Monday, March 10, 2025
Homeರಾಜ್ಯವಿಧಾನಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ

ವಿಧಾನಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ

Greater Bangalore Bill introduced in the Assembly

ಬೆಂಗಳೂರು, ಮಾ.10- ಬಿಬಿಎಂಪಿಯನ್ನು ಏಳು ಪಾಲಿಕೆಗಳನ್ನಾಗಿ ವಿಭಜಿಸುವ ಹಾಗೂ ಗ್ರೇಟರ್‌ ಬೆಂಗಳೂರು ಸಮಿತಿ ರಚಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧೇಯಕವನ್ನು ಮಂಡಿಸಿ, ಕೆಂಪೆಗೌಡರು ಬೆಂಗಳೂರನ್ನು ಸ್ಥಾಪಿಸಿದರು. ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಬೆಂಗಳೂರು ಬೆಳೆಯುತ್ತಿದೆ. ಆಡಳಿತಾತಕ ದೃಷ್ಟಿಯಿಂದ ವಿಭಜನೆ ಅನಿವಾರ್ಯ ಎಂದರು.

ವಿಧಾನಸೌಧ ಕಟ್ಟಿದ ಕೆಂಗಲ್‌ ಹನುಮಂತಯ್ಯ ಬೆಂಗಳೂರು ನಗರಸಭೆ ಸದಸ್ಯರಾಗಿದ್ದರು. ರಾಜಕೀಯದಲ್ಲಿ ಪ್ರಮುಖ ಸ್ಥಾನಕ್ಕೇರಿದ ಹಲವಾರು ಮಂದಿ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಸಚಿವರು, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಈ ಹಿಂದೆ ಎಸ್‌‍.ಎಂ.ಕೃಷ್ಣ ಅವರ ಕಾಲಾವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಚಿಕ್ಕದಿತ್ತು, ಈಗ ದೊಡ್ಡದಾಗಿ ಬೆಳೆದಿದ್ದೆ. ಅದಕ್ಕಾಗಿ ಗ್ರೇಟರ್‌ ಬೆಂಗಳೂರು ಕಾಯ್ದೆ ರೂಪಿಸಲಾಗಿತ್ತು. ಹಿಂದೆ ಇದೇ ಸದನದಲ್ಲಿ ಕಾಯ್ದೆಯನ್ನು ಮಂಡಿಸಿದಾಗ ವಿಸ್ತೃತ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕರು ಸಲಹೆ ನೀಡಿದ್ದರು. ಅದಕ್ಕಾಗಿ ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು. ವರದಿ ಪಡೆದು ಮಸೂದೆಗೆ ತಿದ್ದುಪಡಿ ತರಲಾಗಿದೆ ಎಂದರು.

ಹಿಂದೆ ಬೇರೆ ಬೇರೆ ಕಾಲದಲ್ಲಿ ನಡೆದ ವಿಸ್ತರಣೆಯನ್ನು ವಿವರಿಸಿದ ಅವರು, ಸ್ಥಳೀಯ ಸಂಸ್ಥೆಗಳ ಆಡಳಿತ ಬಲವರ್ಧನೆ ಮಾಡುವ ಸಂವಿಧಾನ ಆಶಯಕ್ಕೆ ನಮ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನ ಜನಸಂಖ್ಯೆ ಒಂದುವರೆ ಕೋಟಿಯಷ್ಟಿದೆ, ಐದು ಲಕ್ಷ ವಾಹನಗಳು ನೋಂದಣಿಯಾಗಿ ಸಂಚರಿಸುತ್ತಿವೆ.

ಬಿಜೆಪಿ ಸರ್ಕಾರದಲ್ಲಿ ಹಲವಾರು ಸಮಿತಿಗಳ ಮೂಲಕ ಬೆಂಗಳೂರು ಪುನರ್‌ ರಚನೆಯ ಅಧ್ಯಯನ ನಡೆಸಲಾಗಿದೆ. ನಮ ಸರ್ಕಾರ 2023ರಲ್ಲಿ ಬ್ರಾಂಡ್‌ ಬೆಂಗಳೂರು ಸಮಿತಿ ರಚನೆ ಮಾಡಲಾಗಿದೆ. ಬೆಂಗಳೂರು ಎಲ್ಲರಿಗೆ ಸೇರಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವಲಸೆ ಬರುವುದು ಹೆಚ್ಚಾಗುತ್ತಿದೆ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನಗರೀಕರಣ ಹೆಚ್ಚುತ್ತಿದೆ ಎಂದರು.

