Sunday, February 23, 2025
Homeರಾಷ್ಟ್ರೀಯ | National26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್ ನೇಮಕ

26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್ ನೇಮಕ

Gyanesh Kumar appointed 26th Chief Election Commissioner

ನವದೆಹಲಿ,ಫೆ.18- ದೇಶದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರ ನೇಮಕಕ್ಕೆ ರಾಷ್ಟ್ರಪತಿ ದೌಪತಿ ಮುರ್ಮು ಸಹಿ ಹಾಕಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗದ ಆಯುಕ್ತರಾಗಿ 1989 ರ ಹರಿಯಾಣ ಬ್ಯಾಚ್ ನ ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ವಿವೇಕ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರಪತಿ ದೌಪದಿ ಮುರ್ಮು ಸಹಿ ಹಾಕಿದ್ದು, ಈ ಸಂಬಂಧ ರಾಷ್ಟ್ರಪತಿ ಭವನ ಅಧಿಸೂಚನೆ ಹೊರಡಿಸಿದೆ. ಜ್ಞಾನೇಶ್ ಕುಮಾರ್ ಹಾಗೂ ವಿವೇಕ್ ಜೋಶಿ ಅವರು ಇಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ರಾಷ್ಟ್ರಪತಿಗಳು ಇಬ್ಬರಿಗೂ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ. ಹಾಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಸೇವೆಯಿಂದ ಇಂದು ನಿವೃತ್ತರಾಗಲಿದ್ದು,ತೆರವಾಗಲಿರುವ ಈ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು. 61 ವರ್ಷದ ಜ್ಞಾನೇಶ್‌ಕುಮಾರ್ ಕಳೆದ ವರ್ಷ ಮಾರ್ಚ್ 15 ರಿಂದ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.

ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ಕುರಿತು ಹೊಸ ಕಾನೂನಿನಡಿನೇಮಕಗೊಂಡ ಮೊದಲ ಸಿಇಸಿ ಆಗಿದ್ದಾರೆ. ಕಾನೂನಿನ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರು ಅಥವಾ ಚುನಾವಣಾ ಆಯುಕ್ತರು 65ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ ಅಥವಾ ಆರು ವರ್ಷಗಳ ಕಾಲ ಚುನಾವಣಾ ಸಮಿತಿಯಲ್ಲಿ ಅಧಿಕಾರಾವಧಿಯನ್ನು ಹೊಂದಬಹುದು.

1988 -ನೇ ಬ್ಯಾಜ್ ಕೇರಳ ಕೇಡರ್ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರ ಅಧಿಕಾರಾವಧಿಯು ಜನವರಿ 26, 2029ರವರೆಗೆ ಇರಲಿದೆ. 2029ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯೂ ಇವರ ಅವಧಿಯಲ್ಲಿ ನಡೆಯಲಿದೆ. ಕೇಂದ್ರ ಗೃಹ ಸಚಿವಾಲಯದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜ್ಞಾನೇಶ್ ಕುಮಾರ್ ಅವರಿಗೆ ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸುವ ಸವಾಲು ಅವರ ಮುಂದಿದೆ. 2026 ರಲ್ಲಿ ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೇಲುಸ್ತುವಾರಿ ವಹಿಸಲಿದ್ದಾರೆ. ಅವರ ಅಧಿಕಾರಾವಧಿಯಲ್ಲಿ 2027ರಲ್ಲಿ ದೇಶದ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗಳು ನಡೆಯಲಿವೆ.

ಜ್ಞಾನೇಶ್ ಕುಮಾರ್ ಯಾರು?:
ಜ್ಞಾನೇಶ್ ಕುಮಾರ್ ಅವರು 1988 ರ ಬ್ಯಾಚ್‌ನ ಕೇರಳ-ಕೇಡರ್ ಅಧಿಕಾರಿಯಾಗಿದ್ದು, ಕಳೆದ ವರ್ಷ ಜನವರಿಯಲ್ಲಿ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು.ಅವರು ಮೇ 2022ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು.

ಗೃಹ ಸಚಿವಾಲಯದಲ್ಲಿ ಐದು ವರ್ಷ ಕಳೆದಿದ್ದರು.ಮೊದಲು ಮೇ 2016 ರಿಂದ ಸೆಪ್ಟೆಂಬರ್ 2018 ರವರೆಗೆ ಜಂಟಿ ಕಾರ್ಯದರ್ಶಿಯಾಗಿ ಮತ್ತು ನಂತರ ಸೆಪ್ಟೆಂಬರ್ 2018 ರಿಂದ ಏಪ್ರಿಲ್ 2021 ನವರೆಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ, ಆಗಸ್ಟ್ 2019 ರಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದಾಗ ಅವರು ಜಮ್ಮು ಮತ್ತು ಕಾಶ್ಮೀರ ಸಮಿತಿಯ ಮುಖ್ಯಸ್ಥರಾಗಿದ್ದರು.

ಐಐಟಿ ಕಾನ್ಸುರದಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ತಮ್ಮ ಬಿಟೆಕ್ ಅನ್ನು ಪೂರ್ಣಗೊಳಿಸಿದರು, ಐಸಿಎಫ್ ಎಐ. ಭಾರತದ ಬಿಸಿನೆಸ್ ಫೈನಾನ್ಸ್ ಮತ್ತು ಯುಎಸ್‌ನ ಹಾವರ್ಡ್ ವಿಶ್ವವಿದ್ಯಾಲಯದ ಎಚ್ ಐಐಡಿಯಿಂದ ಪರಿಸರ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು.

ಕೇರಳ ಸರ್ಕಾರದಲ್ಲಿ ಎರ್ನಾಕುಲಂನ ಸಹಾಯಕ ಕಲೆಕ್ಟರ್, ಅಡೂರಿನ ಸಬ್ ಕಲೆಕ್ಟರ್, ಎಸ್ಸಿ ಮತ್ತು ಎಸ್‌ಟಿಗಳ ಕೇರಳ ರಾಜ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕೊಚ್ಚಿನ್ ಕಾರ್ಪೊರೇಶನ್‌ನ ಮುನ್ಸಿಪಲ್ ಕಮಿಷನರ್, ಕೇರಳ ರಾಜ್ಯ ಸಹಕಾರಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು, ಉದ್ಯಮಗಳು ಮತ್ತು ವಾಣಿಜ್ಯ ನಿರ್ದೇಶಕರು ಮತ್ತು ಎರ್ನಾಕುಲಂನ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ಗೋಶ್ರೀ ಲ್ಯಾಂಡ್ಸ್ ಡೆವಲಪ್ ಮೆಂಟ್ ಅಥಾರಿಟಿಯ ಕಾರ್ಯದರ್ಶಿಯಾಗಿ, ತಿರುವನಂತಪುರಂ ಏರ್ ಪೋರ್ಟ್ ಡೆವಲಪ್ ಮೆಂಟ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾಗಿ, ಕೇರಳ ರಾಜ್ಯ ಸಾರಿಗೆ ಯೋಜನೆಯ ಯೋಜನಾ ನಿರ್ದೇಶಕರಾಗಿ ಮತ್ತು ದೆಹಲಿಯ ಕೇರಳ ಹೌಸ್‌ನ ರೆಸಿಡೆಂಟ್ ಕಮೀಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಕೇರಳ ಸರ್ಕಾರದ ಕಾರ್ಯದರ್ಶಿಯಾಗಿ, 61 ವರ್ಷದ ಐಎಎಸ್ ಅಧಿಕಾರಿ ಹಣಕಾಸು ಸಂಪನ್ಮೂಲಗಳು, ಫಾಸ್ಟ್ ಟ್ರ್ಯಾಕ್ ಯೋಜನೆಗಳು, ಲೋಕೋಪಯೋಗಿ ಇಲಾಖೆ, ಆಧುನೀಕರಿಸುವ ಸರ್ಕಾರಿ ಕಾರ್ಯಕ್ರಮ, ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳಂತಹ ವೈವಿಧ್ಯಮಯ ಇಲಾಖೆಗಳನ್ನು ನಿರ್ವಹಿಸಿದ್ದಾರೆ.

ಭಾರತ ಸರ್ಕಾರದಲ್ಲಿ, ಅವರು ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ, ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿಯಾಗಿ, ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿ ಮತ್ತು ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಶ್ರೀಮಂತ ಅನುಭವವನ್ನು ಹೊಂದಿದ್ದಾರೆ. ಅವರು 2024ರ ಜನವರಿ 31ರಂದು ನಿವೃತ್ತರಾಗಿದ್ದರು.

ಇನ್ನು ಕೇಂದ್ರ ಸರ್ಕಾರವು 1989 ಬ್ಯಾಚ್‌ನ ಹರಿಯಾಣ-ಕೇಡರ್ ಐಎಎಸ್ ಅಧಿಕಾರಿ ವಿವೇಕ್ ಜೋಶಿ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಿ 1966, ಮೇ 21 ರಂದು ಜನಿಸಿದ ಜೋಶಿ (58) ಅವರು 2031 ರವರೆಗೆ ಚುನಾವಣಾ ಆಯೋಗ ಕಾರ್ಯ ನಿರ್ವಹಿಸಲಿದ್ದಾರೆ. ಹರಿಯಾಣ ಮಾಜಿ ಮುಖ್ಯ ಕಾರ್ಯದರ್ಶಿ ಜೋಶಿ ಜನವರಿ 2019 ರಿಂದ ಕೇಂದ್ರ ನಿಯೋಜನೆಯಲ್ಲಿದ್ದರು.

RELATED ARTICLES

Latest News