ನವದೆಹಲಿ,ಆ.24- ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಸೆ.3 ಮತ್ತು 4ರಂದು ದೆಹಲಿಯಲ್ಲಿ ತನ್ನ 56ನೇ ಸಭೆಯನ್ನು ಆಯೋಜಿಸಿದೆ. ಈ ಎರಡೂ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕಲಾಪಗಳು ಪ್ರಾರಂಭವಾಗುತ್ತವೆ.
ಪ್ರಧಾನಿ ಮೋದಿ ಅವರ ದೀಪಾವಳಿ ಗಿಫ್ಟ್ ಘೋಷಣೆಯ ಬಗ್ಗೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಹೆಚ್ಚುವರಿಯಾಗಿ, ಸೆಪ್ಟೆಂಬರ್ 2 ರಂದು ರಾಜಧಾನಿಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಅಧಿವೇಶನಗಳ ಕಾರ್ಯಸೂಚಿ, ಸ್ಥಳದ ವಿವರಗಳೊಂದಿಗೆ, ನಂತರದ ದಿನಾಂಕದಲ್ಲಿ ಭಾಗವಹಿಸುವವರಿಗೆ ಹಂಚಿಕೊಳ್ಳಲಾಗುವುದು ಎಂದು ಸದಸ್ಯರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ದೇಶದಲ್ಲಿ ಇದೀಗ ಶೇ.5, ಶೇ.12, ಶೇ.18 ಮತ್ತು ಶೇ.28- ಹೀಗೆ 4 ಸ್ತರಗಳಲ್ಲಿ ಜಿಎಸ್ಟಿ ವಿಧಿಸಲಾಗುತ್ತಿದೆ. ಇದನ್ನು 2 ಸ್ತರಗಳಿಗೆ ಇಳಿಸಲು ಸಚಿವಾಲಯ ಶಿಫಾರಸು ಮಾಡಿದೆ ಎಂದಿದೆ. ಅರ್ಥಾತ್ ಈ 4 ಸ್ತರಗಳ ಜಿಎಸ್ಟಿಗಳ ಪೈಕಿ 2 ಸ್ತರಗಳು ರದ್ದಾಗಲಿವೆ.
ಇದೇ ವೇಳೆ ಮಾಹಿತಿ ನೀಡಿರುವ ಮೂಲಗಳು, ಱಶೇ.18 ಹಾಗೂ ಶೇ.5 ಸ್ಲ್ಯಾಬ್ ಮಾತ್ರ ಉಳಿವ ಸಾಧ್ಯತೆ ಇದೆ. ಶೇ.12ರ ಸ್ಲ್ಯಾಬ್‌ನಲ್ಲಿರುವ ಶೇ.99 ವಸ್ತುಗಳು ಶೇ.5ರ ಸ್ಲ್ಯಾಬ್‌ಗೆ ಇಳಿಕೆ ಆಗುವ ಸಾಧ್ಯತೆ ಇದೆ. ಶೇ.28ರ ಸ್ಲ್ಯಾಬ್‌ನಲ್ಲಿರುವ ಶೇ.90ರಷ್ಟು ವಸ್ತುಗಳ ಜಿಎಸ್ಟಿ ಶೇ.18ಕ್ಕೆ ಇಳಿಯಲಿದೆ. ಈವರೆಗೆ ಶೇ.28ರಷ್ಟು ಜಿಎಸ್ಟಿಯಲ್ಲಿದ್ದ ಮದ್ಯ, ಸಿಗರೇಟ್‌ನಂಥ ಉತ್ಪನ್ನಕ್ಕೆ (ಸಿನ್ ಗೂಡ್‌್ಸ) ಶೇ.40ರಷ್ಟು ಜಿಎಸ್ಟಿ ಹಾಕುವ ಯೋಚನೆ ಇದೆ.
