ಬೆಂಗಳೂರು ಫೆ 24- ಮುಂದಿನ ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆಯಾಗಲಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲು ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯಿಂದ ವರದಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಈ ವಿಧೇಯಕದ ಚರ್ಚೆ ಯಾವಾಗ ಮಾಡಬೇಕು ಎಂಬ ಬಗ್ಗೆ ಸದನದ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.
ಕಳೆದ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವಿಧೇಯಕವನ್ನು ಮಂಡಿಸಿದ್ದರು. ಇನ್ನೂ ಬಹಳಷ್ಟು ಚರ್ಚೆಯಾಗಬೇಕು. ಅದಕ್ಕಾಗಿ ಜಂಟಿ ಪರಿಶೀಲನಾ ಸಮಿತಿ ರಚನೆಯಾಗಬೇಕು ಎಂಬ ಸಲಹೆ ಮಾಡಲಾಗಿತ್ತು.
ಅದರಂತೆ ಶಾಸಕ ರಿಜ್ವಾನ್ ಹರ್ಷದ್ ಅವರ ಅಧ್ಯಕ್ಷತೆಯಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಲಾಗಿತ್ತು. ಅದರ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಈಗ ಪರಿಶೀಲನಾ ವರದಿಯನ್ನು ಸಮಿತಿ ಸಲ್ಲಿಸಿದೆ ಎಂದರು.