Saturday, September 13, 2025
Homeರಾಜ್ಯಹಾಸನ ಗಣೇಶೋತ್ಸವ ದುರಂತ : 10 ಲಕ್ಷ ಪರಿಹಾರಕ್ಕೆ ಅಶೋಕ್‌ ಆಗ್ರಹ

ಹಾಸನ ಗಣೇಶೋತ್ಸವ ದುರಂತ : 10 ಲಕ್ಷ ಪರಿಹಾರಕ್ಕೆ ಅಶೋಕ್‌ ಆಗ್ರಹ

Hassan Ganesh Festival Tragedy: Ashok demands Rs 10 lakh compensation

ಬೆಂಗಳೂರು,ಸೆ.13- ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಗಣೇಶ ಉತ್ಸವದ ವೇಳೆ ಸಂಭವಿಸಿದ ಆಪಘಾತದಲ್ಲಿ ಮೃತಪಟ್ಟವರು ಹಳ್ಳಿಯವರು, 10 ಲಕ್ಷ ರೂ. ಪರಿಹಾರ ಕೊಟ್ಟರೆ, ಒಳ್ಳೆಯದು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಗಣೇಶೋತ್ಸವ ಸಂದರ್ಭದಲ್ಲಿ ಹೀಗೆ ಆಗಿದ್ದು ನೋವು ತಂದಿದೆ. ಮೃತರ ಆತಕ್ಕೆ ಶಾಂತಿ ಸಿಗಲಿ. ಸರ್ಕಾರ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಮೃತರೆಲ್ಲ ಹಳ್ಳಿಯವರು, ಹೀಗಾಗಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಹಾಸನಕ್ಕೆ ಹೋಗುವೆ. ಡಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆಗೂ ಭೇಟಿ ನೀಡುತ್ತೇನೆ. ಸರ್ಕಾರ ಗಾಯಾಳುಗಳನ್ನು ಬೆಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಬೇಕು ಎಂದು ಒತ್ತಾಯ ಮಾಡಿದರು.

ಇದೇ ವೇಳೆ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆ ವಿಚಾರವಾಗಿ ಮಾತನಾಡಿ, ಚಿತ್ರದುರ್ಗದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆ ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸುತ್ತಮುತ್ತಲಿನ ಜಿಲ್ಲೆಯ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಬೇಕು. ಯಾವುದೇ ಕಿಡಿಗೇಡಿಗಳು ಮಸೀದಿಯಿಂದ ಕಲ್ಲು ಹಾಕೋದಕ್ಕೆ ಅವಕಾಶ ಕೊಡಬಾರದು. ಎಲ್ಲಾ ರಸ್ತೆಯಲ್ಲಿ ಗಣೇಶ ಹೋಗಬಹುದು, ಯಾರು ಅಡ್ಡಿ ಮಾಡಬಾರದು ಅಂತ ಮುಸ್ಲಿಮರೇ ಹೇಳಿದ್ದಾರೆ. ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್‌ ಎಂದು ಕೋಮುಗಲಭೆ ಸೃಷ್ಟಿ ಮಾಡುತ್ತಾರೆ. ಸರ್ಕಾರ ಕೂಡಾ ಅಂತಹವರ ಕೇಸ್‌‍ ವಾಪಸ್‌‍ ಪಡೆಯುವುದರಿಂದ ಅವರಿಗೆ ಕುಮಕ್ಕು ಬರ್ತಿದೆ. ಪಾಕಿಸ್ತಾನ ಗಿರಾಕಿಗಳಿಗೆ ಪಾಠ ಕಲಿಸಬೇಕು. ಆಗ ಇಂತಹ ಘಟನೆಗಳು ಆಗುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳ ಪ್ರಕರಣದ ತನಿಖೆ ವಿಳಂಬ ವಿಚಾರವಾಗಿ ಮಾತನಾಡಿ, ಸರ್ಕಾರ ಯಾರನ್ನೋ ರಕ್ಷಣೆ ಮಾಡಲು ತನಿಖೆಯನ್ನು ವಿಳಂಬ ಮಾಡಿಸುತ್ತಿದೆ. ಎಸ್‌‍ಐಟಿಗೆ ಬುರುಡೆ ಅಗೆಯುವುದರಲ್ಲಿ ಇದ್ದ ಉತ್ಸಾಹ ತನಿಖೆ ಮಾಡುವುದರಲ್ಲಿ ಇಲ್ಲ. ಜಿಂಕೆಯಂತೆ ಬುರುಡೆ ಅಗೆದು ಆಮೆಗತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆಯುವುದು ನೋಡಿದರೆ ಸರ್ಕಾರವೇ ನಿಧಾನವಾಗಿ ತನಿಖೆ ಮಾಡಿ ಎಂದು ಸೂಚನೆ ಕೊಟ್ಟಂತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕೇಸ್‌‍ನಲ್ಲಿ ಕೇರಳ, ತಮಿಳುನಾಡು, ದೆಹಲಿಗೂ ಲಿಂಕ್‌ ಇದೆ. ಎಸ್‌‍ಐಟಿ ಅಲ್ಲಿಗೆ ಹೋಗಿಲ್ಲ. ಇದನ್ನ ನೋಡಿದ್ರೆ ತನಿಖೆ ಹಳ್ಳ ಹಿಡಿಸೋಕೆ, ಕೇಸ್‌‍ ಮುಚ್ಚಿ ಹಾಕೋ ಹುನ್ನಾರ ನಡೆಯುತ್ತಿದೆ ಎನಿಸುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ತಿಮಿಂಗಿಲಗಳು ಇವೆ. ಇವುಗಳ ಬೇಟೆಯಾಡಬೇಕು. ಆದರೆ ಸರ್ಕಾರ ಯಾರದ್ದೋ ರಕ್ಷಣೆಗೆ ನಿಂತಂತೆ ಕಾಣುತ್ತಿದೆ. ಎಸ್‌‍ಐಟಿ ತನಿಖೆ ಹೀಗೆ ವಿಳಂಬ ಆದರೆ, ಬಿಜೆಪಿ ಮತ್ತೆ ಹೋರಾಟಕ್ಕೆ ಇಳಿಯಲಿದೆ ಎಂದು ಅಶೋಕ್‌ ಎಚ್ಚರಿಕೆ ನೀಡಿದರು.

RELATED ARTICLES

Latest News