ಬೆಂಗಳೂರು ಆ.19– ಬಿಬಿಎಂಪಿ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳನ್ನು ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ಸ್ವಾಯತ್ತಗೊಳಿಸುವ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿಂದು ಅಂಗೀಕಾರ ದೊರೆಯಿತು.
ಶಾಸನ ರಚನ ಕಲಾಪದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ವನ್ನು ಪರ್ಯಾಲೋಚನೆಗೆ ಮಂಡಿಸಿ ಅಂಗೀಕಾರಕ್ಕೆ ಮನವಿ ಮಾಡಿದರು.
ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ನೀಡುವ ಸಂವಿಧಾನ ತಿದ್ದುಪಡಿ 73 ಮತ್ತು 74 ಅನ್ನು ಹಿಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ರೂಪಿಸಿದರು. ಅದರ ಅನುಸಾರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿರಲು ನಮ ಸರ್ಕಾರ ತೀರ್ಮಾನಿಸಿದೆ ಎಂದರು.
ಈ ಹಿಂದೆ ರೂಪಿಸಲಾಗಿದ್ದ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ ನ್ಯಾಯಾಲಯ ಪಾಲಿಕೆ ಆಡಳಿತದಲ್ಲಿ ಹತ್ತಕ್ಷೇಪ ಮಾಡದಿರುವಂತೆ ಅಭಿಪ್ರಾಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿಧೇಯಕ ರೂಪಿಸಲಾಗಿದೆ ಎಂದರು. ಬಿಜೆಪಿಯ ಶಾಸಕರಾದ ಸುರೇಶ್ ಕುಮಾರ್ ಈ ಕಾಯ್ದೆಯ ಉದ್ದೇಶ ಮತ್ತು ಅನಿವಾರ್ಯತೆ ಏನು ಎಂದು ಪ್ರಶ್ನಿಸಿ, ಇನ್ನು ಮುಂದೆ ಸರ್ಕಾರ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಬಿಎಂಪಿ ವ್ಯಾಪ್ತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಅವರು ರಾಜ್ಯ ಸರ್ಕಾರಕ್ಕೂ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎರಡಕ್ಕೂ ಮುಖ್ಯಸ್ಥರು. ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತತ್ತೆ ನೀಡಬೇಕು ಎಂದು ರಾಜೀವ್ ಗಾಂಧಿ ಕಾನೂನು ತಿದ್ದುಪಡಿ ತಂದಿದ್ದರು. ಡಿ.ಕೆ .ಶಿವಕುಮಾರ್ ಅವರು ಅದಕ್ಕೆ ವಿರುದ್ಧವಾಗಿ ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹೈಕೋರ್ಟ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗ್ರೇಟರ್ ಬೆಂಗಳೂರು ಕಲ್ಪನೆಯೇ ಸಂವಿಧಾನ ವಿರೋಧಿ ಎಂದು ಡಾ.ಸಿ. ಎನ್. ಅಶ್ವತ್ಥ ನಾರಾಯಣ್ ಆಕ್ಷೇಪಿಸಿದರು.
ವಿಭಜಿತ ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಆರ್ಥಿಕ ಸ್ವಾವಲಂಬನೆ ಇರಬೇಕು ಎಂದು ಶಾಸಕ ರವಿ ಸುಬ್ರಹಣ್ಯ ಒತ್ತಾಯಿಸಿದರೆ,ಬೊಮನಹಳ್ಳಿ ಕ್ಷೇತ್ರದ ನಂದೀಶ ರೆಡ್ಡಿ, ಪಾಲಿಕೆ ಅಧಿಕಾರಿಗಳು ಬಫರ್ ಜೋನ್ ವ್ಯಾಪ್ತಿಯ 30 ಸಾವಿರ ಕಟ್ಟಡಗಳಿಗೆ ನೋಟೀಸ್ ನೀಡಿದ್ದಾರೆ. ಹೆಚ್ಚು ಆದಾಯ ಬರುವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವುದಾಗಿ ಈ ಹಿಂದೆ ಉಪಮುಖ್ಯಮಂತ್ರಿಯವರು ಭರವಸೆ ನೀಡಿದ್ದರು ಆದರೆ ಇದು ಜಾರಿಯಾಗಿಲ್ಲ. ಒಸಿ-ಸಿಸಿ ಪ್ರಮಾಣಪತ್ರಗಳಿಲ್ಲ ಎಂದು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಚಿಕ್ಕ ಚಿಕ್ಕ ನಿವೇಶನಗಳಿಗಾದರೂ ಒಸಿ-ಸಿಸಿಗಳಿಗೆ ವಿನಾಯಿತಿ ನೀಡಿ. ಗ್ರೇಟರ್ ಬೆಂಗಳೂರು ಕಾಯ್ದೆಗೆ ದಿನಕ್ಕೊಂದು ತಿದ್ದುಪಡಿ ತಂದು ಜನರಿಗೆ ಗೊಂದಲ ಮೂಡಿಸಬೇಡಿ ಎಂದು ಸಲಹೆ ನೀಡಿದರು.
ಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸುವಾಗ ಬಿಜೆಪಿ ಶಾಸಕರು ಪ್ರತಿನಿಧಿಸುವ ಐದು ವಿಧಾನಸಭಾ ಕ್ಷೇತ್ರಗಳನ್ನು ಬೇರೆ ಬೇರೆ ಪಾಲಿಕೆಗಳಿಗೆ ಸೇರ್ಪಡೆ ಮಾಡಿ ಗೊಂದಲ ಮೂಡಿಸಿದ್ದಾರೆ. ಇದನ್ನು ಸರಿಪಡಿಸಿ ಎಂದು ದಾಸರಹಳ್ಳಿ ಕ್ಷೇತ್ರದ ಮುನಿರಾಜು ಒತ್ತಾಯಿಸಿದರು.ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ ಗ್ರೇಟರ್ ಬೆಂಗಳೂರು ಎಂಬುದು ಇಂಗ್ಲಿಷ್ ಪದ, ಸರ್ಕಾರಕ್ಕೆ ಕನ್ನಡದ ಒಳ್ಳೆಯ ಪದ ಸಿಗಲಿಲ್ಲವೇ ಎಂದು ಆಕ್ಷೇಪಿಸಿ ಟೀಕಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರ ವಿಕೇಂದ್ರೀಕರಣಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ. ಒಂದು ಪಾಲಿಕೆಗೆ ಹೆಚ್ಚು ತೆರಿಗೆ ಬಂದರೆ ಮತ್ತೊಂದು ಪಾಲಿಕೆಗೆ ಸಂಪನೂಲದ ಕೊರತೆಯಾಗಲಿದೆ, ಈ ರೀತಿಯ ಗೊಂದಲಗಳಿವೆ , ಪಾಲಿಕೆಗಳು ಪರಾವಲಂಬಿ ಆಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರ ಆಡಳಿತದಲ್ಲಿ ಕಪಿ ಮುಷ್ಟಿ ಇಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಆಡಳಿತ ಪಕ್ಷದ ಶಾಸಕ ರಿಜ್ವಾನ್ ಅರ್ಷದ್, ಇದೊಂದು ಸಣ್ಣ ತಿದ್ದುಪಡಿ . ಸ್ಥಳೀಯ ಸಂಸ್ಥೆಗಳ ಅಧಿಕಾರದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಬೆಂಗಳೂರು ಮಹಾನಗರ ಬೆಂಗಳೂರು ಪಾಲಿಕೆಯಲ್ಲಿ ಮೊದಲು 65 ವಾರ್ಡ್‌ಗಳಿದ್ದವು. ಆನಂತರ 100 ವಾರ್ಡ್ ಗಳಾದವು. ಬಿಬಿಎಂಪಿಯಾದ ಬಳಿಕ 198 ವಾರ್ಡ್‌ಳಾದವು, ಹೆಚ್ಚು ಆದಾಯ ಬರುವ ಗ್ರಾಮ ಪಂಚಾಯಿತಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಡಬೇಕಿದೆ . ಒಬ್ಬ ಮುಖ್ಯ ಆಯುಕ್ತರಿಂದ 5 ಪಾಲಿಕೆಗಳ ಆಡಳಿತ ನಿರ್ವಹಣೆ ಕಷ್ಟ ಸಾಧ್ಯವಾಗಲಿದೆ. ಹೀಗಾಗಿ ಪರ್ಯಾಯ ಕ್ರಮಗಳನ್ನು ಸರ್ಕಾರ ಹುಡುಕಬೇಕು ಎಂದರು.
ಚರ್ಚೆಗೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಅಧಿಕಾರ ವಿಕೇಂದ್ರೀಕರಣದ ಕಲ್ಪನೆಗೆ ಧಕ್ಕೆಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸಿದ್ದು, ಕಾಂಗ್ರೆಸ್ ಪಕ್ಷ, ನಾವು ಯಾವುದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳನ್ನು ದುರ್ಬಲಗೊಳ್ಳಲು ಬಿಡುವುದಿಲ್ಲ ಎಂದರು.
ವಿಧೇಯಕ ಜನರಿಗೆ ಅನುಕೂಲಕರವಾಗಿರಬೇಕು. ಅದು ಬೇಡ ಎಂದರೆ ಈ ತಕ್ಷಣವೇ ವಾಪಸ್ ಪಡೆಯಲು ನಾನು ಸಿದ್ಧನಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ವಿಸ್ತೃತ ಚರ್ಚೆಗೂ ನಾನು ಸಿದ್ಧ ಎಂದರು.
ಬಿಬಿಎಂಪಿಗೆ ಚುನಾವಣೆ ನಡೆಸಬೇಕಿದೆ ಆ ಸಂಬಂಧ ಪಟ್ಟಂತೆ 5 ಪಾಲಿಕೆಗಳ ವಿಭಜನೆಗೆ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು . ವಿಧೇಯಕವನ್ನು ರಾಜ್ಯಪಾಲರಿಗೆ ಕಳುಹಿಸುತ್ತೇವೆ. ಸೆಪ್ಟೆಂಬರ್ ಎರಡರಂದು ಅಂತಿಮ ಅಧಿಸೂಚನೆ ಜಾರಿಯಾಗಲಿದೆ ಎಂದರು. ಯಾರು ಅಧಿಕಾರದಲ್ಲಿ ಇರುತ್ತಾರೆ ಎಂಬುದು ಮುಖ್ಯ ಅಲ್ಲ. ಜನರಿಗೆ ಪೂರಕವಾದ ವ್ಯವಸ್ಥೆ ಮಾಡುವುದು ನಮ ಕರ್ತವ್ಯ. ಈ ನೆಲೆಯಲ್ಲಿ ಗ್ರೇಟರ್ ಬೆಂಗಳೂರಿಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ಚರ್ಚೆಗೆ ನಾನು ಸಿದ್ಧ ಎಂದರು.