆ.
ನಾಲ್ಕು ದಿನಗಳ ನಂತರ ಊರಿನಿಂದ ಕುಟುಂಬದವರು ಮನೆಗೆ ಬಂದಿದ್ದಾರೆ. ಬೀಗ ತೆಗೆದು ಒಳಗೆ ಹೋದಾಗ ಬೀರುವಿನ ಬಾಗಿಲು ತೆರೆದುಕೊಂಡಿರುವುದು ಕಂಡುಬಂದಿದೆ.ತಕ್ಷಣ ಬೀರುವನ್ನು ನೋಡಿದಾಗ ಬೀರುವಿನ ಲಾಕ್‌ಹೊಡೆದು ಹಣ ಹಾಗೂ ಆಭರಣ ಕಳ್ಳತನವಾಗಿರುವುದು ಕಂಡುಬಂದಿದೆ.ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಗೊತ್ತಿರುವವರೇ ಕಳ್ಳತನ ಮಾಡಿದ್ದಾರೆಂದು ಅನುಮಾನ ವ್ಯಕ್ತಪಡಿಸಿ, ಕುಟುಂಬ ಸದಸ್ಯರ ಸಂಬಂಧಿಕರನ್ನು ವಿಚಾರಣೆ ನಡೆಸಿದಾಗ ಸುಂಕದಕಟ್ಟೆಯ ಚಂದನ ಲೇಔಟ್‌ನಲ್ಲಿ ವಾಸವಿರುವ ಮೊಮಗನೇ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ನಂತರ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಹೊಸ ಆಟೋ ಖರೀದಿಗಾಗಿ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.ಆತನಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, 81 ಗ್ರಾಂ ಚಿನ್ನಾಭರಣ, 9.44 ಲಕ್ಷ ಹಣ, ಎರಡು ನಕಲಿ ಕೀಗಳು ಹಾಗೂ ಅಂದ್ರಹಳ್ಳಿಯ ಸ್ನೇಹಿತನಿಗೆ ನೀಡಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.ಅಲ್ಲದೇ ಜ್ಯೂವಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 81 ಗ್ರಾಂ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಲಕ್ಷಣ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.