ಬೆಂಗಳೂರು,ಸೆ.11– ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ವಾರ್ಡ್‌ಗಳ ಸಂಖ್ಯೆಯನ್ನು 365ಕ್ಕೆ ಹೆಚ್ಚಿಸಲು ಮುಂದಾಗಿದೆ.
ಒಂದು ವೇಳೆ ಶಾಸಕರ ಬೇಡಿಕೆಯಂತೆ ಜಿಬಿಎ ವ್ಯಾಪ್ತಿಯ ವಾರ್ಡ್‌ಗಳನ್ನು ಹೆಚ್ಚಳ ಮಾಡಿದರೆ ದೇಶದಲ್ಲೇ ಅತಿದೊಡ್ಡ ನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಸದ್ಯ ಮುಂಬೈ ಮಹಾನಗರ ಪಾಲಿಕೆ ಭಾರತದ ಅತಿದೊಡ್ಡ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಕಾಯ್ದೆ ಅಂಗೀಕಾರ ಪಡೆದುಕೊಂಡಿತ್ತು.
ಈ ಹಿಂದೆ ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ 198 ವಾರ್ಡ್‌ಗಳು ಇದ್ದವು. ಇದೀಗ ಹೊಸದಾಗಿ ಜಿಬಿಎ ಬಂದ ನಂತರ ಬೆಂಗಳೂರಿನ ವಿಸ್ತಾರ ಹೆಚ್ಚಾಗಿದ್ದು, ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ನಗರ ಶಾಸಕರು ಬೇಡಿಕೆ ಇಟ್ಟಿದ್ದರು.
ಇತ್ತೀಚೆಗೆ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿಗಳು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಸೂಚನೆ ಕೊಟ್ಟಿದ್ದರು.
ಈ ವೇಳೆ ಸಚಿವರು ಮತ್ತು ಶಾಸಕರು ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂದು ಆಡಳಿತಾರೂಢ ಕಾಂಗ್ರೆಸ್ ಶಾಸಕರು ಸಿಎಂಗೆ ಮನವರಿಕೆ ಮಾಡಿದ್ದರು. ವಾರ್ಡ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾದರೆ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. 198 ವಾರ್ಡ್‌ಗಳಲ್ಲಿ ಚುನಾವಣೆ ನಡೆಸಿದರೆ ಬಿಜೆಪಿಗೆ ಅನುಕೂಲವಾಗಿದೆ.
ನಗರ ಮತದಾರರು ಬಿಜೆಪಿ ಕಡೆ ಒಲವು ತೋರುತ್ತಾರೆ. 2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಐದು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ.
ಹೀಗಾಗಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದರೆ 5 ಪಾಲಿಕೆಗಳಲ್ಲಿ ಕನಿಷ್ಠಪಕ್ಷ 2ರಿಂದ 3 ಪಾಲಿಕೆಗಳಲ್ಲಿ ಅಧಿಕಾರ ಹಿಡಿಯಬಹುದೆಂದು ಸಚಿವರು ಮತ್ತು ಶಾಸಕರು ಸಿಎಂಗೆ ಅಂಕಿಸಂಖ್ಯೆ, ಮತದಾರರ ಪಟ್ಟಿ, ಹಿಂದೆ ಪಡೆದಿದ್ದ ಮತ ವಿವರ ಇತ್ಯಾದಿಯನ್ನು ವಿವರಿಸಿದ್ದರು.ಶಾಸಕರ ಬೇಡಿಕೆಗೆ ಬಹುತೇಕ ಅಸ್ತು ಎಂದಿರುವ ಸಿಎಂ ವಾರ್ಡ್ ಹೆಚ್ಚಳ ಕುರಿತು ಬಿಬಿಎಂಪಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಹಾಗೂ ಡಿಸಿಎಂ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು ಕೊಟ್ಟಿದ್ದರು ಎಂದು ತಿಳಿದುಬಂದಿದೆ.
ವಾರ್ಡ್ ಸಂಖ್ಯೆ ಹೆಚ್ಚಳವಾದರೆ ಪಕ್ಷಕ್ಕೆ ದುಡಿದಿರುವ ಮುಖಂಡರಿಗೆ ಟಿಕೆಟ್ ನೀಡಬಹುದು. ಇದರಿಂದ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸಿದಂತಾಗುತ್ತದೆ. ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಹೇಳಿದ್ದರು.ಪಕ್ಷ ಸಂಘಟನೆಯನ್ನು ಬಲಪಡಿಸುವುದು, ಕಾರ್ಯಕರ್ತರಿಗೆ ರಾಜಕೀಯ ಪ್ರಾತಿನಿಧ್ಯ ವಹಿಸಿದರೆ ಕಾಂಗ್ರೆಸ್ 2028ರ ಚುನಾವಣೆಯಲ್ಲಿ ಪುನಃ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದರು.
ಶಾಸಕರ ಬೇಡಿಕೆ ಏನು?:
*ಜಿಬಿಎ ವ್ಯಾಪ್ತಿಯಲ್ಲಿ 365 ವಾರ್ಡ್‌ಗಳನ್ನು ರಚಿಸಬೇಕು. ಬೆಂಗಳೂರು ಉತ್ತರ 75, ಬೆಂಗಳೂರು ದಕ್ಷಿಣ 75, ಬೆಂಗಳೂರು ಕೇಂದ್ರ 63, ಬೆಂಗಳೂರು ಪೂರ್ವ 50, ಬೆಂಗಳೂರು ಪಶ್ಚಿಮ 102 ವಾಡ್ ರ್ಗಳನ್ನು ರಚಿಸುವಂತೆ ಮನವಿ ಮಾಡಿದ್ದರು.
*2011ರ ಜನಸಂಖ್ಯೆಯಂತೆ ವಾರ್ಡ್‌ಗಳನ್ನು ರಚಿಸಿ ಪ್ರತಿ ವಾರ್ಡ್‌ಗೆ ಸರಾಸರಿ 17 ಸಾವಿರದಿಂದ 35 ಸಾವಿರ ಮತದಾರರನ್ನು ನಿಗದಿಪಡಿಸುವಂತೆ ಕೋರಿದ್ದರು.
*ಯಾವ ವಾರ್ಡ್‌ಗಳಲ್ಲಿ ಜನಸಂಖ್ಯೆ ಕಡಿಮೆ ಇರುತ್ತದೆಯೋ ಅಂತಹ ಕಡೆ ಮತದಾರರನ್ನು ನಿಗದಿಪಡಿಸುವಂತೆಯೂ ಸಭೆಯಲ್ಲಿ ಶಾಸಕರು ತಮ ಅಭಿಪ್ರಾಯವನ್ನು ತಿಳಿಸಿದ್ದರು.