ಕನ್ನಡಿಗರ ಜೀವನಾಡಿ, ಶೈಕ್ಷಣಿಕ ನೆಲೆಯಾದ ಬೆಂಗಳೂರಿನ ಪರಿಸರ ಸಾಮ್ರಾಜ್ಯವೇ ಆಗಿರುವ ವಿದ್ಯಾಕಾಶಿ ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿರುವ ಹಸಿರು ಉದ್ಯಾನವನಕ್ಕೆ ಆಪತ್ತು ಬಂದೊದಗಿದೆ ಎಂಬ ಆತಂಕ ಎದುರಾಗಿದೆ.
ಸರಿ ಸುಮಾರು 1200 ಎಕರೆ ವಿಶಾಲವಾದ ಜಾಗದಲ್ಲಿ ಮೈದಳೆದಿರುವ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣ ಜಾಗದ ಸುಮಾರು 600 ಎಕರೆ ಜಾಗದಲ್ಲಿ ಪಶ್ಚಿಮ ಘಟ್ಟದ ಅರಣ್ಯ ಮಾದರಿಯಲ್ಲಿ ಮರ-ಗಿಡಗಳು ತಂಪಾದ ಗಾಳಿಸೂಸುತ್ತಿವೆ. ನೂರಾರು ಸಸ್ಯಪ್ರಭೇದಗಳು, ಪ್ರಾಣಿ-ಪಕ್ಷಿ ಸಂಕುಲಗಳು, ಚಿಟ್ಟೆ, ಕೀಟ ಪ್ರಭೇದಗಳ ತಾಣವಾಗಿದೆ.
ಚೆಕ್ಡ್ಯಾಮ್ಗಳು, ಜಲಕಟ್ಟೆಗಳ ನಿರ್ಮಾಣದಿಂದ ಅಂತರ್ಜಲ ಮರುಪೂರಣದ ಆಗರವಾಗಿದೆ. ಆದರೆ, ಪ್ರಸ್ತುತ ಬರೋಬ್ಬರಿ 300 ಎಕರೆ ಜಾಗಕ್ಕೆ ಕುತ್ತು ಬಂದಿದೆ ಎಂಬ ಕಳವಳ ವ್ಯಕ್ತವಾಗಿದೆ.ಬೆಂಗಳೂರಿನ ಅತಿದೊಡ್ಡ ಆಮ್ಲಜನಕದ ಬ್ಯಾಂಕ್ ಹಾಗೂ ಜಲತಾಣವಾಗಿ, ಸಹ್ಯಾದ್ರಿ ವನ ಮತ್ತು ಹದಿನಾರು ಭಾಗಗಳಲ್ಲಿ ಹರಡಿರುವ ಬಯೋಪಾರ್ಕ್ ಉಳಿಸದಿದ್ದರೆ ಸುಮಾರು 300 ಎಕರೆ ಜಾಗ ಸ್ವಾಹಾ ಆಗುವುದರಲ್ಲಿ ಸಂದೇಹವಿಲ್ಲ.
ಇಲ್ಲಿರುವ ಸುಮಾರು 3 ಲಕ್ಷ ಮರಗಿಡಗಳಿಂದ ಸುಮಾರು 25 ಸಾವಿರ ಕೋಟಿ ರೂ. ಮೌಲ್ಯದ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಶೇ.20 ರಷ್ಟು ಎಂದರೆ 50 ಸಾವಿರದಷ್ಟು 200 ಕೋಟಿ ರೂ. ಮೌಲ್ಯದ ಶ್ರೀಗಂಧ ಗಿಡಗಳಿಗೆ 350 ಕೋಟಿ ಲೀಟರ್ನಷ್ಟು ನೀರು ಮರುಪೂರಣ ಮಾಡುವ ವ್ಯವಸ್ಥೆ ಇದೆ. 250 ರಿಂದ 300 ನವಿಲುಗಳು ವಾಸವಾಗಿವೆ. 170 ರಷ್ಟು ವಿವಿಧ ಬಗೆಯ ಪಕ್ಷಿಗಳು ಇಲ್ಲಿವೆ. ಈ ತಾಣದಲ್ಲಿ 150 ಚಿಟ್ಟೆಯ ಪ್ರಭೇದಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಇಲ್ಲಿನ ಆವರಣದ ಬಯೋಪಾರ್ಕ್ನಲ್ಲಿ ಆಮ್ಲಜನಕದ ಕಣಜವೇ ನಿರ್ಮಾಣವಾಗಿದೆ. ಇಂಗಾಲ ಹೀರಿಕೊಳ್ಳುವ ಕೆಲಸ ಮಾಡುತ್ತಿದೆ. ನೀರಿನ ಆಸರೆ ಹಾಗೂ ಅಂತರ್ಜಲ ಮರುಪೂರಣ ಕೇಂದ್ರವೂ ಆಗಿದೆ.
