ಮೈಸೂರು,ಅ.15- ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಬೇಕು ಎಂದು ನಾದಬ್ರಹ್ಮ, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಕರೆ ನೀಡಿದರು. ಚಾಮುಂಡಿ ಬೆಟ್ಟದಲ್ಲಿಂದು ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಆಗ ಕನ್ನಡ ಜಗತ್ತಿನ ಭಾಷೆಯಾಗಿ ಬೆಳೆಯಲು ಸಾಧ್ಯವಿದೆ. ಅಭಿವೃದ್ಧಿ ಮತ್ತು ಶಾಂತಿ ಸಂವೃದ್ದಿ ಕನ್ನಡಿಗರ ಒಂದು ಅಂಶ ಕಾರ್ಯಸೂಚಿಯಾಗಬೇಕು ಎಂದರು.
ಪೂಜ್ಯ ಕನ್ನಡ – ಕನ್ನಡಿಗರಿಗೆ ನನ್ನ ನಮನ ಎಂದು ಭಾಷಣ ಆರಂಭಿಸಿದ ಅವರು, ಈ ಬಾರಿಯ ದಸರಾ ಮಹೋತ್ಸವವನ್ನು ಕರ್ನಾಟಕ ಐದಶ ಎಂದು ಕರೆಯೋಣ, ಕರ್ನಾಟಕದ ಏಕೀಕರಣವಾಗಿ 50 ವರ್ಷಗಳಾಗಿದೆ ಹಾಗೆಯೇ ನನ್ನ ಕಲಾ ಸೇವೆಯು ಆರಂಭವಾಗಿ 50 ವರ್ಷಗಳು ತುಂಬಿದೆ .ಹಾಗಾಗಿ ಈ ಬಾರಿಯ ದಸರಾ ಮಹೋತ್ಸವವನ್ನು ಕರ್ನಾಟಕ ಐದಶ ಎಂದು ಕರೆಯೋಣ. ನನ್ನ ಐವತ್ತು ವರ್ಷಗಳ ಸೇವೆಗೆ ಸಿಕ್ಕಿರುವ ಇದು ಬಹಳ ದೊಡ್ಡ ಬೆಲೆ ಬಾಳುವಂತದು ಎಂದರು.
ಈ ದೇವಾಲಯ, ಈ ಬೆಟ್ಟ, ಈ ದೇವಿ, ಹಬ್ಬ, ಈ ದಿಬ್ಬ, ಈ ದೀಪ ಹಚ್ಚೋದು, ನನ್ನ ಸೌಭಾಗ್ಯ. ದೈವಸಮಾನಾವಾದ ಈ ನುಡಿಗೆ , ಕನ್ನಡ ನಾಡಿಗೆ , ಈ ದೇವಾಲಯಕ್ಕೆ , ಈ ಪ್ರೇಮಾಯಣಕ್ಕೆ ಸಾವಿರದ ಶರಣುಗಳು ಎಂದು ಹೇಳಿದರು.ಈ ಅವಕಾಶಕ್ಕಾಗಿ ಯಾರನ್ನು ನೆನೆಯಬೇಕು, ಅಪ್ಪ ಗೋವಿಂದರಾಜು, ಅವ್ವ ರಾಜವ್ವ, ಗುರು ನೀಲಕಂಠನನ್ನೇ, ರಕ್ತದೊಳಗಿನ ನಾದವನ್ನೇ, ಚಂದನವನವನ್ನೇ, ಸರ್ಕಾರವನ್ನೇ , ಸಂವಿಧಾನವನ್ನೇಎಂದು ಬಣ್ಣಿಸಿದರು.
ಚಾಮುಂಡಿ ಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳಿವೆ. ದಸರಾ ಸಮಾರಂಭದಲ್ಲಿ ಭಾಗವಹಿಸಲು ನಾನು ಸಾವಿರ ಮೆಟ್ಟಿಲುಗಳನ್ನು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ , ನಾನು ಸಹ ಸಾವಿರ ಮೆಟ್ಟಿಲುಗಳನ್ನು ಜೀವನದಲ್ಲಿ ಹತ್ತಿ ಇಂದು ಇಂತಹ ಒಂದು ದೊಡ್ಡ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಸಂತಸಪಟ್ಟರು.
ಸಮೀಕ್ಷೆ ನಡೆಯಬೇಕು: ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಕುರಿತು ಒಂದು ಸಮೀಕ್ಷೆ ನಡೆಯಬೇಕು ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕನ್ನಡ ಬರುತ್ತದೆ. ಕನ್ನಡ ಬರೆಯಲು ಬರುತ್ತದೆ. ಕನ್ನಡ ಓದಲು ಬರುತ್ತದೆ ಎಂಬ ಎಲ್ಲಾ ವಿಷಯ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸಮೀಕ್ಷೆಯನ್ನು ನಡೆಸಬೇಕು ಎಂದು ಅವರು ಹೇಳಿದರು.
ಇದೊಂದು ಡೇಟಾ ಆಗಬೇಕು. ಈ ಮಾಹಿತಿ ನಮ್ಮಲ್ಲಿ ಇರಬೇಕು ಎಂದು ಸರ್ಕಾರಕ್ಕೆ ಇದೇ ವೇಳೆ ಹಂಸಲೇಖ ಅವರು ಮನವಿ ಮಾಡಿದರು. ಸರ್ಕಾರ ಹಾಗೂ ಸಾರ್ವಜನಿಕರ ಒತ್ತಾಸೆ ಮೇರೆಗೆ ಇದನ್ನು ಮಾಡಬೇಕು. ಕನ್ನಡ ಕಲಿಯಬೇಕು ಎಂದು ಮುಂದೆ ಬರುವವರಿಗೆ ಕರ್ನಾಟಕದಲ್ಲಿ 30 ದಿನಗಳೊಳಗೆ ಕನ್ನಡವನ್ನು ಕಲಿಸಬೇಕು. ಅವರು ಕನ್ನಡ ಕಲಿತ ಮೇಲೆ ಅವರಿಗೆ ಕನ್ನಡ ಪಟ್ಟ ನೀಡಬೇಕು. ಕನ್ನಡ ಪಟ್ಟ ಎಂದರೆ ಇದೊಂದು ದಾಖಲೆಯಾಗಿರುತ್ತದೆ ಎಂದರು.
ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು
ಎಪಿಎಲ್ , ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಈ ಕನ್ನಡ ಪಟ್ಟ ಹೊಂದಿರುವವರಿಗೆ ಕರ್ನಾಟಕದಲ್ಲಿ ಕೆಲಸ ಸಿಗುವಂತಾಗಬೇಕು ಎಂದವರು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು. ಇಂದಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಜೆ.ಜಾರ್ಜ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಶ್ರೀವತ್ಸ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮೇಯರ್ ಶಿವಕುಮಾರ್ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.