ಬೆಂಗಳೂರು,ಜ.31- ಕೇಂದ್ರ ಸರ್ಕಾರ ಬಜೆಟ್ ನಾಳೆ ಮಂಡನೆಯಾಗಲಿದ್ದು, ಕ್ಷಣಗಣನೆ ಆರಂಭವಾಗಿದ್ದು, ಕರ್ನಾಟಕ ಸರ್ಕಾರ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಬೆಂಗಳೂರಿನ ಮಹತ್ವದ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ರಾಜ್ಯದ ಹಲವು ಮಹತ್ವದ ಯೋಜನೆಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ. ಈ ಸಂಬಂಧ ಈಗಾಗಲೇ ಕೇಂದ್ರದ ಮುಂದೆ ಅಧಿಕೃತ ಬೇಡಿಕೆಯ ಪಟ್ಟಿ ಸಲ್ಲಿಸಿದೆ.
ಪ್ರಮುಖವಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಹಲವು ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರಾಜ್ಯದ ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಸಂಬಂಧ ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದು ತಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಭದ್ರಾ ಮೇಲ್ದಂಡೆಗೆ 5,300 ಕೋಟಿ ಬಿಡುಗಡೆಗೆ ಮನವಿ:
ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶ ಮತ್ತು ಜಾಗತಿಕ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳ ಅಭಿವೃದ್ಧಿಗೆ ವಿಶೇಷ ಹೊಂದಾಣಿಕೆಯ ಅನುದಾನ ನೀಡುವಂತೆ ಕೋರಲಾಗಿದೆ. ಬರಪೀಡಿತ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ ಈ ಹಿಂದೆಯೇ ಘೋಷಿಸಿದ್ದ 5300 ಕೋಟಿ ಬಿಡುಗಡೆಗೂಳಿಸುವಂತೆ ಮನವಿ ಮಾಡಿದ್ದಾರೆ.
ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮೋದನೆ ನೀಡಿ ಎಂದು ಮನವಿ ಮಾಡಲಾಗಿದೆ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನ 11,495 ಕೋಟಿ ಬಿಡುಗಡೆಗೊಳಿಸಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಗೌರವಧನ 5,000 ಮತ್ತು ಅಡುಗೆಯವರು ಮತ್ತು ಸಹಾಯಕರಿಗೆ 2,000ಕ್ಕೆ ಹೆಚ್ಚಳಗೊಳಿಸುವಂತೆ ಬೇಡಿಕೆ ಇಡಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ ನೆರವನ್ನು ನಗರ ಪ್ರದೇಶದ ಮನೆಗಳಿಗೆ 1.5 ಲಕ್ಷದಿಂದ 5 ಲಕ್ಷಕ್ಕೆ ಮತ್ತು ಗ್ರಾಮೀಣ ಮನೆಗಳಿಗೆ 72000 ರಿಂದ 3 ಲಕ್ಷಕ್ಕೆ ಹೆಚ್ಚಿಸಿ ಹಾಗೂ ವೃದ್ಧಾಪ್ಯ, ವಿಧವೆಯರು ಮತ್ತು ವಿಕಲಚೇತನರ ಪಿಂಚಣಿ ಹೆಚ್ಚಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಕೇಂದ್ರಕ್ಕೆ ಬೇಡಿಕೆ ಪಟ್ಟಿ ನೀಡಿದ್ದಾರೆ.
90,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ನೆರವಿನ ಬೇಡಿಕೆ:
ಬೆಂಗಳೂರಿನ ಸುಮಾರು 90,000 ಕೋಟಿ ರೂ.ಗೂ ಅಧಿಕ ವೆಚ್ಚದ ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಆರ್ಥಿಕ ನೆರವಿನ ಬೇಡಿಕೆ ಇಟ್ಟಿದೆ. ಇದರಲ್ಲಿ ಪ್ರಮುಖವಾಗಿ ಟನೆಲ್ ರಸ್ತೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಳು ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳಾಗಿವೆ. ನಗರದ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಡೆಕ್ಕರ್ ಮೇಲ್ಸೇತುವೆ, ಪಿಆರ್ಆರ್ ಬಿಸಿನೆಸ್ ಕಾರಿಡಾರ್, ನೀರು ಸರಬರಾಜು ಸೇರಿ ಅನೇಕ ಮಹತ್ವದ ಯೋಜನೆಗಳನ್ನು ಕೈಗೊಂಡಿದ್ದು, ಅವುಗಳಿಗೆ 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಅನುದಾನ ನೀಡುವಂತೆ ಡಿಸಿಎಂ ಮನವಿ ಮಾಡಿದ್ದಾರೆ.
ನಗರ ಸುರಂಗ ಮಾರ್ಗಕ್ಕೆ ಅನುದಾನದ ಮನವಿ:
ಸಂಚಾರ ದಟ್ಟಣೆ ನಿವಾರಣೆಗಾಗಿ ಟನಲ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಹೆಚ್ಎಸ್ಆರ್ ಬಡಾವಣೆಯ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೂ ಉತ್ತರ-ದಕ್ಷಿಣ 18.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ 15 ಸಾವಿರ ಕೋಟಿ ವೆಚ್ಚವಾಗಲಿದೆ.
