Friday, November 22, 2024
Homeರಾಜ್ಯಇಂದಿನಿಂದ ನ.3ರವರೆಗೆ ಹಾಸನಾಂಬಾ ದರ್ಶನೋತ್ಸವ, ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶ

ಇಂದಿನಿಂದ ನ.3ರವರೆಗೆ ಹಾಸನಾಂಬಾ ದರ್ಶನೋತ್ಸವ, ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶ

Hasanamba temple in Karnataka to be opened Today

ಹಾಸನ,ಅ.24- ವರ್ಷಕ್ಕೊಮೆ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ನಗರದ ಅಧಿದೇವತೆ ಹಾಗೂ ಶಕ್ತಿದೇವತೆ ಹಾಸನಾಂಬೆಯ ಗರ್ಭಗುಡಿ ಬಾಗಿಲನ್ನು ಶಾಸೊ್ತ್ರೕಕ್ತವಾಗಿ ಇಂದು ತೆರೆಯಲಾಯಿತು.

ಅರಸು ವಂಶಸ್ಥರು ಬಾಳೆಕಂಬವನ್ನು ಕಡಿಯುವ ಮೂಲಕ 12.10ಕ್ಕೆ ಸರಿಯಾಗಿ ಗರ್ಭಗುಡಿಯ ಬಾಗಿಲನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ಶಾಸಕರಾದ ಎಚ್‌.ಪಿ.ಸ್ವರೂಪ್‌ ಪ್ರಕಾಶ್‌, ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸತ್ಯಭಾಮಾ, ಎಸ್‌‍ಪಿ ಮಹಮದ್‌ ಸುಜೇತ ಸೇರಿದಂತೆ ಸೇರಿದಂತೆ ಜಿಲ್ಲಾಳಿತದ ಅಧಿಕಾರಿಗಳು, ದೇವಾಲದಯ ಆಡಳಿತ ಮಂಡಳಿ, ಮುಖಂಡರುಗಳ ಸಮುಖದಲ್ಲಿ ದೇವಾಲದಯ ಗರ್ಭಗುಡಿ ತೆರೆಯಲಾಯಿತು.

ಕಳೆದ ವರ್ಷ ಗರ್ಭಗುಡಿ ಮುಚ್ಚುವ ವೇಳೆ ಹಚ್ಚಲಾಗಿದ್ದ ದೀಪ ಹಾಗೂ ದೇವರ ಮುಂದೆ ಇಟ್ಟಿದ್ದ ಹೂವು, ನೈವೇದ್ಯ ಹಾಗೆಯೇ ಇತ್ತು.ಇಂದಿನಿಂದ ನ.3ರವರೆಗೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಇಂದು ಮತ್ತು ನ.3 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ.

ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಮಳೆ ಹಾಗೂ ಬಿಸಿಲಿನಿಂದ ಆಶ್ರಯ ಪಡೆಯಲು ಜರ್ಮನ್‌ ಟೆಂಟ್‌ ನಿರ್ಮಾಣ ಮಾಡಲಾಗಿದೆ. ದೇವಾಲಯ ಹಾಗೂ ಹೊರ ಹಾಗೂ ಒಳಭಾಗದಲ್ಲಿ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಹೂವಿನಲ್ಲಿ ಮೂಡಿಬಂದ ಶಿವಲಿಂಗ ಭಕ್ತರನ್ನು ಆಕರ್ಷಿಸುತ್ತಿದೆ.

ಇದೇ ಮೊದಲ ಬಾರಿಗೆ ದೇವಾಲಯದ ಬಳಿಗೆ ಬರುವ ಗಣ್ಯಾತಿಗಣ್ಯರಿಗೆ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಎರಡು ಮಾರ್ಗ ಮಾಡಲಾಗಿದೆ. ಹಾಗೆಯೇ ಲಡ್ಡು-ಪ್ರಸಾದ ವಿತರಣೆಗೆ 24 ಕೌಂಟರ್‌ ತೆರೆಯಲಾಗಿದೆ. ಹಾಸನ ನಗರವನ್ನು ದಸರಾ ಮಾದರಿಯಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ 1,400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಇಂದಿನಿಂದ ನವೆಂಬರ್‌ 3ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ಜರುಗಲಿದ್ದು, ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಒಂಭತ್ತು ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ.

25 ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನ ನಿರೀಕ್ಷೆ :
ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇವಾಲಯದ ಆಡಳಿತ ಮಂಡಳಿಯಿಂದ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭಕ್ತರಿಗೆ ಎಲ್ಲಿಯೂ ಕೂಡ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ.

ಝಘಮಗಿಸಿದ ಹಾಸನ :
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ತಳಿರು-ತೋರಣಗಳಿಂದ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

RELATED ARTICLES

Latest News