ರೋಟರಿ, ಲಯನ್‌್ಸ, ಸ್ವಾಟ್, ಗ್ರೀನ್ಸ್ ಆರ್ಮಿ ಪೋರ್ಸ್, ಮಿಡಿತ ಫೌಂಡೇಶನ್, ಜೀವನ್ಮುಕ್ತಿ, ಅದಮ್ಯ ಚೇತನ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳ ಜೊತೆಗೂಡಿ ಕಳೆದೆರಡು ದಶಕಗಳಲ್ಲಿ ಲಕ್ಷಾಂತರ ಮರಗಳ ಜೈವಿಕ ಅರಣ್ಯ ನಿರ್ಮಾಣವಾಗಿದೆ.
ಬಯೋಡೈವರ್ಸಿಟಿ ಪಾರ್ಕ್ ಹೈಕೋರ್ಟಿನ ನಿರೀಕ್ಷೆಯಂತೆ ಇದು ಜಿಯೋಪಾರ್ಕ್ ಆಗಿ ಅಭಿವೃದ್ಧಿ ಮಾಡಲ್ಪಟ್ಟಿದೆ. ಚೆಕ್ಡ್ಯಾಂ, ಕಟ್ಟೆ-ಕಲ್ಯಾಣಿಗಳಿಂದ ತುಂಬಿ ಬಯೋ-ಜಿಯೋ-ಹೈಡ್ರೋ ಪಾರ್ಕ್ ಆಗಿದೆ. ಆದರೆ ಇದೀಗ ಜೀವ ವೈವಿಧ್ಯ ತಾಣಗಳನ್ನು ಕಾಂಕ್ರೀಟ್ ಕಾಡು ಮಾಡಲು ಕೆಲವರು ಹವಣಿಸುತ್ತಿರುವುದು ಬೇಸರದ ಸಂಗತಿ.
ವಿಶೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ (ಯುವಿಸಿಇ) ವಿವಿ ಆವರಣದಲ್ಲಿ 200ರಿಂದ 300 ಎಕರೆ ಭೂಮಿ ನೀಡುವ ಯೋಜನೆ ರೂಪಿಸಲಾಗಿದೆ.ಈ ಭಾಗದಲ್ಲಿ 300 ಎಕರೆಯಷ್ಟು ಜಾಗ ಎಂಜಿನಿಯರಿಂಗ್ ಕಾಲೇಜಿಗೆ ನೀಡಿದರೆ ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತುವ ಸಾಧ್ಯತೆಯಿದೆ.
