Thursday, July 24, 2025
Homeರಾಜ್ಯರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿರುವುದರಿಂದಲೇ ವ್ಯಾಪಾರಿಗಳಿಗೆ ಜಿಎಸ್‌‍ಟಿ ನೋಟೀಸ್‌‍ : ವಿಜಯೇಂದ್ರ

ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿರುವುದರಿಂದಲೇ ವ್ಯಾಪಾರಿಗಳಿಗೆ ಜಿಎಸ್‌‍ಟಿ ನೋಟೀಸ್‌‍ : ವಿಜಯೇಂದ್ರ

GST notices to traders only because the state government's treasury is empty: Vijayendra

ಬೆಂಗಳೂರು,ಜು.23- ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿರುವುದರಿಂದಲೇ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌‍ಟಿ ನೋಟೀಸ್‌‍ ಕೊಟ್ಟು ಅಲ್ಲಿಯೂ ಹಣ ವಸೂಲಿಗೆ ಮುಂದಾಗಿದ್ದಾರೆ. ತಕ್ಷಣವೇ ಇದನ್ನು ಈ ಕೂಡಲೇ ಹಿಂಪಡೆಯುವಂತೆ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ವ್ಯಾಪಾರಿಗಳಿಗೆ ನೊಟೀಸ್‌‍ ಕೊಟ್ಟಿದೆ. ಇದು ಬಹಳ ಚರ್ಚೆಗೆ ಅವಕಾಶ ನೀಡಿದೆ, ವ್ಯಾಪಾರಿಗಳು ಆತಂಕದಲ್ಲಿದ್ದಾರೆ. ಸಚಿವರು ಕೇಂದ್ರ ಸರ್ಕಾರ ದೂರುವ ಕುತಂತ್ರ ಮಾಡುತ್ತಿದ್ದಾರೆ ಎಂದು ದೂರಿದರು. ಜಿಎಸ್‌‍ಟಿ ಸಂಗ್ರಹದಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ಬರಬೇಕು ಎಂದು ಸಿಎಂ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಜೊತೆಗೆ ಅಧಿಕಾರಿಗಳಿಗೂ ಟಾರ್ಗೆಟ್‌ ನೀಡಿದ್ದರು.

ಇದರಿಂದ ಈಗ ಸತ್ಯ ಬಯಲಾಗಿದೆ, ನೋಟೀಸ್‌‍ ಕೊಟ್ಟು ಅಧಿಕಾರಿಗಳ ಮೂಲಕ ಸರ್ಕಾರ ವಸೂಲಿಗೆ ಇಳಿದಿದೆ. ನೋಟೀಸ್‌‍ ಕೊಟ್ಟಿರುವುದು ಅಕ್ರಮ, ನೋಟೀಸ್‌‍ ಕೊಡುವುದುನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು. ಈಗಾಗಲೇ ಕೊಟ್ಟಿರುವ ನೊಟೀಸ್‌‍ ಹಿಂಪಡೆಯಬೇಕು. ಬಿಜೆಪಿಯೂ ವ್ಯಾಪಾರಿಗಳ ಪ್ರತಿಭಟನೆಗೆ ಬಿಜೆಪಿಯಿಂದ ಬೆಂಬಲ ಘೋಷಿಸಿದೆ. ಖಜಾನೆ ಖಾಲಿ ಆಗಿದೆ ಎಂದು ರಾತೋರಾತ್ರಿ ನೊಟೀಸ್‌‍ ಕೊಟ್ಟಿದ್ದಾರೆ. ಈ ಸರ್ಕಾರದಿಂದಲೇ ನೊಟೀಸ್‌‍ ಅಕ್ರಮ ನಡೆದಿದೆ. ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌‍ ಪುಢಾರಿಗಳು ಅನೇಕ ಬಾರಿ ಬಿಜೆಪಿ ಕಚೇರಿ ಎದುರು ಬಂದು ಪ್ರತಿಭಟನೆ ಮಾಡುತ್ತಿದ್ದರು. ಅವರಿಗೆ ಹೋರಾಟ ಮಾಡುವ ಚಟ ಇದ್ದರೆ, ಫ್ರೀಡಂ ಪಾರ್ಕ್‌ಗೆ ಹೋಗಿ ಮಾಡಲಿ. ಆದರೆ, ಬಿಜೆಪಿ ಕಚೇರಿ ಎದುರು ಪದೇಪದೇ ಗೂಂಡಾ ವರ್ತನೆ ಮಾಡುವುದು ಸರಿಯಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇದನ್ನು ಗಮನಿಸಲಿ, ಬಿಜೆಪಿ ಕಚೇರಿ ಎದುರು ಅವರ ಕಾರ್ಯಕರ್ತರ ಪ್ರತಿಭಟನೆ ತಪ್ಪಿಸಲಿ ಎಂದು ಒತ್ತಾಯಿಸಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ಚಿಟ್‌ ನೀಡಿಲ್ಲ. ಇದರಲ್ಲಿ ಸಿಎಂ ನಿರಪರಾಧಿ ಎಂದೂ ಹೇಳಿಲ್ಲ. ಪ್ರಕರಣದಲ್ಲಿ ಸಿಎಂ, ಅವರ ಕುಟುಂಬದವರ ಪಾತ್ರ ಇದೆ, ಎಫ್‌ಐಆರ್‌ ಸಹ ದಾಖಲಾಗಿದೆ. ನಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಅಪಪ್ರಚಾರ ನಿಲ್ಲಿಸಲಿ :
ಧರ್ಮಸ್ಥಳ ಎಸ್‌‍ಐಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಈ ಬಗ್ಗೆ ಶೀಘ್ರದಲ್ಲೇ ತನಿಖೆ ಆಗಬೇಕು. ಅಲ್ಲದೆ ಪಾರದರ್ಶಕ ತನಿಖೆಯೂ ನಡೆಯಲಿ. ಆದರೆ, ಇದೇ ವಿಚಾರ ಇಟ್ಟುಕೊಂಡು ಧರ್ಮಸ್ಥಳದಲ್ಲಿ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗಬಾರದು. ಏನೇನು ಕುತಂತ್ರ ನಡಿಯುತ್ತಿದೆ ಎಂಬುದು ನಮಗೂ ಗೊತ್ತಿದೆ.

