Home ಇದೀಗ ಬಂದ ಸುದ್ದಿ ಅ.24ರಿಂದ ಸಿದ್ದೇಶ್ವರ ಹಾಗೂ ಹಾಸನಾಂಬ ದರ್ಶನೋತ್ಸವ

ಅ.24ರಿಂದ ಸಿದ್ದೇಶ್ವರ ಹಾಗೂ ಹಾಸನಾಂಬ ದರ್ಶನೋತ್ಸವ

0
ಅ.24ರಿಂದ ಸಿದ್ದೇಶ್ವರ ಹಾಗೂ ಹಾಸನಾಂಬ ದರ್ಶನೋತ್ಸವ

ಹಾಸನ, ಸೆ.1- ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಕಳೆದ ಬಾರಿಗಿಂತ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲು ಉಸ್ತುವಾರಿ ಸಚಿವ ಕೆ.ಎನ್‌ ರಾಜಣ್ಣ ಅಧಿಕಾರಿಗಳಿಗೆ ಕಟ್ಟನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ-2024 ನಿರ್ವಹಣೆ ಹಾಗೂ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸುವ ಸಲುವಾಗಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ಹಾಸನಾಂಬ ದರ್ಶನಕ್ಕೆ ಈ ಬಾರಿ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಸೇರಿದಂತೆ ಸುಗಮ ದರ್ಶನಕ್ಕೆ ಅಡಚಣೆಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಈ ಬಾರಿ ಅ. 24ರಿಂದ ನ. 3ರವರೆಗೂ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದ್ದು, 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು ಕಳೆದ ಬಾರಿಗಿಂತ ನಾಲ್ಕು ಲಕ್ಷ ಹೆಚ್ಚು ಭಕ್ತರು ಆಗಮಿಸುವುದರೊಂದಿಗೆ ಸುಮಾರು 20 ಲಕ್ಷ ಭಕ್ತರ ಆಗಮನ ನಿರೀಕ್ಷೆ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ದರ್ಶನೋತ್ಸವ ಪ್ರಾರಂಭವಾಗುವ ಅ. 24ರಂದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದು ನಾನು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಸಮುಖದಲ್ಲಿ ದೇವರ ಬಾಗಿಲನ್ನು ತೆರೆಯಲಾಗುವುದು ಎಂದು ತಿಳಿಸಿದರು .

ವಿಶೇಷ ದರ್ಶನ ಟಿಕೆಟ್ಗೆ ಲಾಡು ಪ್ರಸಾದ: ಇಸ್ಕಾನ್‌ ಉಸ್ತವಾರಿ
ಈ ಬಾರಿ 1000 ಹಾಗೂ 300ರೂಗಳ ವಿಶೇಷ ದರ್ಶನದ ಪಾಸ್‌‍ಗಳಿಗೆ ಲಾಡು ಪ್ರಸಾದ ನೀಡುವ ಕುರಿತು ತಿರ್ಮಾನಿಸಿ , ವಿಶೇಷ ದರ್ಶನದ 1000ರೂ ಪಾಸಿಗೆ ಎರಡು ಹಾಗೂ 300 ರೂನ ಒಂದು ಲಾಡನ್ನು ನೀಡಲು ನಿರ್ಧರಿಸಲಾಗಿದೆ. ವಿಶೇಷವಾಗಿ ಈ ಬಾರಿ ಇಸ್ಕಾನ್‌ ಸಂಸ್ಥೆಯಿಂದ ಲಾಡು ಪ್ರಸಾದ ತಯಾರಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಾಹನಗಳ ಪಾರ್ಕಿಂಗ್‌ ವ್ಯಯವಸ್ಥೆ ಸೇರಿದಂತೆ ಗಣ್ಯರು ಆಗಮಿಸಲು ಒನ್‌ ವೇ ರೋಡ್‌ ಮ್ಯಾಪ್‌ ಸಿದ್ಧಪಡಿಸಿದ್ದು ಈ ಮಾರ್ಗದಲ್ಲಿ ಕೇವಲ ಸಿಎಂ ಸೇರಿದಂತೆ ಅತಿ ಗಣ್ಯರ ಆಗಮನ ಹಾಗೂ ನಿರ್ಗಮನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಸಭೆಯಲ್ಲಿ ಮಾಹಿತಿ ನೀಡಿದರು.

ಈ ಬಾರಿಯೂ ಇರಲಿದೆ ಟೂರ್‌ ಪ್ಯಾಕೇಜ್‌:ಹೆಲಿ ಟೂರಿಸಂ
ಕಳೆದ ಬಾರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಕೆಎಸ್‌‍ಆರ್ಟಿಸಿ ಬಸ್‌‍ಗಳ ಮೂಲಕ ಪ್ರವಾಸದ ಪ್ಯಾಕೇಜ್‌ ಪರಿಚಯಿಸಲಾಗಿತ್ತು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಾರಿಯೂ ಅದೇ ರೀತಿ ಪ್ಯಾಕೇಜ್‌ ಟೂರ್‌ ಅನ್ನು ಪರಿಚಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಶಾಸಕ ಸ್ವರೂಪ್‌ ಪ್ರಕಾಶ್‌ ಮಾತನಾಡಿ, ಈ ಬಾರಿ ಹಾಸನಂಬ ದರ್ಶನೋತ್ಸವ ಹಿನ್ನಲೆಯಲ್ಲಿ ಡೈರಿ ವೃತ್ತದಿಂದ ದೇವಾಲಯದವರೆಗೆ ಇರುವಂತಹ ಸರ್ಕಾರಿ ಕಚೇರಿಗಳ ಕಾಂಪೌಂಡ್‌ ಗಳ ಮೇಲೆ ಹಾಸನಂಬ ದೇವಿ ಮಹತ್ವ ಬಿಂಬಿಸುವ ಪೇಂಟಿಂಗ್‌ ರೂಪಿಸಲು ನಗರಸಭೆಯ ಮೂಲಕ ಟೆಂಡರ್‌ ಕರೆಯುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಶ್ರೇಯಸ್‌‍ ಪಟೇಲ್‌, ಗೃಹ ಮಂಡಳಿ ಅಧ್ಯಕ್ಷ ಕೆಎಂ ಶಿವಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್‌. ಪೂರ್ಣಿಮಾ,ಎಸ್ಪಿ ಮೊಹಮ್ಮದ್‌ ಸುಜೀತಾ, ನಗರಸಭೆ ಅಧ್ಯಕ್ಷ ಚಂದ್ರೇಗೌಡ ತಹಸಿಲ್ದಾರ್‌ ಶ್ವೇತಾ, ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.