ದೀಪಾವಳಿ ವೇಳೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಬದಲಾಗುವ ಪ್ರಸ್ತಾವನೆಗಳಲ್ಲಿ ಸಣ್ಣ ಕಾರುಗಳ ಮೇಲೆ ತೆರಿಗೆಯನ್ನು ಕಡಿತಗೊಳಿಸುವುದೂ ಸೇರಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ಈಗ ಇರುವ ಶೇ.28ರಷ್ಟು ಜಿಎಸ್‌ಟಿಯನ್ನು ಶೇ.18ಕ್ಕೆ ಇಳಿಸಲು ಸರಕಾರ ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾರಿನ ಎಂಜಿನ್ ಸಾಮರ್ಥ್ಯ ಮತ್ತು ಅದರ ಗಾತ್ರವನ್ನು ಆಧರಿಸಿ ತೆರಿಗೆ ಸ್ಪ್ಯಾಬ್ ಬದಲಾಗುತ್ತದೆ. ತೆರಿಗೆ ಕಡಿತದಿಂದ ಸರಕಾರದ ಆದಾಯ ಕೊಂಚ ತಗ್ಗುತ್ತದೆ. ಆದರೆ ಇದು ಸೂಕ್ತ ನಿರ್ಧಾರ, ಇದು ಅಮೆರಿಕದ ಪ್ರತಿಸುಂಕ ಸಮರಕ್ಕೆ ತಕ್ಕ ಉತ್ತರವಾಗಲಿದೆ ಎನ್ನುವುದು ಆಟೊಮೊಬೈಲ್ ವಲಯದ ವಿಶ್ವಾಸವಾಗಿದೆ.
ಕಳೆದ ಕೆಲವು ವರ್ಷಗಳಿಂದ 1200 ಸಿಸಿಗಿಂತ ಕಡಿಮೆ ಇರುವ ಪೆಟ್ರೋಲ್ ಚಾಲಿತ ವಾಹನಗಳು ಹಾಗೂ 1500 ಸಿಸಿಗಿಂತಲೂ ಇಡಿಮೆ ಎಂಜಿನ್ ಸಾಮರ್ಥ್ಯವಿರುವ 4 ಮೀಟರ್ ಉದ್ದ ಮೀರದ ಕಾರುಗಳ ಮಾರಾಟ ಪ್ರಮಾಣ ಕಡಿಮೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಮಾರಾಟವಾದ 4.3 ದಶಲಕ್ಷ ಪ್ರಯಾಣಿಕ ವಾಹನಗಳಲ್ಲಿ ಸಣ್ಣ ಕಾರುಗಳ ಪ್ರಮಾಣ ಮೂರನೇ ಒಂದು ಭಾಗದಷ್ಟಿತ್ತು. ಇದು ಕೋವಿಡ್‌ಗಿಂತ ಮೊದಲು ಇದ್ದ ಮಾರಾಟಕ್ಕಿಂತಲು ಶೇ. 50ರಷ್ಟು ಕಡಿಮೆ.
ಜಪಾನ್‌ನ ಸುಜುಕಿ ಮೋಟಾರ್ ಒಡೆತನದ ಮಾರುತಿ ಕಾರ್ಗಳ ಮಾರಾಟ ಕೂಡ ಇಳಿಕೆಯಾಗಿದೆ. 2025ನೇ ಹಣಕಾಸು ವರ್ಷದಲ್ಲಿ ಎಸ್‌ಯುವಿ ಮಾರಾಟದಲ್ಲಿ ಶೇ.10.2 ರಷ್ಟು ಹೆಚ್ಚಾಗಿದೆ.
ಒಟ್ಟಾರೆ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳ ಪಾಲು ಸತತ 5 ವರ್ಷಗಳಿಂದ ಇಳಿಕೆಯ ಹಾದಿಯಲ್ಲಿದೆ. 2025ನೇ ಹಣಕಾಸು ವರ್ಷದಲ್ಲಿ ಈ ಪ್ರಮಾಣ ಶೇ. 23.4ಕ್ಕೆ ಇಳಿದಿದೆ. ಈ ಹಣಕಾಸು ವರ್ಷದ ಮೊದಲ 4 ತಿಂಗಳಲ್ಲಿ ಇದು ಶೇ. 21ಕ್ಕೆ ಇಳಿದಿದೆ. ಹೀಗಾಗಿ ಸಣ್ಣ ಕಾರುಗಳ ತೆರಿಗೆ ಇಳಿಸುವುದು ಅನಿವಾರ್ಯವೂ ಆಗಿದೆ.
