Sunday, September 8, 2024
Homeರಾಜ್ಯಮಳೆ ಆರ್ಭಟಕ್ಕೆ ಕಂಗಾಲಾದ ಅರ್ಧ ಕರ್ನಾಟಕ, ಇಲ್ಲಿದೆ ಅವಾಂತರಗಳ ವಿವರ

ಮಳೆ ಆರ್ಭಟಕ್ಕೆ ಕಂಗಾಲಾದ ಅರ್ಧ ಕರ್ನಾಟಕ, ಇಲ್ಲಿದೆ ಅವಾಂತರಗಳ ವಿವರ

ಬೆಳಗಾವಿ/ಉತ್ತರಕನ್ನಡ,ಜು.27- ಮಳೆ…ಮಳೆ…ಮಳೆ… ಕಳೆದ ಹತ್ತು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅರ್ಧರಾಜ್ಯ ಅಕ್ಷರಶಃ ನಲುಗಿ ಹೋಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಜಲಾಶಯಗಳ ಮೂಲಕ ಭಾರಿ ಪ್ರಮಾಣದಲ್ಲಿ ನದಿಗಳಿಗೆ ನೀರನ್ನು ಬಿಡುಗಡೆಗೊಳಿಸುತ್ತಿರುವುದರಿಂದ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.ಹೊಲ, ಗದ್ದೆಗಳು ಜಲಾವೃತಗೊಂಡಿವೆ. ಹಲವು ಪಟ್ಟಣ ಪ್ರದೇಶ, ಗ್ರಾಮಗಳಿಗೆ ನೀರು ಹರಿದು ಜನಜೀವನ ಅಸ್ತವ್ಯಸ್ಥವಾಗಿದೆ.

ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ :
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಡಕುಮೇರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದ್ದು, ನಿನ್ನೆ ಸಂಜೆಯಿಂದಲೇ ಬೆಂಗಳೂರು-ಮಂಗಳೂರು ನಡುವಿನ ಎಲ್ಲಾ ಪ್ರಯಾಣಿಕ ಹಾಗೂ ಗೂಡ್‌್ಸ ರೈಲು ಸಂಚಾರ ರದ್ದುಗೊಳಿಸಲಾಗಿತ್ತು. ಮಣ್ಣು ತೆರವು ಹಾಗೂ ಹಳಿ ದುರಸ್ಥಿ ಕಾರ್ಯಾಚರಣೆ ನಡೆಸಲಾಗಿದೆ. ರೈಲಿನಲ್ಲಿ ಸಿಲುಕಿದ್ದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿ ಬಸ್‌‍ ಮೂಲಕ ಕಳುಹಿಸಿಕೊಡಲಾಗಿದೆ.

ಚಾರ್ಮುಡಿಯಲ್ಲಿ ಸಂಚಾರ ಸ್ಥಗಿತ :
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಚಾರ್ಮುಡಿಘಾಟ್‌ನ ಹತ್ತನೇ ತಿರುವಿನಲ್ಲಿ ನಿನ್ನೆ ರಾತ್ರಿ ಗುಡ್ಡ ಕುಸಿದಿದ್ದು, ಕೊಟ್ಟಿಗೆಹಾರದವರೆಗೆ ಟ್ರಾಫಿಕ್‌ ಜಾಂ ಆಗಿತ್ತು. ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ವಾಹನಗಳನ್ನು ತಡೆದು ಪೊಲೀಸರು ವಾಪಸ್‌‍ ಕಳುಹಿಸಿದರು.
ಅತ್ತ ಉಜರಿ ಬಳಿಯೂ ಚಾರ್ಮುಡಿ ಘಾಟ್‌ ಪ್ರವೇಶ ನಿರ್ಬಂಧಿಸಲಾಗಿದೆ. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಬೆಳಗಾವಿಯಲ್ಲಿ ಜನಜೀವನ ಅಸ್ತವ್ಯಸ್ಥ :
ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳು ಉಕ್ಕಿ ಹರಿದು ಸುಮಾರು 182 ಗ್ರಾಮಗಳು ನೀರಿನಿಂದ ಆವೃತಿಯಾಗಿವೆ. ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ಕೃಷ್ಣ, ದೂದ್‌ಗಂಗಾ, ವೇದ್‌ಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ನದಿಗಳ ಅಬ್ಬರಕ್ಕೆ 50ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಕಾವೇರಿಯ ಅಬ್ಬರ, ಮುಳುಗಿದ ಸ್ನಾನಘಟ್ಟ :
ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆಯ ಅಬ್ಬರ ಮುಂದುವರೆದಿದ್ದು, ಕೆಆರ್‌ಎಸ್‌‍ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಯಬಿಟ್ಟಿರುವುದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಿಮಿಷಾಂಬ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟ ದೇವಸ್ಥಾನದ ಮುಂಭಾಗ ನವಗ್ರಹ, ಅರಳಿಕಟ್ಟೆ, ಶಿವನ ದೇಗುಲಗಳು ಮುಳುಗಡೆಯಾಗಿವೆ. ಭಕ್ತರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಶ್ರೀರಂಗಪಟ್ಟಣದ ಗೋಸಾಯ್‌ ಘಾಟ್‌ ಮುಳುಗಡೆಯಾಗಿದ್ದು, ಪಿಂಡಪ್ರಧಾನ, ಹೋಮ-ಹವನ, ಪೂಜಾಕೈಂಕರ್ಯಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಿನಿಮಾ ಚಿತ್ರೀಕರಣಕ್ಕೂ ನಿಷೇಧ ಹೇರಲಾಗಿದೆ.