ಜೈವಿಕ ಉದ್ಯಾನವನ ಸಂಪೂರ್ಣವಾಗಿ ನಾಶವಾಗುತ್ತದೆ. ಜ್ಞಾನಭಾರತಿ ವಾಯುವಿಹಾರಿಗಳ ಸಂಘದವರು ಬಯೋಪಾರ್ಕ್ ಉಳಿಸಲು ಸಾಕಷ್ಟು ಪರಿಶ್ರಮ ಪಟ್ಟು ರಾಜ್ಯಪಾಲರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಈ ಮೊದಲು ಯುವಿಸಿಇ ಸ್ವಾಯತ್ತ ಸಂಸ್ಥೆಗೆ 50ಎಕರೆ ಜಮೀನು ನೀಡಿದ್ದು, ಇದರಿಂದ ಪ್ರಾಣವಾಯುವಿನ ಆಸರೆಯ ತಾಣವಾಗಿರುವ ಬೆಂಗಳೂರು ವಿವಿಗೆ ಧಕ್ಕೆಯಾಗುತ್ತದೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರು, ಮುಖ್ಯಮಂತ್ರಿ, ಅರಣ್ಯ ಸಚಿವರು, ಕರ್ನಾಟಕ ಬಯೋಡೈವರ್ಸಿಟಿ ಬೋರ್ಡ್ ಸೇರಿದಂತೆ ಸಂಬಂಧಿಸಿದವರಿಗೆಲ್ಲರಿಗೂ ಪತ್ರ ಮುಖೇನ ಮನವಿ ಸಲ್ಲಿಸಲಾಗಿದೆ.
ಮನವಿ ಪರಿಗಣಿಸಿದ ರಾಜ್ಯಪಾಲರು ಈ ಬಗ್ಗೆ ವರದಿ ಸಲ್ಲಿಸಲು ವಿವಿಗೆ ಸೂಚನೆ ನೀಡಿದ್ದರು. ವಿವಿ ಸಮಿತಿ ರಚಿಸಿ ವರದಿ ಪಡೆಯಲು ಪ್ರಯತ್ನಿಸಿತ್ತಾದರೂ ವರದಿ ಈವರೆಗೆ ಸಲ್ಲಿಕೆಯಾಗಿಲ್ಲ, ಈ ನಡುವೆ ಉನ್ನತ ಶಿಕ್ಷಣ ಸಚಿವರ ಪ್ರಸ್ತಾವನೆಯಂತೆ 200 ರಿಂದ 300 ಎಕರೆ ಭೂಮಿಯನ್ನು ವಿಶ್ವೇಶ್ವರಯ್ಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ನೀಡಲು ನಡೆಸುತ್ತಿರುವ ಸಿದ್ಧತೆಯಿಂದ ಬೆಂಗಳೂರು ವಿವಿ ಜೀವ ವೈವಿಧ್ಯ ಕಾಪಾಡುತ್ತಿರುವವರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು ವಿವಿ ಪ್ರಾಧ್ಯಾಪಕರಾದ ಟಿ.ಜೆ.ರೇಣುಕಾ ಪ್ರಸಾದ್ ಅವರು ಕೇಂದ್ರ ಸಚಿವ ಕುಮಾರ ಸ್ವಾಮಿ ಅವರಿಗೂ ಪತ್ರ ಬರೆದಿದ್ದು, ಜೀವ ವೈವಿಧ್ಯದ ಅರಣ್ಯದ ಪರಭಾರೆ ರದ್ದುಪಡಿಸಿ ಜೈವಿಕ ವೈವಿಧ್ಯವನವೆಂದು ಘೋಷಿಸಿ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಉಪನ್ಯಾಸಕರ ಪ್ರತಿಭಟನೆ:
ಸ್ವಾಯುತ್ತ ಸಂಸ್ಥೆಯಾಗಿರುವ ಯುವಿಸಿಇ ಗೆ 50 ಎಕರೆ ನೀಡದಿರಲು ಉಪನ್ಯಾಸಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯಿಸಿದ್ದರು. ಆದರೆ ಈ ಜಾಗದಲ್ಲಿ ಜೆಸಿಬಿಗಳು ಸದ್ದು ಮಾಡಿದ್ದು, ಅಲ್ಲಿ ನಿರ್ಮಾಣವಾಗಿರುವ ಸಹ್ಯಾದ್ರಿ ವನ ನಾಶವಾಗುತ್ತಿದೆ. ಇದರ ಜೊತೆಗೆ 300 ಎಕರೆ ನೀಡಲು ಮಂತ್ರಿಗಳಿಂದ ಸೂಚನೆ ಬಂದಿರುವುದು ದುರದೃಷ್ಟಕರ.