ಆದರೆ, ಅಲ್ಲಿನ ವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡಬಾರದು. ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮಸ್ಯೆ ವಿಚಾರವಾಗಿ, ರಾಜ್ಯ ಸರ್ಕಾರ, ಸಿಎಂ, ಕೃಷಿ ಸಚಿವರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈಗಲೂ ಕಾಲ ಮಿಂಚಿಲ್ಲ. ರೈತರಿಗೆ ಅನುಕೂಲ ಆಗುವಂತೆ ಕ್ರಮ ವಹಿಸಬೇಕು. ಕೂಡಲೇ ಸಿಎಂ, ಕೃಷಿ ಸಚಿವರು, ಉಸ್ತುವಾರಿ ಸಚಿವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಕಾಂಗ್ರೆಸ್‌‍ ಶಾಸಕರಿಗೆ 50 ಕೋಟಿ ಅನುದಾನ ನೀಡಿರುವ ವಿಚಾರವಾಗಿ, 50 ಕೋಟಿ ಅವರಿಗೂ ಇನ್ನೂ ಕೊಟ್ಟಿಲ್ಲ. ಅಧಿವೇಶನ ನಡೆಯುತ್ತಿದೆ. ಹಾದಿಬೀದಿಯಲ್ಲಿ ಅವರ ಸರ್ಕಾರದ ಬಗ್ಗೆ ಶಾಸಕರು ಮಾತನಾಡುತ್ತಿದ್ದಾರೆ. ಅಧಿವೇಶನ ಸುಸೂತ್ರವಾಗಿ ನಡೆಯಬೇಕು ಎಂದು ಅನುದಾನ ಘೋಷಣೆ ಅಷ್ಟೇ ಮಾಡಿದ್ದಾರೆ. ತಪ್ಪಿಸಿಕೊಳ್ಳುವ ಕುತಂತ್ರ ಕೂಡ ಇದರಲ್ಲಿದೆ. ಹಣ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಅಷ್ಟೇ ಇದು. ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡುವುದಿಲ್ಲ.

ಹಣ ಬಿಡುಗಡೆ ಮಾಡಿದರೆ ನಂತರ ನಾವು ಮಾತನಾಡುತ್ತೇವೆ ಎಂದು ಹೇಳಿದರು. ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಸರ್ಕಾರದ ವೈಫಲ್ಯಗಳನ್ನು ಸದನದಲ್ಲಿ ಚರ್ಚೆ ಮಾಡಲಾಗಿದೆ. ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ಶಾಸಕರ ಸಭೆಯನ್ನೂ ಮುಂದೆ ಮಾಡುತ್ತೇವೆ. ಸದ್ಯದಲ್ಲೇ ಜೆಡಿಎಸ್‌‍ ನಾಯಕರ ಜತೆಗೂ ಸಭೆ ನಡೆಸುತ್ತೇವೆ. ಬಿಜೆಪಿ ಜೆಡಿಎಸ್‌‍ ಒಟ್ಟಾಗಿ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ, ಚರ್ಚೆ ಮಾಡುವುದಾಗಿ ವಿಜಯೇಂದ್ರ ಹೇಳಿದರು.

RELATED ARTICLES

Latest News