ಕರಾಚಿ, ಅ.11- ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ದುಕ್ಕಿ ಕಲ್ಲಿದ್ದಲು ಗಣಿಗಳ ಮೇಲೆ ಅಪರಿಚಿತ ಶಸ್ತ್ರ ಸಜ್ಜಿತ ವ್ಯಕ್ತಿಗಳು ಇಂದು ಮುಂಜಾನೆ ದಾಳಿ ನಡೆಸಿದಾಗ ಕನಿಷ್ಠ 20 ಗಣಿಗಾರರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ
ಈ ದಾಳಿಯು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರದ ಸರಣಿಯಲ್ಲಿ ಇತ್ತೀಚಿನದು. ಇದು ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಇಂತಹ ಕೃತ್ಯ ನಡೆದಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಜಿಲ್ಲಾಧ್ಯಕ್ಷ ದುಕ್ಕಿ ಹಾಜಿ ಖೈರ್ ಉಲ್ಲಾ ನಾಸಿರ್ ಪ್ರಕಾರ, ದಾಳಿಕೋರರು ದಾಳಿಯಲ್ಲಿ ಹ್ಯಾಂಡ್ ಗ್ರೆನೇಡ್ ಮತ್ತು ರಾಕೆಟ್ ಲಾಂಚರ್‌ಗಳನ್ನು ಬಳಸಿದ್ದಾರೆ. ಈ ಪ್ರದೇಶದಲ್ಲಿ ಹತ್ತು ಕಲ್ಲಿದ್ದಲು ಗಣಿಗಳಿವೆ ಎಂದು ಅವರು ಹೇಳಿದರು. ದಾಳಿಕೋರರು ಸ್ಥಳದಿಂದ ಪರಾರಿಯಾಗುವ ಮೊದಲು ಗಣಿಗಾರಿಕೆ ಯಂತ್ರಗಳಿಗೆ ಬೆಂಕಿ ಹಚ್ಚಿದರು ಎಂದು ನಾಸಿರ್ ಹೇಳಿದರು. ಕನಿಷ್ಠ 20 ಗಣಿಗಾರರು ಕೊಲ್ಲಲ್ಪಟ್ಟರು ಮತ್ತು ಎಂಟು ಮಂದಿ ಗಾಯಗೊಂಡರು.
ದಾಳಿಯ ನಂತರ ಪೊಲೀಸರು, ಅರೆಸೈನಿಕ -ಪ್ರಾಂಟಿಯರ್ ಕಾಪ್ಸ್ (ಎಫ್ -ಸಿ) ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗಾಯಗೊಂಡಿರುವ ಕೆಲ ಅಪ್ರಾಪ್ತರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ಶಾಸ್ತ್ರ ಸಜ್ಜಿತ ವ್ಯಕ್ತಿಗಳು ಮೊದಲು ವಿವಿಧ ಗುಂಪುಗಳಲ್ಲಿ ಗಣಿಗಾರರನ್ನು ಒಟ್ಟುಗೂಡಿಸಿದರು ಮತ್ತು ನಂತರ ಅವರ ಮೇಲೆ ಗುಂಡುಗಳನ್ನು ಹಾರಿಸಿದರು ಎಂದು ವರದಿಯಾಗಿದೆ.