Thursday, August 14, 2025
Homeರಾಜಕೀಯ | Politicsರಾಜಣ್ಣ ವಜಾ ಹಿನ್ನೆಲೆಯಲ್ಲಿ ಕಾಂಗ್ರೆಸ್‌‍ನೊಳಗೆ ಬಲಾ-ಬಲ ಪ್ರದರ್ಶನಕ್ಕೆ ಗುಂಪು ರಾಜಕಾರಣ ಶುರು

ರಾಜಣ್ಣ ವಜಾ ಹಿನ್ನೆಲೆಯಲ್ಲಿ ಕಾಂಗ್ರೆಸ್‌‍ನೊಳಗೆ ಬಲಾ-ಬಲ ಪ್ರದರ್ಶನಕ್ಕೆ ಗುಂಪು ರಾಜಕಾರಣ ಶುರು

Group politics begins within Congress in wake of Rajanna's dismissal

ಬೆಂಗಳೂರು, ಆ.14- ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟ ಬೆನ್ನಲ್ಲೇ ಕಾಂಗ್ರೆಸ್‌‍ನಲ್ಲಿ ಬಲಾ-ಬಲ ಪ್ರದರ್ಶನಕ್ಕೆ ವೇದಿಕೆಗಳು ಸಿದ್ಧಗೊಳ್ಳುತ್ತಿದ್ದು ಬೆಳಗಾವಿ ಮೂಲದ ಸತೀಶ್‌ ಜಾರಕಿಹೊಳಿ ಅವರಿಂದಲೇ ಗುಂಪು ರಾಜಕಾರಣ ಆರಂಭವಾಗಿದೆ.

ರಾಜಣ್ಣ ಅವರನ್ನು ಏಕಾಏಕಿ ಸಂಪುಟದಿಂದ ವಜಾಗೊಳಿಸಿರುವುದರಿಂದ ಪರಿಶಿಷ್ಟ ಪಂಗಡಗಳಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆೆ. ಮುಂದಿನ ದಿನಗಳಲ್ಲಿ ನಡೆಯುವ ವಿವಿಧ ಚುನಾವಣೆಗಳ ಮೇಲೆ ಈ ಅಸಮಾಧಾನ ಪರಿಣಾಮ ಬೀರಲಿದೆ. ಹೀಗಾಗಿ ಕೂಡಲೇ ಹೈಕಮಾಂಡ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದಲ್ಲಿ ವಿಶ್ವಾಸ ಮೂಡುವಂತೆ ಸಕಾರಾತಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ವೇದಿಕೆ ಸಿದ್ಧಗೊಂಡಿದೆ.

ನಿನ್ನೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪರಿಶಿಷ್ಟ ಪಂಗಡಗಳ ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ ಅಸಮಾಧಾನವನ್ನು ಹೊರಹಾಕಿದೆ.ರಾಜಣ್ಣ ಅವರ ಪದಚ್ಯುತಿ ಸಮುದಾಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ. ಇದನ್ನು ಸರಿಪಡಿಸದೇ ಇದ್ದರೆ ಬಿಜೆಪಿ, ರಾಜಣ್ಣ ಅವರನ್ನು ಸೆಳೆದುಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಅವರಿಗೆ ವಿವರಿಸಲಾಗಿದೆ.

ಪರಿಶಿಷ್ಟ ಪಂಗಡಗಳ ಶಾಸಕರ ನಿಯೋಗ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಕಾಂಗ್ರೆಸ್‌‍ನ ಪರಮೋಚ್ಚ ನಾಯಕಿ ಸೋನಿಯಾಗಾಂಧಿ. ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ ಮತ್ತಿತರರನ್ನು ಭೇಟಿ ಮಾಡುತ್ತೇವೆ. ರಾಜಣ್ಣ ಅವರ ವಿರುದ್ಧ ನಡೆದ ಷಢ್ಯಂತರ ಕುರಿತು ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಷಯವಾಗಿ ನಾನು ಏನನ್ನು ಹೇಳಲೂ ಸಾಧ್ಯವಿಲ್ಲ. ನಿಮಗೆ ಸರಿ ಎನಿಸಿದಂತೆ ಮಾಡಿ ಎಂದು ಸಿದ್ದರಾಮಯ್ಯ ಕೈ ಚೆಲ್ಲಿದ್ದಾರೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದ ಶಾಸಕರ ನಿಯೋಗ ದೆಹಲಿಗೆ ತೆರಳಲು ಸಜ್ಜುಗೊಂಡಿದೆ. ವಿಧಾನಮಂಡಲದ ಅಧಿವೇಶನದ ಬಳಿಕ ಶಾಸಕರು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ರಾಜಣ್ಣ ಮತ್ತು ವಿ. ನಾಗೇಂದ್ರ ಅವರನ್ನು ಕೈಬಿಟ್ಟಿರುವುದರಿಂದ ಸಂಪುಟದಲ್ಲಿ ಪರಶಿಷ್ಟ ಪಂಗಡಗಳ ಪ್ರಾತಿನಿಧ್ಯ ಕಡಿಮೆಯಾಗಿದೆ. ತೆರವಾಗಿರುವ ಎರಡು ಸ್ಥಾನಗಳನ್ನು ಮತ್ತೆ ಪರಿಶಿಷ್ಟ ಪಂಗಡಕ್ಕೆ ನೀಡಬೇಕು ಎಂದು ಒತ್ತಡ ಹಾಕಲಾಗುತ್ತಿದೆ.

ಈ ಹಿಂದೆ ಬೆಳಗಾವಿಯಲ್ಲಿನ ರಾಜಕಾರಣ ಜೆಡಿಎಸ್‌‍- ಕಾಂಗ್ರೆಸ್‌‍ ಸಮಿಶ್ರ ಸರ್ಕಾರಕ್ಕೆ ಮುಳುವಾಗಿತ್ತು. ಪ್ರತಿ ಸರ್ಕಾರದ ಅವಧಿಯಲ್ಲೂ ಬೆಳಗಾವಿ ರಾಜಕಾರಣ ಕೇಂದ್ರ ಬಿಂದುವಾಗಿದೆ.ಜೆಡಿಎಸ್‌‍ ಮತ್ತು ಕಾಂಗ್ರೆಸ್‌‍ ಸಮಿಶ್ರ ಸರ್ಕಾರದಲ್ಲಿ ಭಿನ್ನಮತೀಯ ಚಟುವಟಿಕೆಗೆ ಆಗ ರಮೇಶ್‌ ಜಾರಕಿಹೊಳಿ ಮುಂದಾಳತ್ವ ವಹಿಸಿದ್ದರು. ಈಗ ಕಾಂಗ್ರೆಸ್‌‍ ಸರ್ಕಾರದಲ್ಲಿ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಪ್ರತ್ಯೇಕ ಗುಂಪುಗಳ ಚರ್ಚೆ ನಡೆಯುತ್ತಿದೆ.ಪ್ರತಿ ಹಂತದ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳುಸುತ್ತಿವೆ.

RELATED ARTICLES

Latest News