ಹಾಸನ,ಸೆ.20- ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಗ್ರಾಮದ 29 ವರ್ಷದ ಮಹಿಳೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಒಂದು ಗಂಡು ಹಾಗೂ ಎರಡು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದ ಅವರಿಗೆ ಅಲ್ಲಿನ ಸ್ತ್ರೀರೋಗ ತಜ್ಞೆ (ಅಸಿಸ್ಟೆಂಟ್ ಪ್ರೊಫೆಸರ್) ಡಾ.ನ್ಯಾನ್ಸಿ ಪೌಲ್ ಅವರ ಮಾರ್ಗದರ್ಶನದಲ್ಲಿ ವೈದ್ಯ ಸಿಬ್ಬಂದಿಗಳು ಹೆರಿಗೆ ಮಾಡಿಸಿದ್ದಾರೆ.
ಮೊದಲು ಜನಿಸಿದ ಗಂಡು ಮಗು 2.1 ಕೆಜಿ ತೂಕವಿದ್ದು 11.03 ಕ್ಕೆ, ಎರಡನೇ ಹೆಣ್ಣುಮಗು 1.9 ಕೆಜಿ ತೂಕವಿದ್ದು 11.04 ಮತ್ತೊಂದು ಹೆಣ್ಣು ಮಗು 1.8 ಕೆಜಿ ತೂಕವಿದ್ದು 11.05 ಸೆಕೆಂಡಿಗೆ ಜನಿಸಿದೆ. ಮೂರು ನವಜಾತ ಶಿಶುಗಳಿಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂರೂ ಶಿಶುಗಳು ಆರೋಗ್ಯವಾಗಿವೆ ಈ ರೀತಿಯ ಪ್ರಕರಣ ಅಪರೂಪ ಎಂದು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ನ್ಯಾನ್ಸಿ ಪೌಲ್ ತಿಳಿಸಿದ್ದಾರೆ.ಇದೇ ಮೊದಲನೇ ಹೆರಿಗೆಯಾಗಿದ್ದು ಇವರ ಕುಟುಂಬದಲ್ಲಿ ತ್ರಿವಳಿ ಜನನವೂ ಇದೇ ಮೊದಲು ಹಾಗೂ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಎಲ್ಲಾ ಮಗು ಆರೋಗ್ಯವಾಗಿ ಯಾವುದೇ ಅಂಗವಿಕಲತೆ ಇಲ್ಲದೆ ಹುಟ್ಟಿರುವುದು ವಿಶೇಷ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾನ್ಯವಾಗಿ 6 ರಿಂದ 6.30 ಕೆಜಿ ಯಷ್ಟು ಮಗು ಸೇರಿದಂತೆ ತೂಕವನ್ನು ಗರ್ಭಿಣಿಯರು ಹೊರುತ್ತಾರೆ. ಆದರೆ ಎಂಟು ಕೆ.ಜಿ.ಗೂ ಹೆಚ್ಚು ಪ್ರಮಾಣದ ಹೊರೆಯನ್ನು ಹೊತ್ತ ಬಳಿಕ ಯಾವುದೇ ತೊಂದರೆಯಾಗದೆ ಹೆರಿಗೆಯಾಗಿರುವುದು ವಿಶೇಷ ಎಂದು ವೈದ್ಯರಾದ ಡಾ.ನ್ಯಾನ್ಸಿ ಪೌಲ್ ತಿಳಿಸಿದ್ದಾರೆ.