ಮಾರಾಟ ವೃದ್ಧಿ ನಿಚ್ಚಳ
ಸಣ್ಣ ಕಾರುಗಳನ್ನು ಈಗ ಶೇ.18ರ ತೆರಿಗೆ ಸ್ಪ್ಯಾಬ್‌ಗೆ ತರುವ ಸಾಧ್ಯತೆ ನಿಚ್ಚಳವಾಗಿದೆ. 4 ಮೀಟರ್‌ಗಿಂತ ಕಡಿಮೆ ಉದ್ದ ಹಾಗೂ 1200 ಸಿಸಿವರೆಗೆಇನ ಎಂಜಿನ್ ಸಾಮರ್ಥ್ಯದ (ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲ್‌ಪಿಜಿ) ಕಾರುಗಳು ಕಡಿಮೆ ತೆರಿಗೆ ವ್ಯಾಪ್ತಿಗೆ ಬಂದರೆ ಮಾರಾಟ ಪ್ರಮಾಣ ವೃದ್ಧಿಸುತ್ತದೆ ಎಂಬುದು ತಜ್ಞರ ಅಭಿಮತ.
ಈಗಿರುವ ತೆರಿಗೆ ಪ್ರಮಾಣ
ತೆರಿಗೆ ಮಾತ್ರವೇ ಅಲ್ಲದೆ, ವಾಹನಗಳ ಮೇಲೆ ಶೇ. 1ರಿಂದ ಶೇ.22ರವರೆಗೆ ಪರಿಹಾರ ಸೆಸ್ ವಿಧಿಸಲಾಗುತ್ತಿದೆ. ಇದು ವಾಹನ ಯಾವ ಬಗೆಯದ್ದು ಎಂಬುದನ್ನು ಆಧರಿಸಿ ತೀರ್ಮಾನವಾಗುತ್ತದೆ. ವಾಹನಗಳ ಎಂಜಿನ್ ಸಾಮರ್ಥ್ಯ ಹಾಗೂ ವಾಹನಗಳ ಉದ್ದವನ್ನು ಆಧರಿಸಿ ಒಟ್ಟು ತೆರಿಗೆ ಪ್ರಮಾಣವು ಶೇ.29ರಿಂದ ಶೇ. 50ರವರೆಗೆ ಇರುತ್ತದೆ. ಪೆಟ್ರೋಲ್‌ಚಾಲಿತ ಸಣ್ಣ ಕಾರುಗಳಿಗೆ ಶೇ.29ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಎಸ್‌ಯುವಿಗಳಿಗೆ ಶೇ.50ರಷ್ಟು ತೆರಿಗೆ ಇರುತ್ತದೆ. ವಿದ್ಯುತ್ ಚಾಲಿತ ವಾಹನಗಳಿಗೆ ಶೇ.5ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.
ಮೋದಿ ಹೇಳಿಕೆ ಹಾಗೂ ಹಣಕಾಸು ಸಚಿವಾಲಯದ ಹೇಳಿಕೆಗಳು ದೀಪಾವಳಿ ಹೊತ್ತಿಗೆ ದಿನಬಳಕೆ ವಸ್ತುಗಳ ತೆರಿಗೆ ಭಾರ ಇಳಿಕೆಯಾಗುವ ಸುಳಿವು ನೀಡಿವೆ. ಇದನ್ನು ಉದ್ಯಮ ವಲಯ ಹಾಗೂ ಜನಸಾಮಾನ್ಯರು ಸ್ವಾಗತಿಸಿದ್ದಾರೆ.