Saturday, October 11, 2025
Homeರಾಜ್ಯಇಂದಿನಿಂದ ಹಾಸನಾಂಬೆ ದರ್ಶನ ಆರಂಭ, ಜಿಲ್ಲಾಡಳಿತದಿಂದ ಸುರಕ್ಷತಾ ಕ್ರಮ

ಇಂದಿನಿಂದ ಹಾಸನಾಂಬೆ ದರ್ಶನ ಆರಂಭ, ಜಿಲ್ಲಾಡಳಿತದಿಂದ ಸುರಕ್ಷತಾ ಕ್ರಮ

Hasanambe Darshan to begin today, district administration takes safety measures

ಬೆಂಗಳೂರು, ಅ.10- ನಾಡಿನಾದ್ಯಂತ ಹೆಚ್ಚು ಪ್ರಖ್ಯಾತಿ ಪಡೆದಿರುವ ಹಾಸನಾಂಬೆ ದೇವಸ್ಥಾನದ ಬಾಗಿಲು ಇಂದಿನಿಂದ ತೆರೆದಿದ್ದು, ಅ. 22ರ ಸಂಜೆ 7 ಗಂಟೆವರೆಗೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ನಾನಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹಾಸನದಲ್ಲೇ ಮೊಕ್ಕಂ ಹೂಡಿದ್ದು, ಇಂದು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ಎಲ್ಲಾ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದರು. ಸರದಿ ಸಾಲಿನಲ್ಲಿ ನಿಲ್ಲುವವರಿಗಾಗಿ ಕಲ್ಪಿಸಿರುವ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಶ್ರಾಂತಿ ಸೇರಿ ಅಗತ್ಯ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಸಾರ್ವಜನಿಕರ ಜೊತೆ ಚರ್ಚೆ ಮಾಡಿ ಮಾಹಿತಿಗಳನ್ನು ಪಡೆದುಕೊಂಡರು. ಶೌಚಾಲಯ, ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ, ಸ್ತ್ರೀ ಶಕ್ತಿ ಸ್ವಸಹಾಯ, ಸಂಘಗಳ ಮಾರಾಟ ಮಳಿಗೆ ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಖುದ್ದು ವೀಕ್ಷಿಸಿದರು.

ಸಂಸದ ಶ್ರೇಯಸ್‌‍ ಪಟೇಲ್‌, ಜಿಲ್ಲಾಧಿಕಾರಿ ಲತಾಕುಮಾರಿ, ಎಸ್‌‍ಪಿ ಮೊಹಮದ್‌ ಸುಚೇತ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಜಿಲ್ಲೆಯ ಜನರಿಗಾಗಿ ದೇವಸ್ಥಾನದ ಆವರಣದಲ್ಲಿ ಬೇರೆ ಬೇರೆ ವೇದಿಕೆಗಳನ್ನು ನಿರ್ಮಿಸಿ, ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸಚಿವರು, ಶಾಸಕರು, ನ್ಯಾಯಮೂರ್ತಿಗಳು ಹಾಗೂ ಉನ್ನತಾಧಿಕಾರಿಗಳು ಸೇರಿದಂತೆ ಗಣ್ಯರು ನೇರವಾಗಿ ದೇವಸ್ಥಾನಕ್ಕೆ ಬರಬಾರದು, ಪ್ರವಾಸಿ ಮಂದಿರದಿಂದ ದೇವಸ್ಥಾನಕ್ಕೆ ಗಣ್ಯರನ್ನು ಕರೆ ತರಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ದೇವಸ್ಥಾನಕ್ಕೆ ಯಾವತ್ತು ಭೇಟಿ ನೀಡಲು ಬಯಸುತ್ತಾರೆ ಎಂದು ಗಣ್ಯರು ತಿಳಿಸಬೇಕು. ನಿಗದಿತ ಸಮಯಕ್ಕೆ ಒಂದು ಗಂಟೆ ಮೊದಲು ಹಾಸನದ ಪ್ರವಾಸಿ ಮಂದಿರಕ್ಕೆ ಬರಬೇಕು. ಅಲ್ಲಿಂದ ಐಷರಾಮಿ ವಾಹನದಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಗಣ್ಯರನ್ನು ಗೌರವಯುತವಾಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಹೆಚ್ಚು ಜನ ಸೇರಿದ ಕಡೆ ಹಲವಾರು ದುರ್ಘಟನೆಗಳಾದ ಉದಾಹರಣೆಗಳಿವೆ. ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ಕಡೆಗಳಲ್ಲಿ ಕಾಲ್ತುಳಿತಗಳಾಗಿವೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು. ದೇವಸ್ಥಾನ ಭೇಟಿಗಾಗಿ ಗಣ್ಯರಿಗೆ ರೂಪಿಸಿರುವ ವ್ಯವಸ್ಥೆಗಳನ್ನು ಬಹುತೇಕ ಎಲ್ಲರೂ ಸ್ವಾಗತಿಸಿದ್ದಾರೆ. ಒಂದಿಬ್ಬರು ಆಕ್ಷೇಪಿಸಿರಬಹುದು, ಸುರಕ್ಷತಾ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗಣ್ಯರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಿದರೆ, ಜನ ಸಾಮಾನ್ಯರಿಂದ ಆಕ್ಷೇಪಗಳು ವ್ಯಕ್ತವಾಗುತ್ತವೆ. ಈ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಹೊಸ ವ್ಯವಸ್ಥೆಗೆ ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೊರಲ ಬೆಂಬಲ ನೀಡಿದ್ದಾರೆ ಎಂದರು. ಇಂದು ಧರ್ಮದೇವಿ ದರ್ಶನಕ್ಕೆ 12 ಸಾವಿರ ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬೆಳಗಿನ ಜಾವದ ವೇಳೆಗಾಗಲೇ 10 ಸಾವಿರ ಜನ ದರ್ಶನ ಪಡೆದಿದ್ದರು. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನ ದರ್ಶನ ಪಡೆಯುವ ಸಾಧ್ಯತೆಯಿದೆ. ಹಿಂದಿನ ಅನುಭವಗಳನ್ನು ಆಧರಿಸಿ, ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈವರೆಗೂ ಎಲ್ಲವೂ ಸುರಕ್ಷಿತವಾಗಿದೆ.

