ಬೆಂಗಳೂರು,ಆ.27– ನಟ ದರ್ಶನ್ ಸ್ವಾತಂತ್ರ್ಯ ಹೋರಾಟಗಾರನಲ್ಲ. ಕೊಲೆ ಮಾಡಿ ಬಂದ ಕ್ರಿಮಿನಲ್. ಆತನಿಗೆ ರಾಜೋಪಚಾರ ಮಾಡಬಾರದು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ದರ್ಶನ್ ಪ್ರಕರಣದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.
ದರ್ಶನ್ ಸ್ವಾತಂತ್ರ್ಯ ಹೋರಾಟ ಗಾರನಲ್ಲ. ಹಿ ಇಸ್ ಎ ಕ್ರಿಮಿನಲ್. ಒಬ್ಬನನ್ನು ಕೊಲೆ ಮಾಡಿ ಬಂದವನು. ಆತನಿಗೆ ಜೈಲಿನಲ್ಲಿ ರಾಜೋಪಚಾರ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗೃಹಸಚಿವ ಪರಮೇಶ್ವರ್ ಈ ವಿಚಾರವಾಗಿ ಏಕೆ ಸುಮನಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಪ್ರತಿಕ್ರಿಯಿಸಿದ ವಿಶ್ವನಾಥ್, ಈ ವಿಚಾರವಾಗಿ ನಾನು ಮೌನವಾಗಿಲ್ಲ. ಹಾಗೆಂದು ಪ್ರತಿದಿನ ಮಾತನಾಡಲು ಸಾಧ್ಯವಿಲ್ಲ ಎಂದರು.
ಮುಡಾದಿಂದ ಪಡೆದಿರುವ ನಿವೇಶನಗಳನ್ನು ವಾಪಸ್ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಮೊದಲೇ ಸಲಹೆ ನೀಡಿದ್ದೆ. ಅದ್ಯಾಕೊ ಅವರು ಸುಮನಾಗಿದ್ದರು. ಸಿದ್ದರಾಮಯ್ಯ ಅವರಿಂದಲೂ ಮುಡಾವನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರಿಗೆ ನಿವೇಶನ ಹಂಚಲಿಲ್ಲ. ಮುಡಾದಲ್ಲಿನ ಹಗರಣಗಳನ್ನು ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಪಾತ್ರವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆತನನ್ನು ಹತ್ತಿರ ಬಿಟ್ಟುಕೊಂಡಿದ್ದೇ ತಪ್ಪು. ಮೊದಲು ಭೈರತಿಯನ್ನು ಹೊರಗೆ ಹಾಕಬೇಕು.
ಹಾಗೆಯೇ ಮುಡಾದ ಆಯುಕ್ತ ನಟೇಶ್‌ನನ್ನು ಹೊರ ಹಾಕಬೇಕೆಂದು ಸಲಹೆ ನೀಡಿದರು. ನಟೇಶ್ ಸರ್ಕಾರದ ಆಸ್ತಿಯನ್ನು ಲೂಟಿ ಮಾಡಿದ್ದಾರೆ. ಅಂತಹ ವ್ಯಕ್ತಿಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದ ಮೇಲೆ ಯಾವ ರೀತಿಯ ಆಡಳಿತ ಇದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಚಿವ ಭೈರತಿ ಸುರೇಶ್ ದುರಾಹಂಕಾರಿ. ಧುರ್ಯೋದನ, ದುಶ್ಯಾಸನ ಇದ್ದಂತೆ. ಸಿದ್ದರಾಮಯ್ಯ ಅವರನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.