Thursday, July 24, 2025
Homeರಾಜ್ಯಬೀದಿಬದಿ, ಸಣ್ಣ ವಾಪಾರಿಗಳಿಗೆ ಜಿಎಸ್‌ಟಿ ವಿನಾಯ್ತಿ..?

ಬೀದಿಬದಿ, ಸಣ್ಣ ವಾಪಾರಿಗಳಿಗೆ ಜಿಎಸ್‌ಟಿ ವಿನಾಯ್ತಿ..?

GST exemption for street vendors, small traders..?

ಬೆಂಗಳೂರು,ಜು.23- ಸಣ್ಣ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟೀಸ್‌‍ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಹತ್ವದ ಸಭೆ ನಡೆಸಲಿದ್ದು, ಬಹುತೇಕ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಸರಕು ಮತ್ತು ಸೇವೆಗಳ ಕಾಯ್ದೆಯ ಸೆಕ್ಷನ್‌-22 ರನ್ವಯ ಕಡ್ಡಾಯ ನೋಂದಣಿ ಮಾಡಿಕೊಳ್ಳುವಂತೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಕಳೆದ 20 ದಿನಗಳಿಂದಲೂ ನೋಟೀಸ್‌‍ ನೀಡಿದೆ.

ನೋಟೀಸ್‌‍ನಲ್ಲಿ ಈ ಹಿಂದಿನ 4 ವರ್ಷಗಳ ವಹಿವಾಟನ್ನು ಉಲ್ಲೇಖಿಸಲಾಗಿದೆ. ಯುಪಿಐ ಮತ್ತು ಬ್ಯಾಂಕ್‌ ವಹಿವಾಟನ್ನು ಆಧರಿಸಿ ಸರಾಸರಿ ವ್ಯಾಪಾರದ ಅಂದಾಜಿನಲ್ಲಿ ತೆರಿಗೆ ಕಟ್ಟುವಂತೆ ನೋಟೀಸ್‌‍ನಲ್ಲಿ ಉಲ್ಲೇಖಿಸಿರುವುದು ವರ್ತಕರನ್ನು ಆತಂಕಕ್ಕೀಡು ಮಾಡಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದ 2 ದಿನಗಳ ಕಾಲ ಹಾಲು, ಮೊಸರು, ಟೀ, ಕಾಫಿ ಮಾರಾಟ ಮಾಡದೇ ಅಸಹಕಾರದ ಮುಷ್ಕರವನ್ನು ಸಣ್ಣ ಹಾಗೂ ಬೀದಿಬದಿ ವ್ಯಾಪಾರಿಗಳು ಆರಂಭಿಸಿದ್ದಾರೆ. ಇಂದು ಮತ್ತು ನಾಳೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಜು.25 ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಪ್ರತಿಭಟನಾನಿರತರೊಂದಿಗೆ ಸಂಧಾನ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸುತ್ತಿದ್ದು, ಅದನ್ನು ಮುಷ್ಕರನಿರತರು ಬಹಿಷ್ಕರಿಸಿದ್ದಾರೆ.

ಸಭೆಗೆ ತೆರಿಗೆ ಪಾವತಿ ಮಾಡುವ ವಾಣಿಜ್ಯ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ಅಲ್ಲಿ ಯಾವ ರೀತಿಯ ಚರ್ಚೆಗಳಾಗುತ್ತವೆ ಎಂಬುದು ಮೇಲ್ನೋಟಕ್ಕೆ ಕಂಡುಬರಲಿದ್ದು, ಸಣ್ಣಪುಟ್ಟ ವ್ಯಾಪಾರಸ್ಥರಿಗೂ ತೆರಿಗೆ ಕಟ್ಟಿ ಎಂಬ ಒತ್ತಡ ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಸಭೆಗಳನ್ನು ಬಹಿಷ್ಕರಿಸುವುದಾಗಿ ಸಣ್ಣ ಉದ್ದಿಮೆದಾರರ ಸಂಘಟನೆಗಳ ಒಂದು ಬಣ ಬಹಿಷ್ಕಾರ ಹಾಕಿದೆ. ಆದರೆ ಇನ್ನೂ ಕೆಲವರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.ಸಣ್ಣ ಉದ್ಯಮಗಳ ವ್ಯಾಪಾರಸ್ಥರು ಅಸಂಘಟಿತ ವಲಯವಾಗಿದ್ದು, ನೋಟೀಸ್‌‍ ಬಳಿಕ ಸಂಘಟನಾತಕ ಚಟುವಟಿಕೆಗಳು ಚುರುಕುಗೊಂಡಿವೆ.

ಪರಿಹಾರದ ಸಾಧ್ಯತೆ :
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಸಣ್ಣ ವಾಣಿಜ್ಯೋದ್ಯಮಿಗಳೊಂದಿಗೆ ಚರ್ಚೆ ನಡೆಸಲಿದ್ದು, ಈಗಾಗಲೇ ನೀಡಿರುವ ನೋಟೀಸ್‌‍ಗಳನ್ನು ಬದಿಗಿರಿಸಿ ಮುಂದಿನ ದಿನಗಳಲ್ಲಿ ನಿಯಮಬದ್ಧವಾಗಿ ಜಿಎಸ್‌‍ಟಿ ನೋಂದಣಿ ಪಡೆದುಕೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆಯಿದೆ.

