ಹಾಸನ , ಅ.12– ಹಾಸನಾಂಬ ದರ್ಶನೋತ್ಸವದ ಎರಡನೇ ದಿನವಾದ ಶನಿವಾರ ಭಕ್ತರ ದಂಡೆ ಹರಿದು ಬಂದಿದ್ದು, ಅಚ್ಚುಕಟ್ಟಾದ ವ್ಯವಸ್ಥೆ, ಸುಲಲಿತಾ ದರ್ಶನಕ್ಕೆ ಮನಸೋತಿರುವ ಭಕ್ತಗಣ, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಜಾನೆಯಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ದರ್ಶನಕ್ಕೆ ಆಗಮಿಸುತ್ತಿದ್ದು ಸರ್ವದರ್ಶನ ಸೇರಿದಂತೆ ಗೋಲ್ಡನ್ ಪಾಸ್,1 ಸಾವಿರ ಹಾಗೂ 300 ರೂಗಳ ಟಿಕೆಟ್ ಪಡೆದ ಭಕ್ತರು ಅತ್ಯಂತ ಕಡಿಮೆ ಸಮಯದಲ್ಲಿ ದರ್ಶನ ಪಡೆದು ಹೊರ ಬರುತ್ತಿರುವುದು ಸಾಮಾನ್ಯವಾಗಿತ್ತು.
ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ, ಉಪವಿಭಾಗಾಧಿಕಾರಿ ಮತ್ತು ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಇಡೀ ಆಡಳಿತ ವರ್ಗ ಕೈಗೊಂಡಿರುವ ಕ್ರಮದಿಂದಾಗಿ ಹಾಗೂ ವಿಶೇಷ ಪಾಸ್‌ಗಳ ವ್ಯವಸ್ಥೆಯ ರದ್ದಿನಿಂದಾಗಿ ಸಾರ್ವಜನಿಕರ ದರ್ಶನಕ್ಕೆ ಯಾವುದೇ ಅಡೆತಡೆ ಆಗುತ್ತಿಲ್ಲ ಮತ್ತು ಶಿಷ್ಟಾಚಾರ ಪಾಲನೆ ನೆಪದಲ್ಲಿ ತಾಸುಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿಲ್ಲ ಎಂದು ಭಕ್ತಗಣ ಹರ್ಷವ್ಯಕ್ತಪಡಿಸಿದೆ.
ಸಚಿವರಿಂದ ಖುದ್ದು ಸ್ಥಳ ಪರಿಶೀಲನೆ:
ಹಾಸನಾಂಬ , ಸಿದ್ದೇಶ್ವರ ಸ್ವಾಮೀ ದರ್ಶನೋತ್ಸವ ಪ್ರಾರಂಭವಾದಾಗಿನಿಂದಲೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ದೇವಸ್ಥಾನದ ಆವರಣ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಖುದ್ದು ಸ್ಥಳ ಪರಿಶೀಲನೆ ನಡೆಸಿ ಉಸ್ತುವಾರಿ ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳು ಸಹ ಉತ್ತಮ ಕಾರ್ಯ ಪ್ರವೃತ್ತರಾಗಿರುವುದರಿಂದ ದರ್ಶನ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗುತ್ತಿಲ್ಲ. ಇಂದು ಸಹ ಕಷ್ಣಭೈರೇಗೌಡ ಅವರು ದೇವಸ್ಥಾನದ ಆವರಣದಲ್ಲಿ ಸರ್ವದರ್ಶನ ಸೇರಿದಂತೆ ಇತರೆ ಸಾಲುಗಳಲ್ಲಿ ಆಗಮಿಸುವಂತಹ ಭಕ್ತರ ಅಭಿಪ್ರಾ ಯಗಳನ್ನು ಆಲಿಸಿದ್ದು ಮತ್ತಷ್ಟು ಉತ್ತಮ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳುವ ಕುರಿತು ಮಾತನಾಡಿದ್ದಾರೆ.
ಮಾರಾಟ ಮಳಿಗೆಯತ್ತ ಜನ ಜಾತ್ರೆ:
ಇನ್ನು ಹಾಸನಾಂಬ ದರ್ಶನ ಪಡೆದ ನಂತರ ಸಾರ್ವಜನಿಕರು ದೇವಾಲಯದ ಸುತ್ತಮುತ್ತ ಹಾಕಲಾಗಿರುವ ವಿವಿಧ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು ಜನ ಜಾತ್ರೆಯೇ ಕಾಣುತ್ತಿದೆ.ಕಡ್ಲೆಪುರಿ, ಬೋಂಡಾ-ಬಜ್ಜಿ, ಸಿಹಿ ಪದಾರ್ಥಗಳು, ಹೆಣ್ಣು ಮಕ್ಕಳಿಗೆ ಬೇಕಾದಂತಹ ವಿವಿಧ ಬಗೆಯ ಬಳೆ, ಅಲಂಕಾರಿಕ ಸಾಮಗ್ರಿಗಳು, ಮಕ್ಕಳಿಗೆ ಆಟದ ವಸ್ತುಗಳು ಸೇರಿದಂತೆ ಮತ್ತಿತರ ಅಂಗಡಿಗಳು ಹೆಚ್ಚು ಆಕರ್ಷಿಸುತ್ತಿವೆ.
ಕುಟುಂಬದೊಂದಿಗೆ ಸಚಿವ ತಂಗಡಗಿಯಿಂದ ದೇವಿಯ ದರ್ಶನ:
ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಕುಟುಂಬ ಸಮೇತರಾಗಿ ದೇವಿ ದರ್ಶನ ಪಡೆದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ಸಮೇತನಾಗಿ ದೇವಿ ದರ್ರ್ಶನ ಪಡೆದಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ ರೈತರಿಗೆ ಉತ್ತಮ ಬೆಳೆ ಸಿಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.
ಕಳೆದ ಬಾರಿ ಒಬ್ಬನೇ ಬಂದಿದ್ದು ಈ ಬಾರಿ ಪತ್ನಿ ಜೊತೆಗೆ ಬಂದಿದ್ದೇನೆ.ವಿಶಿಷ್ಟವಾಗಿ ಅದ್ಭುತವಾಗಿ ಹಾಸನಾಂಬ ದೇವಿ ದರ್ಶನ ಆಗಿದೆ. ಜಿಲ್ಲಾ ಆಡಳಿತದಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದ್ದು ಇದನ್ನು ಕಣ್ಣಾರೆ ಕಾಣುತಿದ್ದೇನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಮುತುವರ್ಜಿಯಿಂದ ವ್ಯವಸ್ಥೆಯನ್ನು ಮಾಡಿದ್ದಾರೆ. ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಲ್ಲರೂ ಆರಾಮಾಗಿ ದರ್ಶನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಸುನಿಲ್ ಬೋಸ್‌ರಿಂದ ಹಾಸನಾಂಬ ದರ್ಶನ:
ಶಿಷ್ಟಾಚಾರದ ಪ್ರಕಾರ ದೇವಿ ದರ್ಶನ ಪಡೆದ ಸಂಸದ ಸುನಿಲ್ ಬೋಸ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷ ನವರಾತ್ರಿ ಆದಮೇಲೆ ವರ್ಷಕ್ಕೆ ಒಂದು ಬಾರಿ ದೇವಾಲಯ ತೆರೆಯುತ್ತದೆ ಇದು ಪವಾಡವಿರುವಂತಹ ದೇವಸ್ಥಾನ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರಾದ ಕಷ್ಣಭೈರೇಗೌಡ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಎಂದರು. ಕಳೆದ ಬಾರಿ ಬಹಳ ಗೊಂದಲಗಳು ಸಷ್ಟಿಯಾಗಿತ್ತು. ಜನಸಾಮಾನ್ಯರು ಜಿಲ್ಲಾಡಳಿತಕ್ಕೆ ಶಾಪ ಹಾಕಿರುವುದನ್ನು ನೋಡಿದ್ದೇನೆ ಎಂದರು. ತಾಯಿ ಹಾಸನಾಂಬ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಕೋರಿದರು.
ಬಿಜೆಪಿಯಲ್ಲೂ ಗೊಂದಲ ಕಚ್ಚಾಟ ಇದೆ: ಬೆಲ್ಲದ್
ಬಿಜೆಪಿಯಲ್ಲಿ ಸ್ವಲ್ಪ ಗೊಂದಲ, ಕಚ್ಚಾಟ ಇದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಅದೆಲ್ಲ ಸರಿ ಹೋಗುತ್ತೆ ಅನ್ನುವ ಭರವಸೆ ಇದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದರು. ಹಾಸನಾಂಬೆ ದೇವಿ ದರ್ಶನದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಂದು ಮನೆ ಎಂದ ಮೇಲೆ ಬೇರೆ ಬೇರೆ ಅಭಿಪ್ರಾಯ ಇರುತ್ತದೆ, ಐದು ಬೆರಳು ಒಂದೇ ಸಮನೆ ಇರಲ್ಲ. ನಮ ಪಕ್ಷದಲ್ಲಿ ಒಳಜಗಳ ಇರುವುದು ಓಪನ್ ಸಿಕ್ರೇಟ್, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಸರ್‌ಥಿಸಿಕೊಂಡರು.