ಕೆ.ಆರ್.ಪುರ ವೃತ್ತದಿಂದ ನಾಯಂಡನಹಳ್ಳಿ ಜಂಕ್ಷನ್ ವರೆಗೂ 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ 25 ಸಾವಿರ ಕೋಟಿ ವೆಚ್ಚವಾಗಲಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ 19 ಸಾವಿರ ಕೋಟಿ ಮೌಲ್ಯದ ಡಿಪಿಆರ್ ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿದೆ. ರಾಷ್ಟ್ರೀಯ ಹೆದ್ದಾರಿಗೂ ಈ ಟನೆಲ್ ಸಂಪರ್ಕಿಸುವುದರಿಂದ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಇವುಗಳಿಗೆ ಬಜೆಟ್ನಲ್ಲಿ ಆರ್ಥಿಕ ನೆರವು ನೀಡುವಂತೆ ಕೋರಲಾಗಿದೆ.
ಪ್ರಸಕ್ತ ಮೆಟೋ ರೈಲು ಮಾರ್ಗಗಳಿಗೆ ಐದು ಕಾರಿಡಾರುಗಳನ್ನು ವಿಸ್ತರಣೆ ಮಾಡಲು ಗುರುತಿಸಲಾಗಿದೆ. ಸುಮಾರು 129 ಕಿ.ಮೀ. ಮೆಟೋ ಮಾರ್ಗವನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ಉದ್ದೇಶಿತ ವಿಸ್ತರಿತ ಮೆಟೋ ಕಾರಿಡಾರ್ ಹೊರ ವರ್ತುಲ ರಸ್ತೆ ಹಾಗೂ ಬೆಂಗಳೂರು ಉಪನಗರವನ್ನು ಸಂಪರ್ಕಿಸುತ್ತದೆ. ಈ ಐದು ಮೆಟೋ ಕಾರಿಡಾರುಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡುವಂತೆ ಮನವಿ ಮಾಡಲಾಗಿದೆ.
ನಮ ಮೆಟೋದ ಮೂರನೇ ಹಂತದ ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೂ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಯಶಸ್ವಿ ಹಿನ್ನೆಲೆಯಲ್ಲಿ ಮೆಟೋ ನಾಲ್ಕನೇ ಹಂತದ ಯೋಜನೆಯನ್ನು ಡಬಲ್ ಡೆಕ್ಕರ್ ಮೂಲಕ ನಿರ್ಮಿಸಲು ತೀರ್ಮಾನಿಸಲಾಗಿದೆ. ಜೆ.ಪಿ.ನಗರದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೂ 45 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಹೆಚ್ಚುವರಿಯಾಗಿ ?8,916 ಕೋಟಿ ಅಗತ್ಯವಿದ್ದು, ಪೂರಕ ಅನುದಾನ ನೀಡುವಂತೆ ಆಗ್ರಹಿಸಲಾಗಿದೆ.
ನೆರೆ ನಿಯಂತ್ರಕ ಕ್ರಮಗಳಿಗೆ ಮಂಜೂರಾತಿಗೆ ಮನವಿ:
ಬೆಂಗಳೂರಲ್ಲಿ ಮಳೆಯಿಂದಾಗುವ ಅವಘಡ ತಪ್ಪಿಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ಸುಮಾರು 3,000 ಕೋಟಿ ರೂ. ನೆರವಿಗಾಗಿ ವಿಶ್ವ ಬ್ಯಾಂಕ್ಗೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಗೆ ಸಲ್ಲಿಸಲಾಗಿದೆ. ಹೀಗಾಗಿ, ಬಹುವೇಗ ಮಂಜೂರಾತಿ ನೀಡುವಂತೆ ಕೋರಿದ್ದಾರೆ.
17 ಮೇಲ್ಸೇತುವೆ, ಬಫರ್ ವಲಯ ರಸ್ತೆ ನಿರ್ಮಾಣಕ್ಕೆ ಅನುದಾನ:
ಜೊತೆಗೆ ನಗರದ ಸಂಚಾರಿ ದಟ್ಟಣೆ ಇರುವ 11 ಜಂಕ್ಷನ್ಗಳಲ್ಲಿ 99.50 ಕಿ.ಮೀ.ಗಳಷ್ಟು 17 ಮೇಲ್ಸೇತುವೆ ನಿರ್ಮಾಣ ಅಗತ್ಯವಿದ್ದು, ಇದಕ್ಕಾಗಿ 12 ಸಾವಿರ ಕೋಟಿ ಹಣ ಬೇಕಾಗಿದೆ. ಪ್ರಮುಖ ನದಿ ಹಾಗೂ ದೊಡ್ಡ ಕೆರೆಗಳು ಹಾಗೂ ರಾಜಕಾಲುವೆ ಪಕ್ಕದ ಬಫರ್ ಪ್ರದೇಶಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಈ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 3000 ಕೋಟಿ ಅಗತ್ಯವಿದ್ದು, ಪೂರಕ ಅನುದಾನ ನೀಡುವಂತೆ ಕೋರಲಾಗಿದೆ.