ಹಾಸನ,ಸೆ.14– ಜಿಲ್ಲೆಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ 10 ಜನರ ಸಾವಿಗೆ ಕಾರಣನಾದ ಟ್ರಕ್ ಚಾಲಕ ಆಸ್ಪತ್ರೆಯಿಂದ ಬಿಡುಗಡೆಯಾಗಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಕುಸಿದುಬಿದ್ದಿದ್ದು ಪುನಃ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಟ್ರಕ್ ಚಾಲಕ ಭುವನೇಶ್‌ನ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಆತನನ್ನು ನಾಗಮಂಗಲದ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಬಿಡುಗಡೆ ಮಾಡಲಾಗಿತ್ತು. ಪೊಲೀಸರು ಆತನನ್ನು ಕರೆದೊಯ್ದು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ತೀರ್ಮಾನಿಸಿದ್ದರು.
ಆದರೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಎದೆನೋಯುತ್ತಿದೆ ಎಂದು ಕುಸಿದುಬಿದ್ದಿದ್ದಾನೆ. ಆತನನ್ನು ಪೊಲೀಸರು ಮತ್ತೆ ಹಿಮ್ಸೌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ವೇಳೆ ಚಾಲಕ ಮದ್ಯಪಾನ ಮಾಡಿ ಟ್ರಕ್ ಚಲಾಯಿಸಿದ್ದನು ಎಂಬುದಕ್ಕೆ ರಕ್ತ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬರುವ ಸಾಧ್ಯತೆಯಿದೆ.