ಸದನ ಸಮಿತಿ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಎಲ್ಲ ಪಕ್ಷಗಳ ಸದಸ್ಯರು ಸಮಿತಿಯಲ್ಲಿರು. ತಜ್ಞರ ಸಲಹೆ, ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ವರದಿ ಮಂಡನೆಯಾಗಿದೆ. ಅದರಲ್ಲಿ ದೋಷವಿದ್ದರೇ ಈಗಲೂ ಅದನ್ನು ಪರಿಶೀಲನೆ ಮಾಡಲು ನಾನು ಬದ್ಧ ಎಂದರು.

ಬೆಂಗಳೂರಿನಲ್ಲಿ ಒಂದರಿಂದ ಏಳು ಪಾಲಿಕೆ ಮಾಡಲು ಅವಕಾಶವಿದೆ. ವಿಭಜನೆಯ ವೇಳೆ ಎಲ್ಲರೊಂದಿಗೆ ಚರ್ಚೆ ಮಾಡಿ, ಸಲಹೆ ಪಡೆದು ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇರಬಾರದು, 300 ಕೋಟಿ ಕನಿಷ್ಠ ಆದಾಯ ಇರಬೇಕು. ಪಾಲಿಕೆಗೆ ಬೆಂಗಳೂರಿನ ಹೆಸರಿನಿಂದಲೇ ಶೀರ್ಷಿಕೆ ಇರಬೇಕು.

ಪ್ರತಿ ಪಾಲಿಕೆಗೂ ಗರಿಷ್ಠ 150 ವಾರ್ಡ್‌ ಇರಬೇಕು. ಪಾಲಿಕೆ ಸದಸ್ಯರ ಅವಧಿ ಐದು ವರ್ಷ, ಮೇಯರ್‌ಗೆ ಎರಡುವರೆ ವರ್ಷ ಅಧಿಕಾರ ನಿಗದಿ ಮಾಡಲಾಗಿದೆ. ಆರು ತಿಂಗಳ ಮೊದಲು ಮೇಯರ್‌ ವಿರುದ್ಧ ಅವಿಶ್ವಾಸ ತರಲು ಅವಕಾಶ ಇಲ್ಲ. ಶಾಸಕರು ಮತ ಹಾಕಲು ಅದೇ ಪ್ರದೇಶದಲ್ಲೇ ವಾಸ ಇರುವವರಾಗಿರಬೇಕು ಎಂದು ನಿಯಮ ಮಾಡಲಾಗಿದೆ. ಪಾಲಿಕೆಯ ವಾರ್ಡ್‌ಗಳಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ ಇರಲಿದೆ ಎಂದರು.

ಸ್ಥಳೀಯ ಸಮಿತಿಗಳು ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗಲಿದೆ. ಪಾಲಿಕೆಯ ಸ್ವರೂಪ ಬದಲಾವಣೆಯಾಗುವುದಿಲ್ಲ. ಗ್ರೇಟರ್‌ ಬೆಂಗಳೂರು ಸಮಿತಿಗೆ ಸಿಎಂ ಅಧ್ಯಕ್ಷರಾಗಿರಲಿದ್ದು, ಜನ ಪ್ರತಿನಿಧಿಗಳನ್ನು ವಿವಿಧ ಏಜೆನ್ಸಿಯವರನ್ನು ಒಳಗೊಳ್ಳಲಾಗಿದೆ. ಪೊಲೀಸರು, ನೀರು ಸರಬರಾಜು, ಸಾರಿಗೆ, ಅಗ್ನಿಶಾಮಕ, ನಗರ ಯೋಜನೆ ಸೇರಿ ಎಲ್ಲರು ಸಮಿತಿ ಸದಸ್ಯರಾಗಿರುತ್ತಾರೆ ಎಂದು ಹೇಳಿದರು. ಸೆಕ್ಷನ್‌ 9 ಸೇರಿ ಹಲವು ತಿದ್ದುಪಡಿಗಳನ್ನು ಸೇರಿಸಿರುವುದಾಗಿ ಹೇಳಿದರು.

