ಕೊಪ್ಪಳ,ಮಾ.8- ಇತಿಹಾಸ ಪ್ರಸಿದ್ದ ಪ್ರವಾಸಿ ತಾಣವಾದ ಹಂಪಿ ವೀಕ್ಷಣೆಗೆ ಬಂದಿದ್ದ 27 ವರ್ಷದ ಇಸ್ರೇಲಿ ಪ್ರವಾಸಿ ಮತ್ತು 29 ವರ್ಷದ ಹೋಂ ಸ್ಟೇ ಒಡತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹಂಪಿಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಕಾಲುವೆಗೆ ತಳ್ಳಿದ್ದ ಮೂವರಲ್ಲಿ ಒಬ್ಬರು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂಪಿ ಬಳಿ ಇರುವ ಸಾಣಾಪುರ ಸರೋವರದ ದಡದಲ್ಲಿ ನಕ್ಷತ್ರ ವೀಕ್ಷಣೆ ಮಾಡುತ್ತಿದ್ದವರ ಮೇಲೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಅತ್ಯಾಚಾರ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಆರು ತಂಡಗಳನ್ನು ರಚಿಸಿದ್ದು, ಘಟನಾ ಸ್ಥಳದಲ್ಲಿ ಬಂದು ಹೋಗಿದ್ದ ದ್ವಿಚಕ್ರ ವಾಹನದ ಪತ್ತೆಗಾಗಿ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.
ಪ್ರವಾಸಿಗರ ನೀಡಿದ ದೂರಿನ ಹಿನ್ನಲೆಯಲ್ಲಿ ಪೊಲೀಸರು ಮಹಿಳೆಯರ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಇಸ್ರೇಲ್, ಅಮೆರಿಕದಿಂದ ಆಗಮಿಸಿದ್ದ ಇಬ್ಬರು ಹಾಗೂ ಮತ್ತಿಬ್ಬರು ಸ್ವದೇಶಿಯರು ಸಾಣಾಪುರ ಎಡೆದಂಡೆ ಕಾಲುವೆ ಬಳಿ ನಕ್ಷತ್ರ ವೀಕ್ಷಣೆ ಮಾಡುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಆಗುಂತಕರು ಮೊದಲು ಪೆಟ್ರೋಲ್ ಬಂಕ್ ಎಲ್ಲಿದೆ ಎಂದು ಅಪರಿಚಿತರಂತೆ ವರ್ತಿಸಿದ್ದಾರೆ.
ನಂತರ ಮಹಿಳೆಯರು ಪೆಟ್ರೋಲ್ ಬಂಕ್ ಸಮೀಪದಲ್ಲಿದೆ ಎಂದು ಹೇಳಲು ಮುಂದಾದಾಗ ಏಕಾಏಕಿ ಅವರ ಮೇಲೆ ದೌರ್ಜನ್ಯ ನಡೆಸಿ ಅವರ ಬಳಿಯಿದ್ದ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿರೋಧ ತೋರಿದ ಮೂವರು ಪುರುಷರನ್ನು ಎಡದಂಡೆ ಕಾಲುವೆಗೆ ತಳ್ಳಿದ್ದಾರೆ. ಅಮೆರಿಕ ಮೂಲದ ಡೇನಿಯಲ್ ಮತ್ತು ಮಹಾರಾಷ್ಟ್ರದ ಪಂಕಜ್ ಹೇಗೋ ಈಜಿ ದಡ ಸೇರಿದ್ದಾರೆ. ಆದರೆ ಒಡಿಶಾದ ಬಿಬಾಷ್ ಎಂಬ ಪ್ರವಾಸಿಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರ ಮೃತ ದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.
ಗುರುವಾರ ರಾತ್ರಿ 11 ಗಂಟೆಗೆ ಹಂಪಿಯಿಂದ 14 ಕಿ.ಮೀ ದೂರದಲ್ಲಿರುವ ಸಾಣಾಪುರ ಕಾಲುವೆ ಬಳಿ ಬಂದ ದುಷ್ಕರ್ಮಿಗಳು ಕನ್ನಡ ಮತ್ತು ತೆಲುಗಿನಲ್ಲಿ ಮಾತನಾಡುತ್ತಿದ್ದರು. ಪೆಟ್ರೋಲ್ ಬಂಕ್ ಸಮೀಪದಲ್ಲಿಲ್ಲ ಎಂದು ಹೋಂ ಸ್ಟೇ ಮಾಲೀಕರು ಹೇಳಿದಾಗ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೂವರು ದುಷ್ಕರ್ಮಿಗಳಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ತಕ್ಷಣವೇ ಮಹಿಳೆಯರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಭಾರತೀಯ ನ್ಯಾಯಸಂಹಿತೆ(ಬಿಎನ್ಎಸ್)ಯಡಿ 309(6) ಸುಲಿಗೆ, ಕಳ್ಳತನ, 311 ಸಾವು ಅಥವಾ ಗಂಭೀರ ಗಾಯ ಉಂಟು ಮಾಡುವ ದರೋಡೆ, 70(1) ಸಾಮೂಹಿಕ ಅತ್ಯಾಚಾರ, 109 ಕೊಲೆಗೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್ಗಳಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಈ ಘಟನೆಯಿಂದ ಹಂಪಿ ಸುತ್ತಮುತ್ತ ಪ್ರವಾಸಿ ತಾಣಗಳನ್ನು ವೀಕ್ಷಿಸಲುದೇಶ, ವಿದೇಶದಿಂದ ಬರುವ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ.