ಹಾಸನ,ಅ.14-ಹಾಸನಾಂಬೆ ದರ್ಶನೋತ್ಸವದ ಸಾರ್ವಜನಿಕ ದರ್ಶನದ 5ನೇ ದಿನವಾದ ಇಂದು ಸಹ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದು, ಈ ಭಾರಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದು, ಎಲ್ಲರೂ ಒಂದೇ ಎಂಬಂತೆ ದರ್ಶನ ಸುಲಲಿತವಾಗಿ ನಡೆಯುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ನಿರಾಸದಾಯಕವಾಗಿ ದರ್ಶನ ಪಡೆಯುತ್ತಿದ್ದಾರೆ. ಈ ಭಾರಿ ಜನಪ್ರತಿನಿಧಿಗಳು, ಅಧಿಕಾರಿಗಳು, ಜನಸಾಮಾನ್ಯರಂತೆ ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆಯುತ್ತಿರುವುದು ವಿಶೇಷ.
ಜಿಲ್ಲಾಧಿಕಾರಿ ಲತಾಕುಮಾರಿಯವರು ಕೆಲ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ಜನ ಸಾಮಾನ್ಯರಂತೆ ನಿಂತು ದರ್ಶನ ಪಡೆದರು. ಅದೇ ರೀತಿ ಚಿತ್ರನಟಿ ತಾರಾ ಅನುರಾಧ, ಅಂಜಲಿ, ಶಾಸಕ ಸ್ವರೂಪ್ಪ್ರಕಾಶ್ ಸೇರಿದಂತೆ ಹಲವರು ಗಣ್ಯರು ಶಿಷ್ಟಾಚಾರ ಪಾಲನೆ ಮಾಡಿದ್ದಾರೆ.
ಮುಂಜಾನೆ ನಾಲ್ಕು ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಭಕ್ತರು ಎರಡು-ಮೂರು ಗಂಟೆಗಳಲ್ಲಿ ದರ್ಶನ ಪಡೆದಿದ್ದಾರೆ. ಅದೇ ರೀತಿ 300 ರೂ. ಹಾಗೂ 1 ಸಾವಿರದ ಟಿಕೆಟ್ ಪಡೆದವರು ಸಹ ಒಂದು ಗಂಟೆಗಳಲ್ಲಿ ದರ್ಶನ ಪಡೆದಿದ್ದಾರೆ.ಈ ಭಾರಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲೂ ಕೂಡ ತೊಂದರೆಯಾಗದಂತೆ ದರ್ಶನ ನಡೆಯುತ್ತಿದ್ದು, ಭಕ್ತಗಣ ಸಂತಸ ವ್ಯಕ್ತಪಡಿಸಿದೆ.
ದೂರದ ಊರುಗಳಿಂದ ಬಂದ ಭಕ್ತರು ಸಹ ಕೆಲವೇ ಗಂಟೆಗಳಲ್ಲಿ ದರ್ಶನ ಪಡೆಯುತ್ತಿದ್ದು ಸಂತಸದ ವಿಷಯ.ಕುಡಿಯುವ ನೀರು, ಶೌಚಾಯಲ, ಸರದಿ ಸಾಲು, ನೆರಳಿನ ವ್ಯವಸ್ಥೆ , ಟಿಕೆಟ್ ಕೌಂಟರ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಬಹಳ ಶಿಸ್ತಿನಿಂದ ಪಾಲನೆ ಮಾಡಲಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.