ಬೆಂಗಳೂರು, ಅ.17- ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರ್ಕಾರದಿಂದಲೇ ಭೂಮಿ, ನೀರು, ತೆರಿಗೆ, ವಿದ್ಯುತ್, ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುವ ಸಂಸ್ಥೆಗಳ ಮಾಲೀಕರು ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ ಉದ್ಧಟತನದ ಪರಮಾವಧಿ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಆಕ್ಷೇಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರು ಅವರ, ಸರಳತೆ ಶ್ರೀಮಂತಿಕೆಯನ್ನು ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ತ ಮನಃಸ್ಥಿತಿಯನ್ನಲ್ಲ, ಶ್ರೀಮಂತಿಕೆಯನ್ನು ಸರಳತೆಯಲ್ಲಿ
ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ದೀನ ದಲಿತರ, ಹಿಂದುಳಿದವರ, ಬಡ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಪಡಿಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಮಾತ್ರ ಸಾಧ್ಯವೇ ಹೊರತು, ತೋರಿಣಿಕೆ, ಪ್ರಚಾರದ ಮೋಹದಿಂದ ಕೂಡಿದ ಸಮಾಜಸೇವೆಯಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡವರ್ಗದವರ ಏಳಿಗೆಗಾಗಿ ಸರ್ಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ ತನ ಎಂದಿದ್ದಾರೆ.