ಅಹಮದಾಬಾದ್, ಫೆ.4 – ಗುಜರಾತ್‌ನ ಬಿಜೆಪಿಯ ಹಿರಿಯ ನಾಯಕ ಹಾಗು ಶಾಸಕ ಕರ್ಶನ್‌ಭಾಯ್ ಸೋಲಂಕಿ (68) ಅವರು ಮುಂಜಾನೆ ಇಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಆದರೆ ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೆಹ್ಸಾನಾ ಜಿಲ್ಲೆಯ ಕಡಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋಲಂಕಿ ಅವರು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಬಳಿಕ ಅವರ ಹುಟ್ಟೂರಾದ ಕಡಿ ತಾಲೂಕಿನ ನಾಗರಸನ್‌ಗೆ ತರಲಾಗಿ ಅಂತಿಮ ದರ್ಶನ ವ್ಯವಸ್ಥೆ ನಂತರ ಅಂತ್ಯ ಸಂಸ್ಕಾರ ನೆರವೇರಲಿದೆ.
2017 ಮತ್ತು 2022ರಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾದ ಕಡಿ ವಿಧಾನಸಭಾ ಕ್ಷೇತ್ರದಿಂದ ಸೋಲಂಕಿ ಮೊದಲ ಭಾರಿಗೆ ಗೆಲುವು ಸಾಧಿಸಿದ್ದರು.ನಂತರ ಮರುಆಯ್ಕೆಗೊಂಡಿದ್ದರು.
ಸರಳ ಮತ್ತು ಸೌಮ್ಯ ಸ್ವಭಾವಕ್ಕಾಗಿ ಅವರು ಸದಾ ಸರಣೀಯರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಗುಜರಾತ್ ಸಿಎಂ ಸೇರಿದಂತೆ ಸಚಿವರು ,ಶಾಸಕರು,ಪಕ್ಷದ ಮುಖಂಡರು ಕಡಿ ಶಾಸಕ ಕರ್ಷಣಭಾಯ್ ಸೋಲಂಕಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.