ಸಮೀಕ್ಷೆಯಲ್ಲಿ ಲಿಂಗಾಯಿತ, ವೀರಶೈವ ಬರೆಸಿ ಎಂಬ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಅರವಿಂದ್ ಬೆಲ್ಲದ್, ಭಾರತ ದೇಶದಲ್ಲಿ ಇರುವವರೆಲ್ಲಾ ಹಿಂದೂಗಳೇ, ಬಸವಣ್ಣ ಎಲ್ಲಿಯೂ ಸಹಿತ ಸನಾತನ ರ್‌ಮ ಅನುಸರಿಸ ಮಾಡಬೇಡಿ ಅಂಥ ಹೇಳಿಲ್ಲ ಬಸವಣ್ಣ ಕೂಡಲ ಸಂಗಮ ಹೆಸರು ತಗೊಂಡು ಎಲ್ಲಾ ವಚನ ಬರೆದರು. ಅಕ್ಕಮಹಾದೇವಿ ಚನ್ನಮಲ್ಲಿ ಕರ್‌ಜುನ ಹೆಸರು ತಗೊಂಡು ವಚನ ಬರೆದರು. ಎಲ್ಲಾ ಶರಣರು ದೇವರ ಹೆಸರು ತಗೊಂಡು ವಚನ ಬರೆದಿದ್ದಾರೆ.ಎಡಪಂಥೀಯರು ಬಸವಣ್ಣ ಅವರನ್ನು ನಕ್ಸಲ್ ಹೀರೋ ಮಾಡಲು ಹೊರಟಿದ್ದಾರೆ. ಬಸವಣ್ಣ ಅವರಿಗೆ ಯಾವುದೇ ಧರ್‌ಮಿಕ ಚಿಂತನೆ ಇರಲಿಲ್ಲ ಎಂದರು.
ಒಂದೇ ದಿನ ಒಂದು ಕೋಟಿ ಆದಾಯ:
ವರ್ಷಕ್ಕೊಮೆ ದರ್ಶನ ನೀಡುವ ಹಾಸನಾಂಬ ಜಾತ್ರಾ ಮಹೋತ್ಸವ ಶುರುವಾಗಿದ್ದು ಶನಿವಾರ ಒಂದೇ ದಿನ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದುಬಂದಿದೆ.ವಾರಾಂತ್ಯದ ಹಿನ್ನಲೆ ಟಿಕೆಟ್ ಮಾರಾಟದಿಂದ ದಾಖಲೆ ಆದಾಯ ಸಂಗ್ರಹವಾಗಿದೆ. ಒಂದು ಸಾವಿರ ರೂ. ಮೌಲ್ಯದ ಟಿಕೆಟ್ ಮಾರಾಟದಿಂದ 65 ಲಕ್ಷ ರೂ., 300 ರೂ. ಮೌಲ್ಯದ ಟಿಕೆಟ್ ಮಾರಾಟದಿಂದ 35 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕಷ್ಣಬೈರೇಗೌಡ ಮಾಹಿತಿ ನೀಡಿ, ಆರಂಭದ ದಿನಗಳಲ್ಲಿ ಹಾಸನಾಂಬೆ ದರ್ಶನದಲ್ಲಿ ದಾಖಲೆ ಆದಾಯ ಸಂಗ್ರಹವಾಗುತ್ತಿದೆ. ಶನಿವಾರ ಒಂದೇ ದಿನ 1000 ರೂ. ಹಾಗೂ 300ರೂ. ಟಿಕೆಟ್ ಮಾರಾಟದಿಂದ 1 ಕೋಟಿರೂ. ಸಂಗ್ರಹವಾಗಿದೆ.ಶುಕ್ರವಾರ 67 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷ 12 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈ ವರ್ಷ 15 ಕೋಟಿಗೂ ಹೆಚ್ಚು ಆದಾಯ ಸಂಗ್ರಹ ನಿರೀಕ್ಷೆ ಇದೆ. ಯಾವುದೇ ಗೊಂದಲವಿಲ್ಲದೆ ದರ್ಶನ ಚೆನ್ನಾಗಿ ನಡೀತಿದೆ. ಪ್ರತಿದಿನ ಕನಿಷ್ಠ 2 ಲಕ್ಷ ಭಕ್ತರು ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.