ಬೆಂಗಳೂರು,ಜು.18- ದಕ್ಷಿಣ ಕನ್ನಡದ ಪ್ರಖ್ಯಾತ ಕ್ರೀಡಾಕೂಟವಾದ ಕಂಬಳ ಆಯೋಜಕರಿಗೆ ತಡೆಹಿಡಿದಿರುವ ಅನುದಾನವನ್ನು ಈ ಅಧಿವೇಶನ ಮುಗಿಯುವುದರೊಳಗೆ ಬಿಡುಗಡೆ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದ್ದಾರೆ.
ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು 2023-24 ನೇ ಸಾಲಿನಲ್ಲಿ ಕಂಬಳ ಆಯೋಜಿಸಿದ್ದ ಆಯೋಜಕರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೇ ವಿಳಂಬ ಮಾಡಿದೆ ಎಂದು ಸರ್ಕಾರದ ಗಮನ ಸೆಳೆದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ಪಾಟೀಲ್ ಅವರು, ಜಿಲ್ಲಾಧಿಕಾರಿಗಳು ಕಳೆದ ಮಾ.21 ರಂದು ಸರ್ಕಾರಕ್ಕೆ ಒಟ್ಟು ವೆಚ್ಚದ ಬಿಲ್ ಪಾವತಿಸಿದ್ದರು. ಇದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಸದನದಲ್ಲಿದ್ದ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಪುತ್ತೂರಿನ ಕೋಟೆಯ ಚೆನ್ನಯ್ಯ ಅವರಿಗೆ 5 ಲಕ್ಷ, ಜೋಡಿ ಚೆನ್ನಯ್ಯ ಅವರಿಗೆ 10 ಲಕ್ಷ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಲಾಗುತ್ತದೆ ಎಂದರು.ಆಗ ಪ್ರತಾಪ್ ಸಿಂಹ ನಾಯಕ್, ಈ ಹಿಂದೆ ಸದಾನಂದೇಗೌಡರು ಮುಖ್ಯಮಂತ್ರಿಯಾಗಿದ್ದಾಗ 20 ಕಂಬಳ ಆಯೋಜಕರಿಗೆ ತಲಾ 5 ಲಕ್ಷ ರೂ. ಹಣದಂತೆ ಒಂದು ಕೋಟಿ ಅನುದಾನವನ್ನು ನೀಡಿದ್ದರು. ನಂತರ ಸಿ.ಪಿ.ಯೋಗೀಶ್ವರ್‌ರವರು ಸಚಿವರಾಗಿದ್ದಾಗ ತಲಾ 5 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ. ಈಗ ಅವರಿಗೇಕೆ ತಾರತಮ್ಯ ಎಂದು ಪ್ರಶ್ನಿಸಿದರು.
ಈ ವರ್ಷ 5 ಕಡೆ ಕಂಬಳ ಆಯೋಜನೆ ಮಾಡುತ್ತೇವೆ. ಆವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಆರ್ಥಿಕ ನೆರವು ನೀಡುತ್ತೇವೆ. ಅನುದಾನ ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಇದರಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಾಟೀಲ್ ಸ್ಪಷ್ಟಪಡಿಸಿದರು.