ಈ ಹಿಂದೆ ನಾಲ್ಕು ವರ್ಷಗಳ ವಹಿವಾಟಿನ ಸರಾಸರಿ ಅಂದಾಜಿನ ವೇಳೆ ಕರಾರುವಾಕ್ಕಾದ ಮಾಹಿತಿಗಳು ದೊರೆಯುವುದು ಕಷ್ಟಸಾಧ್ಯ. ವ್ಯಾಪಾರಕ್ಕೆ ಸಂಬಂಧಪಟ್ಟಂತಹ ವಹಿವಾಟುಗಳು ಅಥವಾ ವೈಯಕ್ತಿಕ ಹಣಕಾಸಿನ ಚಟುವಟಿಕೆಗಳನ್ನು ವಿಂಗಡಣೆ ಮಾಡುವುದು ಸುಲಭಸಾಧ್ಯವಲ್ಲ. ಹೀಗಾಗಿ ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತರುವ ಸಾಧ್ಯತೆಯಿಲ್ಲ ಎಂಬ ಚರ್ಚೆಗಳಿವೆ.

ಯುಪಿಐ ಮತ್ತು ಬ್ಯಾಂಕಿನ ವಹಿವಾಟಿನ ಆಧಾರದ ಮೇಲೆ ಹಾಗೂ ಉದ್ದಿಮೆದಾರರ ಖರೀದಿಯ ಚಟುವಟಿಕೆಗಳನ್ನು ಪರಿಗಣಿಸಿ ಸೇವಾವಲಯದಲ್ಲಿ 20 ಲಕ್ಷ ಹಾಗೂ ಉತ್ಪನ್ನ ಮತ್ತು ಸರಕುಗಳ ವಲಯದಲ್ಲಿ 40 ಲಕ್ಷ ವಹಿವಾಟುದಾರರಿಗೆ ಕನಿಷ್ಠ ಪ್ರಮಾಣದ ತೆರಿಗೆ ವಿಧಿಸುವ ಸಾಧ್ಯತೆಯಿದೆ.

ನೋಟೀಸ್‌‍ಗಳಿಗೆ ಸೂಕ್ತವಾದ ಸಮಜಾಯಿಷಿ ನೀಡಿದ್ದಾದರೆ ತೆರಿಗೆ ದಂಡ ಪಾವತಿಯಿಂದ ವರ್ತಕರು ಮುಕ್ತರಾಗುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರ್ಕಾರ ಜಿಎಸ್‌‍ಟಿ ಕಾನೂನಿನಡಿ ಅಧಿಸೂಚಿತ ಸರಕು ಮತ್ತು ಸೇವೆಗಳನ್ನು ನಿರ್ವಹಣೆ ಮಾಡುವ ಸೂಕ್ಷ್ಮ, ಸಣ್ಣ, ಮಧ್ಯಮ ಹಾಗೂ ದೊಡ್ಡ ಪ್ರಮಾಣದ ವರ್ತಕರು ಕಡ್ಡಾಯವಾಗಿ ಜಿಎಸ್‌‍ಟಿ ನೋಂದಣಿಯಾಗಲೇಬೇಕು. ಕಾನೂನನ್ನು ಪಾಲನೆ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗಳಾಗದೆ ನಿರಾತಂಕವಾಗಿ ವ್ಯಾಪಾರ ನಡೆಸಲು ಅನುಕೂಲವಾಗಲಿದೆ ಎಂಬ ಸಂದೇಶ ನೀಡಲು ರಾಜ್ಯಸರ್ಕಾರ ಮುಂದಾಗಿದೆ.

ಜಿಎಸ್‌‍ಟಿ ನೋಂದಣಿಯಿಂದ ಸಣ್ಣಪ್ರಮಾಣದ ಉದ್ಯಮಿಗಳಿಗೆ ತೆರಿಗೆ ಮರುಪಾವತಿ ಜೊತೆಗೆ ಬ್ಯಾಂಕಿಂಗ್‌ ಸಾಲ ಹಾಗೂ ಇತರ ಸೌಲಭ್ಯಗಳು ದೊರೆಯುವ ಅನುಕೂಲತೆಗಳು ಹೆಚ್ಚಿವೆ. ಈಗ ನೀಡಿರುವ ನೋಟೀಸ್‌‍ಗಳಿಗೆ ಯಾವುದೇ ರೀತಿ ಆತಂಕಗೊಳ್ಳದೆ ಮುಂದಿನ ದಿನಗಳಲ್ಲಿ ಸುಗಮ ಹಾಗೂ ಸುಲಭ ವ್ಯಾಪಾರದತ್ತ ಗಮನ ಹರಿಸಿ ಎಂದು ರಾಜ್ಯಸರ್ಕಾರ ಸೂಚಿಸುವ ನಿರೀಕ್ಷೆಯಿದೆ.

RELATED ARTICLES

Latest News