ಗಣ್ಯರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಪಾಸ್‌‍ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಶೇ. 95ರಷ್ಟು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ನಾಳೆ, ಮತ್ತು ನಾಡಿದ್ದು ಹೆಚ್ಚು ಜನ ಭೇಟಿ ನೀಡುವ ಸಾಧ್ಯತೆಯಿರುವುದರಿಂದ ಸವಾಲಿನ ಸನ್ನಿವೇಶಗಳಿವೆ. ದೇವಿ ದರ್ಶನಕ್ಕಾಗಿ ಯಾರೂ ಹೆಚ್ಚು ಹೊತ್ತು ನಿಲ್ಲಬಾರದು, ದೇವರನ್ನು ನೋಡಿ ಮುಂದೆ ಹೋಗುತ್ತಿರಬೇಕು. ನಿಮಿಷಕ್ಕೆ 60ಕ್ಕಿಂತ ಹೆಚ್ಚಿನ ಜನರ ದರ್ಶನವಾಗಬೇಕು. ಒಂದು ಸೆಕೆಂಡ್‌ ನಿಂತರೂ ಸಾಕಷ್ಟು ಮಂದಿಗೆ ತೊಂದರೆಯಾಗಲಿದೆ. ಹೀಗಾಗಿ ಜನರನ್ನು ಬೇಗ ಬೇಗ ಕಳುಹಿಸಲು ಸೂಚಿಸಲಾಗಿದೆ ಎಂದರು.

ದೇವರ ದರ್ಶನಕ್ಕಾಗಿ ಇಂದು ಸಂಜೆ 4 ಗಂಟೆಗೆ ದೇವಸ್ಥಾನ ಪ್ರವೇಶವನ್ನು ಸ್ಥಗಿತಗೊಳಿಸಲಾಗುವುದು. ದೇವಸ್ಥಾನದ ಒಳಗಿರುವವರಿಗೆ ಸಂಜೆ 7 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪ್ರತಿದಿನ ಮಧ್ಯಾಹ್ನ 2 ರಿಂದ 3.30ರ ವರೆಗೆ ಹಾಗೂ ರಾತ್ರಿ 2 ರಿಂದ 5 ಗಂಟೆಯವರೆಗೂ ದೇವಿಯ ಅಲಂಕಾರ ಹಾಗೂ ನೈವೇದ್ಯದ ಕಾರಣಕ್ಕೆ ದರ್ಶನದ ಅವಕಾಶವನ್ನು ನಿಲ್ಲಿಸಲಾಗುವುದು. ಉಳಿದಂತೆ ನಿರಂತರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

RELATED ARTICLES

Latest News