ಬೆಂಗಳೂರು, ಅ.3- ನಕಲಿ ಕೀಗಳನ್ನು ಬಳಸಿ ಮನೆಗಳ್ಳತನ ಮಾಡುವುದನ್ನು ಇಂಟರ್‍ನೆಟ್ ಮೂಲಕ ನೋಡಿಕೊಂಡು ಗುಜರಿ ಅಂಗಡಿ ಮಾಲೀಕನ ಮನೆಯ ಬೀಗ ತೆಗೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ತಿಲಕ್‍ನಗರ ಠಾಣೆ ಪೊಲೀಸರು ಬಂಧಿಸಿ 1.10 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 74 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.
ಫರೂಕ್ ಬಂಧಿತ ಆರೋಪಿ. ಈತ ಗುಜರಿ ಅಂಗಡಿ ಮಾಲೀಕ ಶಹಾ ನವಾಜ್ ಅವರಿಗೆ ಪರಿಚಯಸ್ಥ. ಆರೋಪಿ ಕಳ್ಳತನ ಮಾಡಿದ್ದ ಹಣದಲ್ಲಿ ಬಹುಪಾಲು ಹಣವನ್ನು ತಾನು ಮಾಡಿದ್ದ ಸಾಲ ತೀರಿಸಲು ಬಳಸಿಕೊಂಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಆರೋಪಿಯು ಪಿಯುಸಿ ವ್ಯಾಸಂಗ ಮಾಡಿದ್ದು, ಮೂರು ತಿಂಗಳಿನಿಂದ ನಕಲಿ ಕೀ ಬಳಸಿ ಕಳ್ಳತನ ಮಾಡುವ ಬಗ್ಗೆ ಇಂಟರ್‍ನೆಟ್‍ನಲ್ಲಿ ನೋಡಿ ತಿಳಿದುಕೊಂಡಿದ್ದನು. ಲೋನ್ ಆ್ಯಪ್‍ನಲ್ಲಿ ಸಾಲ ಮಾಡಿಕೊಂಡಿದ್ದರಿಂದ ಸಾಲ ತೀರಿಸಲು ಕಳ್ಳತನ ಮಾಡಲು ಪ್ಲಾನ್ ಮಾಡಿಕೊಂಡು ಗುಜರಿ ಅಂಗಡಿ ಮಾಲೀಕನ ಮನೆಗೆ ಕನ್ನ ಹಾಕಲು ಸಂಚು ರೂಪಿಸಿ ಕುಟುಂಬ ಸಮೇತ ಅವರು ಊರಿಗೆ ಹೋಗಿದ್ದಾಗ ನಕಲಿ ಕೀಗಳನ್ನು ಬಳಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ಹಣ ಕಳ್ಳತನ ಮಾಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ವಿವರ: ಎಸ್‍ಆರ್‍ಕೆ ಗಾರ್ಡನ್, 2ನೇ ಕ್ರಾಸ್, 2ನೇ ಮುಖ್ಯರಸ್ತೆಯಲ್ಲಿ ಗುಜರಿ ಅಂಗಡಿ ಮಾಲೀಕರಾದ ಶಹಾ ನವಾಜ್ ಎಂಬುವವರು ವಾಸವಾಗಿದ್ದು, ತಮ್ಮ ಮಗಳ ಮದುವೆಗಾಗಿ ಹಣ ಹಾಗೂ ಚಿನ್ನಾಭರಣಗಳನ್ನು ಹೊಂದಿಸಿ ಮನೆಯಲ್ಲಿಟ್ಟಿದ್ದರು. ಶಹಾ ನವಾಜ್ ಅವರು ಸಂಬಂಧಿಕರ ಮದುವೆ ನಿಮಿತ್ತ ಕುಟುಂಬ ಸಮೇತ ರಾಮನಗರ ಹಾಗೂ ಮಂಡ್ಯಕ್ಕೆ ಸೆ.23ರಂದು ಹೋಗಿದ್ದರು.
ಈ ಸಂದರ್ಭದಲ್ಲಿ ಕಳ್ಳ ನಕಲಿ ಕೀಗಳನ್ನು ಬಳಸಿ ಮನೆಯ ಮೊದಲ ಮಹಡಿಯ ಬಾಗಿಲ ಬೀಗ ತೆಗೆದು ಒಳಗೆ ನುಗ್ಗಿ ಬೀರುವಿನಲ್ಲಿದ್ದ ಸುಮಾರು 2.5 ಕೆಜಿ ಚಿನ್ನದ ಆಭರಣಗಳು ಮತ್ತು 8 ರಿಂದ 10 ಲಕ್ಷ ರೂ. ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.
ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ
ಸೆ.25ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶಹಾ ನವಾಜ್ ಅವರು ಮನೆಗೆ ವಾಪಸ್ ಬಂದಿದ್ದು, ಬೀರುವಿನಲ್ಲಿ ಹಣವಿಡಲು ಹೋದಾಗ ಬೀರು ತೆರೆದಿರುವುದು ಗಮನಿಸಿ ಗಾಬರಿಗೊಂಡು ನೋಡಿದಾಗ ಅದರಲ್ಲಿಟ್ಟಿದ್ದ ಲಕ್ಷಾಂತರ ಹಣ ಹಾಗೂ ಕೋಟ್ಯಂತರ ರೂ. ಮೌಲ್ಯದ ಆಭರಣ ಕಳ್ಳತನವಾಗಿರುವುದು ಕಂಡುಬಂದಿದೆ.
ತಕ್ಷಣ ಅವರು ಸ್ನೇಹಿತ ಅನೀಸ್ ಎಂಬುವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿ ಮನೆ ಹತ್ತಿರ ಬರುವಂತೆ ಹೇಳಿದ್ದಾರೆ. ಅನೀಸ್ ಅವರು ಇವರ ಮನೆ ಬಳಿ ಬಂದು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಿಲಕ್ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಒಬ್ಬ ಕಳ್ಳ ಬಂದು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ತಿಲಕ್‍ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಂಡಿಯಾ ಮೈತ್ರಿಕೂಟದಿಂದ ಹೊರಬರುವುದೇ ಎಎಪಿ..?
ಕಳ್ಳನ ಪತ್ತೆಗಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಒಂದು ವಿಶೇಷ ತಂಡ ರಚಿಸಲಾಗಿತ್ತು.ಈ ತಂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವ್ಯಕ್ತಿಯ ಚಹರೆ ಆಧರಿಸಿ ತನಿಖೆ ಕೈಗೊಂಡಿತ್ತು. ಕಾರ್ಯಾಚರಣೆ ವೇಳೆ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ನಕಲಿ ಕೀಗಳನ್ನು ಬಳಸಿ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತನಿಂದ 1,10,60,000ರೂ.
ಮೌಲ್ಯದ 1 ಕೆಜಿ 800 ಗ್ರಾಂ ಚಿನ್ನಾಭರಣ, 74 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಹಾಗೂ ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.