ಮಲೆನಾಡಿನಲ್ಲಿ ನಿಲ್ಲದ ಮಳೆಯ ಅಬ್ಬರ :
ಮಲೆನಾಡಿನ ಚಿಕ್ಕಮಗಳೂರಿನಲ್ಲೂ ಅಬ್ಬರದ ಮಳೆಯಾಗುತ್ತಿದ್ದು, ಜಿಲ್ಲೆಯ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮದಗದ ಕೆರೆ ಕೋಡಿ ಬಿದ್ದಿದೆ. ಕಳೆದ ಎರಡು ವಾರಗಳಿಂದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ಕೆರೆ ತುಂಬಿ ಕೋಡಿ ಬಿದ್ದಿದ್ದು, ಸುತ್ತಮುತ್ತಲ ಹಳ್ಳಿಗಳ ರೈತರು ಹಾಗೂ ಜನರ ಸಂಭ್ರಮಕ್ಕೆ ಕಾರಣವಾಗಿದೆ.

ಶಿವಮೊಗ್ಗದಲ್ಲೂ ಮಳೆಯ ಅಬ್ಬರ ಮುಂದುವರೆದಿದೆ. ನಾಡಿಗೆ ವಿದ್ಯುತ್‌ ನೀಡುವ ಲಿಂಗನಮಕ್ಕಿ ಜಲಾಶಯ 1804 ಅಡಿ ತಲುಪಿದೆ. ಕಳೆದ ಎರಡು ವರ್ಷಗಳಲ್ಲಿ ಮಳೆಯ ಕೊರತೆಯಿಂದ ಜಲಾಶಯದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ನೀರು ಭರ್ತಿಯಾಗಿರಲಿಲ್ಲ. ಈ ಬಾರಿ ಉತ್ತಮ ಬೆಳೆಯಾಗಿದ್ದು, 1800 ಅಡಿ ದಾಟಿದೆ.

ಜಲಾಶಯ ತುಂಬಿದರೆ ನೀರನ್ನು ಹೊರಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತುಂಗಾಭದ್ರಾ ಜಲಾಶಯಕ್ಕೂ ಹೆಚ್ಚಿನ ಒಳಹರಿವಿದ್ದು, ತುಂಗಾಭದ್ರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

ಜಿಲ್ಲೆಯ ಕಂಪ್ಲಿ, ಶಿರಗುಪ್ಪ ತಾಲ್ಲೂಕಿನ ನದಿ ಗ್ರಾಮದ ಗ್ರಾಮಸ್ಥರು ನದಿಪಾತ್ರಕ್ಕೆ ತೆರಳದಂತೆ ಸೂಚನೆ ನೀಡಿದ್ದಾರೆ. ಹಲವೆಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟ, ವಸತಿ ಸೇರಿದಂತೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನೂಡಲ್‌ ಅಧಿಕಾರಿಗಳನ್ನು ನೇಮಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

RELATED ARTICLES

Latest News