ಶ್ರೀನಗರ, ಮಾ.16- ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಸೋದರಳಿಯ ಮತ್ತು ಭಾರತದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಫೈಸಲ್ ನದೀಮ್ ಅಲಿಯಾಸ್ ಅಬು ಖತಲ್ ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ.ಆತನನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಅಬು ಖತಲ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅನೇಕ ಸುದ್ದಿ ವರದಿಗಳು ತಿಳಿಸಿವೆ.
ಫೈಸಲ್ ನದೀಮ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದರು. ಪಾಕಿಸ್ತಾನದ ಪಂಜಾಬ್‌ನ ಝೀಲಂ ಜಿಲ್ಲೆಯ ಮಂಗಳಾ ಬೈಪಾಸ್‌ನಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
2023 ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜರಿಯಲ್ಲಿ ದಾಳಿ ನಡೆಸಿದ ಲಷ್ಕರ್ ಎ-ತೊಯ್ದಾ ಭಯೋತ್ಪಾದಕರ ಹಿಂದಿನ ಹ್ಯಾಂಡ್ಲರ್‌ಗಳಲ್ಲಿ ನದೀಮ್ ಒಬ್ಬನಾಗಿದ್ದ. ಎರಡು ದಿನಗಳ ಕಾಲ ನಡೆದ ಈ ದಾಳಿಯಲ್ಲಿ ಏಳು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಅಬು ಖತಲ್, ಸಾಜಿದ್ ಜುಟ್ ಮತ್ತು ಮೊಹಮ್ಮದ್ ಖಾಸಿಮ್ ಅವರನ್ನು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳು ಎಂದು ಹೆಸರಿಸಿ ಎನ್‌ಐಎ ಕಳೆದ ವರ್ಷ ಚಾರ್ಜ್ ಶೀಟ್ ಸಲ್ಲಿಸಿತ್ತು.