ಬೆಂಗಳೂರು ನಗರಕ್ಕೆ ಬಜೆಟ್‌ ನಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಘೋಷಿಸಲಾಗಿದೆ ಎಂದು ವಿವರಿಸಿ ಮಸೂದೆಯಗೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಕೆಂಪೇಗೌಡರ ವಂಶಸ್ಥರಾಗಿರುವ ಡಿ.ಕೆ.ಶಿವಕುಮಾರ್‌ ಬೆಂಗಳೂರನ್ನು ಛೀದ್ರ ಮಾಡುತ್ತಿರುವುದು ದುರ್ವಿಧಿ. ಕೆಂಪೇಗೌಡರು 36ನಗರಗಳನ್ನು ಕಟ್ಟಿದರು. ನಾಲ್ಕು ದಿಕ್ಕಿನಲ್ಲೂ ನಾಲ್ಕು ಗೋಪುರ ನಿರ್ಮಾಣ ಮಾಡಿದರು. ಆ ಉದ್ದೇಶಕ್ಕೆ ಈಗ ಕೊಡಲಿ ಪೆಟ್ಟು ನಿಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬೆಂಗಳೂರು ವಿಭಾಗ ಮಾಡಿದರೆ ಪ್ರಯೋಜನ ಇಲ್ಲ. ಹಿಂದೆ ಕನ್ನಡಿಗರ ಸಂಖ್ಯೆಕಡಿಮೆಯಾಗುತ್ತಿತ್ತು. ಇದನ್ನೇ ನೆಪ ಮಾಡಿಕೊಂಡು ಕೇಂದ್ರಾಡಳಿತ ಪ್ರದೇಶ ಮಾಡಲು ಕೆಲವರು ಒತ್ತಡ ತಂದಿದ್ದರು, ಅದಕ್ಕಾಗಿ ಹೊರ ಭಾಗದ ಹಳ್ಳಿಗಳನ್ನು ಒಳಗೊಂಡು ಬೃಹತ್‌ ಬೆಂಗಳೂರು ನಿರ್ಮಿಸಲಾಗಿತ್ತು. ಈಗ ಏಳು ಪಾಲಿಕೆ ಮಾಡುವುದರಿಂದ ಕನ್ನಡ ಹೇಗೆ ಉಳಿಯಲು ಸಾಧ್ಯ. ಮುಂದೆ ಕನ್ನಡೇತರರು ಮೇಯರ್‌ ಆಗುವುದನ್ನು ತಪ್ಪಿಸಲು ಸಾಧ್ಯವೇ ಎಂದರು.
ಸಚಿವ ಜಮೀರ್‌ ಅಹಮದ್‌ ಖಾನ್‌ ಮಧ್ಯ ಪ್ರವೇಶ ಮಾಡಿ, ಹಿಂದೆ ಬಿಜೆಪಿಯೇ ಗೌತಮ್‌ ರನ್ನು ಮೇಯರ್‌ ಮಾಡಿತ್ತು, ಅವರು ಕನ್ನಡಿಗರಾಗಿರಲಿಲ್ಲ ಎಂದು ಕಾಲು ಎಳೆದರು.

ಅವರು ಸ್ಥಳೀಯರು ಎಂದು ಆರ್‌.ಅಶೋಕ್‌ ಸಮರ್ಥಿಸಿಕೊಂಡರು. ಮುಖ್ಯಮಂತ್ರಿಯವರಿವರಿಗೆ ಕಾರ್ಯದೊತ್ತಡ ಹೆಚ್ಚಾಗಲಿದೆ. ಇನ್ನೂ ಗ್ರೇಟರ್‌ ಬೆಂಗಳೂರಿನಲ್ಲಿ ಸಭೆ ನಡೆಸಲು ಸಾಧ್ಯವಿದೆಯೇ. ಮುಖ್ಯಮಂತ್ರಿ ಗೈರು ಹಾಜರಿಯಲ್ಲಿ ನಗರಾಭಿವೃದ್ಧಿ ಸಚಿವರು ಸಭೆ ನಡೆಸಬಹುದು ಎಂದು ಕಾನೂನಿನಲ್ಲಿ ಬರೆದುಕೊಳ್ಳಲಾಗಿದೆ. ಶಾಸಕರ ಸಂಖ್ಯೆ ಹೆಚ್ಚಿದೆ ಎಂದು ವಿಧಾನಸಭೆಯನ್ನು ವಿಭಜಿಸಲು ಸಾಧ್ಯವೇ. ಇದು ಬೆಂಗಳೂರಿಗೆ ಮರಣ ಶಾಸನ ಎಂದು ಕಿಡಿಕಾರಿದರು.

ಬೆಂಗಳೂರನ್ನು ಆಡಳಿತಾತಕವಾಗಿ ವಿಭಾಗ ಮಾಡಿಕೊಳ್ಳಿ ಆದರೆ, ವಿಭಜನೆ ಮಾಡಬೇಡಿ ಎಂದು ಅಶೋಕ್‌ ಹೇಳಿದಾಗ ಬಿಜೆಪಿಯ ಸದಸ್ಯರು ಧ್ವನಿಗೂಡಿಸಿದರು. ಬೆಂಗಳೂರಿನ ಎಲ್ಲಾ ಶಾಸಕರಿಗೂ ಚರ್ಚೆಗೆ ಅವಕಾಶ ನೀಡಿ. ಚರ್ಚೆ ಮಾಡದೆ ಏಕಾಏಕಿ ಮಸೂದೆ ಅಂಗೀಕಾರಗೊಳ್ಳಬಾರದು ಎಂದು ಪಟ್ಟು ಹಿಡಿದರು.

RELATED ARTICLES

Latest News