ಹಾಸನ,ಅ.13- ಹಾಸನಾಂಬ ದರ್ಶದ 4ನೇ ದಿನವಾದ ಇಂದು ಕೂಡ ಭಕ್ತ ಸಾಗರವೇ ಹರಿದುಬಂದಿದ್ದು, ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದು, ಭಕ್ತರಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಮದ್ಯರಾತ್ರಿಯಿಂದಲೇ ಸಂತೇಪೇಟೆ ಸರ್ಕಲ್ ರಸ್ತೆ ಉದ್ದಕ್ಕೂ ಸಾಲುಗಟ್ಟಿ ಸಹಸ್ರಾರು ಭಕ್ತರು ಸಾಲಿನಲ್ಲಿ ನಿಂತಿದ್ದರು. ಬಳಿಕ ಬೆಳಿಗ್ಗೆ 8ರ ವೇಳೆಗೆ ಸರಾಗವಾಗಿ ಸಾಲು ಕಡಿಮೆಯಾಗಿ ನಂತರವಾಗಿ ಸುಗಮವಾಗಿ ದರ್ಶನ ಸಾಗಿತು.
1 ಸಾವಿರ ರೂ ಹಾಗೂ 300 ರೂ ಪಾಸ್ ಗಳ ಖರೀದಿ ಸಿ ಆಗಮಿಸುವವರ ಸಂಖ್ಯೆಯೂ ಹೆಚ್ಚಿದ್ದು. ಭಾನುವಾರ ಬೆಳಿಗ್ಗೆ 8 ರ ವೇಳೆಗೆ ಪಾಸ್ ಹಾಗೂ ಲಾಡೂ ಮಾರಾಟದಿಂದ ದಾಖಲೆಯ 2.24 ಕೋಟಿ ಹಣ ಸಂಗ್ರಹವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಹೇಮಲತಾ ತಿಳಿಸಿದ್ದಾರೆ.
ಹಾಸನಾಂಬ ದರ್ಶನೋತ್ಸವದ ಹಿನ್ನಲೆಯಲ್ಲಿ ಪ್ರತಿವರ್ಷ ಸ್ಕೌಟ್ಸ್ ಗೈಡ್ಸ್ ಮತ್ತು ಎನ್‌ಸಿಸಿ ಶಿಬಿರಾರ್ಥಿಗಳು ಸಕ್ರಿಯವಾಗಿ ಬಾಗವಹಿಸುತ್ತಿದ್ದಾರೆ.ದರ್ಶನಕ್ಕೆ ಆಗಮಿಸೋ ಸಹಸ್ರಾರು ಮಂದಿ ಭಕ್ತರಿಗೆ ಕುಡಿಯಲು ನೀರು ,ಮಜ್ಜಿಗೆ ಒದಗಿಸುವುದು ಮತ್ತು ವೃದ್ದರು ಮತ್ತು ಅಂಗವಿಕಲರು ದೇವಿಯ ದರ್ಶನ ಪಡೆಯಲು ಸಹಾಯ ಹಸ್ತ ಚಾಚುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರ ಸೇರಿದಂತೆ ಜಾತ್ರಾ ಮಹೋತ್ಸವ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಗರಪಾ ಲಿಕೆಯ ಪೌರಕಾರ್ಮಿಕರ ಪಾತ್ರವೂ ಹೆಚ್ಚಿದೆ. ಪ್ರತಿ ವರ್ಷದಂತೆ ಈ ಬಾರಿಯೂ ದೇವಾಲಯದ ಸುತ್ತಮುತ್ತ ಹಾಗೂ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಸಾಗುವ ಕಡೆಗಳಲ್ಲಿ ಸ್ವಚ್ಛತೆ ಅತಿ ಮುಖ್ಯವಾಗಿದ್ದು ತಮದೇ ಆದ ಸೇವೆಯನ್ನು ಪ್ರಾಮಾಣಿಕವಾಗಿ ಒದಗಿಸುತ್ತಿದ್ದಾರೆ.
ಹಾಸನಾಂಬ ದೇವಾಲಯದ ಎಡ ಭಾಗದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು ಇಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಅಳವಡಿಸಿರುವ 280 ಸಿಸಿ ಕ್ಯಾಮೆರಾಗಳ ಕಣ್ಗಾವಲು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಭಕ್ತರು,ಅದಿಕಾರಿ, ಸಿಬ್ಬಂಂದಿ ಸೇರಿದಂತೆ ಎಲ್ಲರ ಚಲನವಲನವನ್ನು ಗಮನಿಸಲಾಗುತ್ತಿದೆ ಪ್ರತಿದಿನ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಕಂದಾಯ ಇಲಾಖೆಯ ಮಾಹಿತಿಯಂತೆ ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ದೇವಾಲಯಕ್ಕೆ ಹರಿದುಬಂದಿರುವ ಒಟ್ಟು ಆದಾಯ 2,24,57,400 ಆಗಿದೆ.
ಕೇವಲ ಮೂರು ದಿನಗಳಲ್ಲಿ ಒಟ್ಟು 2 ಕೋಟಿ 24 ಲಕ್ಷದ 57 ಸಾವಿರದ 400 ರೂಪಾಯಿ ಆದಾಯ ಸಂಗ್ರಹವಾಗಿರುವುದು ದೇವಾಲಯದ ಇತಿಹಾಸದಲ್ಲಿ ಭಾರಿ ದಾಖಲೆಯಾಗಿದೆ. ಭಕ್ತರ ಅಪಾರ ದರ್ಶನದಿಂದ ಜಾತ್ರೆಯು ಯಶಸ್ಸಿನತ್ತ ಸಾಗಿದೆ.ಈ ಬಾರಿ ಅಚ್ಚುಕಟ್ಟಾಗಿ ದರ್ಶನ ನಡೆಯುತ್ತಿದ್ದು, ಯಾರ ಶಿಫಾರಸ್ಸು ನಡೆಯುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಸಹ ಶಿಷ್ಟಾಚಾರ ಪಾಲನೆ ಮಾಡುತ್ತಿದ್ದು, ಟಿಕೆಟ್ ಪಡೆದೇ ದರ್ಶನ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ಮಾಜಿ ಸಚಿವ ರೇವಣ್ಣ ಅವರು ಕುಟುಂಬ ಸಮೇತ ಆಗಮಿಸಿ 1 ಸಾವಿರ ರೂ.ಗಳ ಟಿಕೆಟ್ ಪಡೆದು ಸಾಮಾನ್ಯರಂತೆ ದರ್ಶನ ಪಡೆದರು. ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರು ಕೂಡ ದೇವಾಲಯಕ್ಕೆ ಆಗಮಿಸಿ ಟಿಕೆಟ್ ಪಡೆದು ದೇವಿ ದರ್ಶನ ಮಾಡಿದರು. ಒಟ್ಟಿನಲ್ಲಿ ಈ ಬಾರಿ ವ್ಯವಸ್ಥಿತವಾಗಿ ಹಾಸನಾಂಬ ದೇವಿ ದರ್ಶನ ನಡೆಯುತ್ತಿದ್ದು, ಭಕ್ತರು ನಿರಾಸದಾಯಕವಾಗಿ ದೇವಿಯ ದರ್ಶನ ಪಡೆದು ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.