ಎಲ್ಲೆಡೆ ಪ್ರಾಣವಾಯು ಹಾಗೂ ಗುಟುಕು ನೀರಿಗೆ ಸಂಚಕಾರವಾಗುತ್ತಿದೆ. ಹವಾಮಾನ ಬದಲಾವಣೆಯ ಮಹಾ ಸಮಸ್ಯೆ ಜಗತ್ತನ್ನು ಕಾಡುತ್ತಿದೆ. ಇದರಿಂದ ಪಾರಾಗಲು ಈಗಿರುವ ಮರ-ಗಿಡ-ಜೀವ ವೈವಿಧ್ಯಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ.
ಮಹಾನಗರ ಬೆಂಗಳೂರಿನಲ್ಲಿ ಪ್ರಾಣ ವಾಯು (ಆಮ್ಲಜನಕ) ವಿಗೆ ಸಂಚಕಾರ ಬಂದೊದಗಿರುವುದು ಸುಳ್ಳೇನಲ್ಲ, ಕೋವಿಡ್ ಸಂದರ್ಭದಲ್ಲಿ ಆಮ್ಲಜನಕಕ್ಕಾಗಿ ಪರದಾಡಿರುವುದು ನಮ ಕಣ್ಣ ಮುಂದಿದೆ.
ಬೆಂಗಳೂರಿನಲ್ಲಿ ಲಾಲ್ಬಾಗ್, ಕಬ್ಬನ್ ಪಾರ್ಕ್ ಹೊರತುಪಡಿಸಿದರೆ ವಿವಿ ಆವರಣದಲ್ಲಿ ಮಾತ್ರ ಹಸಿರಿನ ನೆಲೆಯಿದೆ, ಇಲ್ಲಿ ನೀರಿನ ಸೆಲೆಯಿದೆ.
ಬಯೋ-ಜಿಯೋ-ಹೈಡ್ರೋ ಒಂದೇ ಕಡೆ ಸಿಗುವಂತಹ ಸುಂದರ ಪರಿಸರ ಇಲ್ಲಿದೆ. ವೃಷಭಾವತಿ ಬಫರ್ ಜೋನಿನ ಅಂಚಿನ ಜಾಗ ಉಳಿಸಬೇಕಿದೆ. ಗಾಳಿ ಮತ್ತು ಅಂತರ್ಜಲದ ಬೀಡನ್ನಾಗಿ ಮಾಡುವುದು ಆವಶ್ಯಕವಾಗಿದೆ. ಭಾರತದಲ್ಲಿ ಇಂತಹ ಬಯೋಪಾರ್ಕ್ ಎಲ್ಲೂ ಇಲ್ಲ.
ಅಲ್ಲದೆ ಈ ಸ್ಥಳದಲ್ಲಿ ಗುಲ್ಬರ್ಗ ರಿಸರ್ಚ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆದಿರುವುದರಿಂದ ವಿವಿ ಜಾಗ ಖಾಲಿಯಾಗುತ್ತದೆಯೋ ಎಂಬ ಆತಂಕ ಎದುರಾಗಿದೆ. ಹಾಗಾಗಿ ವಿವಿ ಆವರಣದ ಜಾಗದಲ್ಲಿರುವ ಅರಣ್ಯವನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಒಟ್ಟಾರೆ ಜ್ಞಾನ ಭಾರತಿ ಆವರಣದಲ್ಲಿರುವ ಜೀವ ವೈವಿಧ್ಯ ಅರಣ್ಯದ ಪರಭಾರೆ ರದ್ದುಪಡಿಸಿ ಜೈವಿಕ ವೈವಿಧ್ಯ ವನವೆಂದು ಘೋಷಿಸಿ ಸಂರಕ್ಷಣೆ ಮಾಡಬೇಕಾಗಿದೆ. ವಾಯುವಿಹಾರ ಸಂಘ ಸೇರಿದಂತೆ ನೂರಾರು ಸಂಘ ಸಂಸ್ಥೆಗಳ ಒಕ್ಕೊರಲ ಒತ್ತಾಯವಾಗಿದೆ.
