ಹಾಸನ,ಅ.27- ನಗರದ ಅಧಿದೇವತೆ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.ಶುಕ್ರವಾರ ಸಂಜೆ 7 ಗಂಟೆಗೆ ಹಾಸನಾಂಬ ಗರ್ಭಗುಡಿಯ ಬಾಗಿಲನ್ನು ಹಾಕಲಾಗಿತ್ತು. ಆದ್ದರಿಂದ ನಿನ್ನೆ ಬೆಳಗಿನ ಜಾವ 4 ಗಂಟೆಯಿಂದ ದರ್ಶನ ಆರಂಭವಾಗಿ ಮಧ್ಯಾಹ್ನದವರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಮಧ್ಯಾಹ್ನ 2 ಗಂಟೆಯಿಂದ 3 ರವರೆಗೆ ದೇವಿಗೆ ನೈವೇದ್ಯ ಹಾಗೂ ವಿಶೇಷ ಪೂಜೆ ಹಿನ್ನೆಲೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಮಧ್ಯಾಹ್ನ 3 ರಿಂದ ಮುಂಜಾನೆ 3 ರವರೆಗೆ ಭಕ್ತರ ಆಗಮನವನ್ನು ನೋಡಿಕೊಂಡು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.
ವಿಶೇಷ ದರ್ಶನದ ಕ್ಯೂ ಕಡಿಮೆ :
ಪ್ರಾರಂಭದಲ್ಲಿ ವಿಶೇಷ ದರ್ಶನಕ್ಕೆ ಭಕ್ತರ ಸಂಖ್ಯೆ ಕಡಿಮೆಯಿದ್ದು, ಸಾಮಾನ್ಯ ಸರದಿ ಸಾಲಿನಲ್ಲಿ ಭಕ್ತರು ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು. ಅಲ್ಲಿಯೂ ಕೂಡ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಭಕ್ತರು ವಿಶೇಷ ದರ್ಶನದ 1000 ಹಾಗೂ 300 ರೂ ಟಿಕೆಟ್ ಕೌಂಟರ್‌ನ ಕ್ಯೂ ಹೆಚ್ಚಾಗಿತ್ತು. 1000 ರೂ.ಗಳ ಟಿಕೆಟ್ 15,000 ಟಿಕೆಟ್‌ಗಳು ಮಾರಾಟವಾಗಿದ್ದು, 300 ರೂ.ಗಳ 20,000 ಟಿಕೆಟ್‌ಗಳು ಮಾರಾಟವಾಗಿದ್ದು, ಒಟ್ಟು 2.50 ಕೋಟಿಗೂ ಹೆಚ್ಚು ವಿಶೇಷ ದರ್ಶನದ ಟಿಕೆಟ್‌ಗಳು ಮಾರಾಟವಾಗಿವೆ.
ಈ ಬಾರಿ ಗಣ್ಯರು ಮತ್ತು ಅತೀ ಗಣ್ಯರ ಸಾಲಿನಲ್ಲಿ ಹೆಚ್ಚು ಸುತ್ತಿಬಳಸಿ ಬರಲು ಬ್ಯಾರಿಕೆಡ್ ಹಾಕಲಾಗಿದ್ದು, ವೃದ್ಧರು ಮತ್ತು ಮಕ್ಕಳನ್ನು ಕರೆತಂದವರು ದರ್ಶನಕ್ಕೆ ಹೆಚ್ಚಿನ ಸಮಯ ತಗುಲುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರ್ಶನ ಪಡೆದ ಜೈನಮಠದ ಮಹಾಸ್ವಾಮೀಜಿ:
ಹಾಸನಾಂಬ ದೇವಿ ದರ್ಶನ ಪಡೆಯಲು ಆಗಮಿಸಿದ ಶ್ರವಣಬೆಳಗೊಳದ ಜೈನಮಠದ ಮಹಾಸ್ವಾಮೀಜಿ ಪರಮ ಪೂಜ್ಯ ಜಗದ್ಗುರು ಸ್ವಸ್ತಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಸ್ವಾಮೀಜಿ ದೇವಿಯ ದರ್ಶನ ಪಡೆದರು.
ಇಸ್ಕಾನ್‌ನಿಂದ ದೊನ್ನೆ ಪ್ರಸಾದ: ಅಚ್ಚುಕಟ್ಟು ವ್ಯವಸ್ಥೆ
ಹಾಸನಾಂಬ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಹರಿದು ಬರುತ್ತಿದ್ದು, ಎಲ್ಲಾ ಭಕ್ತರಿಗೂ ಜಿಲ್ಲಾಡಳಿತ ದೊನ್ನೆ ಪ್ರಸಾದದ ವ್ಯವಸ್ಥೆ ಕಲ್ಪಿಸಿದೆ.
ಮನಸೂರೆಗೊಂಡ ಫಲಪುಷ್ಪ ಪ್ರದರ್ಶನ :
ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ಮನಸೂರೆಗೊಳಿಸಿದೆ.ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಬೇಲೂರು, ಹಳೆಬೀಡು, ಗೊಮಟೇಶ್ವರ, ಸೇರಿದಂತೆ ಹಾಸನದ ಐತಿಹಾಸಿಕ ಸ್ಥಳಗಳ ರಮಣೀಯ ದೃಶ್ಯ ಪುಷ್ಪಗಳಲ್ಲಿ ಮಾದರಿ ಅರಳಿವೆ.
ಗೊರೂರು ಜಲಾಶಯ, ಅರಣ್ಯ ಇಲಾಖೆಯಿಂದ ಆನೆ, ಚಿರತೆ ಹಾಗೂ ಇನ್ನಿತರ ಪ್ರಾಣಿಗಳ ಕೆತ್ತನೆ ಹಾಗೂ ಔಷಧಿ ಸಸ್ಯಗಳ ಪ್ರದರ್ಶನ ನೋಡುಗರ ಮಸೂರೆಗೊಂಡಿದೆ.