ಮೇಳೈಸುತ್ತದೆ ಮಲೆನಾಡ ಸೊಬಗು
ಬೆಂಗಳೂರು ವಿವಿ ಆವರಣಕ್ಕೆ ಕಾಲಿಟ್ಟರೆ ಮಲೆನಾಡಿನ ಸೊಬಗು ಮೇಳೈಸುತ್ತದೆ. ಶ್ರೀಗಂಧ, ಬೆಲೆ ಬಾಳುವ ಮರ, ಗಿಡಗಳು, ಔಷಧೀಯ ಸಸ್ಯಗಳು ಬೆಳೆದು ನಿಂತಿವೆ. ಇದಕ್ಕೆ ಪರಿಸರವಾದಿ ಅ.ನಾ.ಯಲ್ಲಪ್ಪ ರೆಡ್ಡಿ ಅವರ ಪರಿಶ್ರಮ ಅಪಾರ. ನಂತರದ ದಿನಗಳಲ್ಲಿ ಮರಗಿಡಗಳನ್ನು ಕಾಪಾಡುತ್ತಿರುವ ವಿವಿಯ ಪ್ರೊ. ರೇಣುಕಾ ಪ್ರಸಾದ್ ಅವರ ನಿರಂತರ ಶ್ರಮ, ಪರಿಸರ ಕಾಳಜಿ ಯಿಂದಾಗಿ ವಿವಿಧ ಸಂಘ ಸಂಸ್ಥೆಗಳ, ನೆರವಿನಿಂದ ಜ್ಞಾನಭಾರತಿ ವಿವಿ ಆವರಣದಲ್ಲಿ ಹಸಿರು ಕಂಗೊಳಿ ಸುತ್ತಿದ್ದು, ಲಕ್ಷಾಂತರ ಜನರ ಉಸಿರಾಗಿದೆ.
ಕಣ್ಣೊರೆಸುವ ತಂತ್ರ
ಯೋಗ ಸೈನ್‌್ಸ ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯ ಸಿಬಿಎಸ್ಸಿ ಹಾಗೂ ನ್ಯಾಕ್ ಸಂಸ್ಥೆಗಳಿಗೆ ಮಾಡಲಾಗಿದ್ದ, ನೋಂದಣಿ ರದ್ದುಮಾಡಲು ಪತ್ರ ಬರೆದು ಮೂರು ವರ್ಷ ಆಗಿದ್ದು, ಮೂಲೆ ಸೇರಿದೆ. ವಿಶ್ವವಿದ್ಯಾಲಯ ತಾನೇ ರದ್ದು ಮಾಡುವ ಕೆಲಸದ ಕಡತ ಕಳಿಹಿಸಿ ಸುಮನೆ ಕುಳಿತಿರುವುದು ವಿಷಾಧನೀಯ ಮತ್ತು ಕಣ್ಣೋರೆಸುವ ತಂತ್ರ ಎಂದು ಸಂಘ ಸಂಸ್ಥೆಗಳು ಆರೋಪಿಸಿವೆ.
ಬಯೋ ಪಾರ್ಕ್ ಉಳಿಸಲು ಸಹಿ ಸಂಗ್ರಹ
ಜ್ಞಾನ ಭಾರತಿ ವಾಯುವಿಹಾರ ಸಂಘದವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಮಂತ್ರಿಗಳಾದ ಹೆಚ್.ಡಿ.ಕುಮಾರ ಸ್ವಾಮಿ ಮತ್ತು ರಾಜ್ಯದ ಮುಖ್ಯಮಂತ್ರಿ, ಅರಣ್ಯ ಮಂತ್ರಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ನಾಲ್ಕೂ ನೂರು ಪುಟಗಳ ಸಹಿ ಸಂಗ್ರಹದೊಂದಿಗೆ ಪತ್ರ ನೀಡಿ ಬಯೋ ಪಾರ್ಕ್ ಉಳಿಸಲು ಮನವಿ ಮಾಡಲಾಗಿದೆ.