ಹಾಸನ,ಅ.9-ವರ್ಷಕ್ಕೊಮೆ ದರ್ಶನ ಭಾಗ್ಯ ಕರುಣಿಸುವ ನಗರದ ಅದಿ ದೇವತೆ ಹಾಸನಾಂಭ ದೇವಾಲಯದ ಬಾಗಿಲನ್ನು ಇಂದು ಶಾಸ್ತ್ರೋಕ್ತವಾಗಿ ತೆರೆಯಲಾಗಿದ್ದು, ನಾಳೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಶ್ವಿಜಮಾಸದ ಮೊದಲ ಗುರುವಾರವಾದ ಇಂದು ಮಧ್ಯಾಹ್ನ 12.21ಕ್ಕೆ ಸರಿಯಾಗಿ ಅರಸು ವಂಶಸ್ಥರಾದ ನಂಜರಾಜ ಅರಸ್ ಅವರು (ಬಾಳೆಕಂದು) ಕಡಿದ ಬಳಿಕ ಪ್ರದಾನ ಅರ್ಚಕರಾದ ನಾಗರಾಜು ಅವರು ಬಾಗಿಲಿಗೆ ಪೂಜೆ ಸಲ್ಲಿಸಿದ ನಂತರ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಲತಾಕುಮಾರಿ, ಜಿಪಂ ಸಿಇಓ ಪೂರ್ಣಿಮ, ಎಸ್‌ಪಿ ಮೊಹಮದ್ ಸುಜೀತಾ ಸೇರಿದಂತೆ ಹಲವು ಗಣ್ಯರ ಸಮುಖದಲ್ಲಿ ಅದ್ದೂರಿಯಾಗಿ ಬಾಗಿಲನ್ನು ತೆರೆಯಲಾಯಿತು.
ದೇವಾಲಯದ ಗರ್ಭಗುಡಿಯನ್ನು ಶುಚಿಗೊಳಿಸಿ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.
ಇಂದಿನಿಂದ 23 ರ ವರೆಗೆ ಹಾಸನಾಂಭ ಹಾಗೂ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಪ್ರಥಮ ದಿನವಾದ ಇಂದು ಮತ್ತು ಬಾಗಿಲು ಮುಚ್ಚುವ ದಿನವಾದ 23 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ನಾಳೆ ಬೆಳಗ್ಗೆ 6 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ದಿನದ 24 ಗಂಟೆಗಳ ಕಾಲ ದರ್ಶನವಿರಲಿದ್ದು, ಪ್ರತಿ ದಿನದ ನೈವೇದ್ಯಮತ್ತು ಅಲಂಕಾರ ಕಾರ್ಯಗಳಿಗೆ ಮಧ್ಯಾಹ್ನ 2 ರಿಂದ 3 ಗಂಟೆ ಮತ್ತು ಬೆಳಗಿನ ಜಾವ 2 ರಿಂದ 5 ಗಂಟೆ ವರೆಗೆ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ.
ಅ.22 ರಂದು ಸಂಜೆ 7 ಗಂಟೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಅ.23 ರಂದು ಪೂಜಾ ಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಕಳೆದ ವರ್ಷ ಅ.24 ರಿಂದ ನ.3 ರ ವರೆಗೆ ಜಾತ್ರಾ ಮಹೋತ್ಸವ ನಡೆದಿತ್ತು. ಈ ವೇಳೆ 20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದರು.ಕಳೆದ ನ.3 ರಂದು ಗರ್ಭಗುಡಿ ಬಾಗಿಲನ್ನು ಮುಚ್ಚಲಾಗಿದ್ದು, ಇಂದು ತೆರೆಯಲಾಯಿತು. ಈ ಭಾರಿ 25 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಧರ್ಮದರ್ಶನ ಹಾಗೂ 300 ರೂ., ಹಾಗೂ 1000 ರೂ. ಟಿಕೆಟ್ ಪಡೆದವರಿಗೆ ಮೂರು ಪ್ರತ್ಯೇಕ ಸಾಲುಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಶಾಸಕರುಗಳು, ಸಚಿವರುಗಳು, ನ್ಯಾಯಮೂರ್ತಿಗಳು, ಉನ್ನತ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಆಗಮನದ ದಿನಾಂಕವನ್ನು ಮೊದಲೇ ಜಿಲ್ಲಾಧಿಕಾರಿ ಕಚೇರಿಗೆ ತಿಳಿಸಬೇಕಾಗಿದೆ.
ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರ ವರೆಗೆ ಮಾತ್ರ ಗಣ್ಯರಿಗೆ ಅವಕಾಶವಿರುತ್ತದೆ. ಈ ಬಾರಿ ಹಲವು ಕಾರ್ಯಕ್ರಮಗಳನ್ನು ಹಮಿಕೊಂಡಿದ್ದು, ಜಾನಪದ ಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ಹೆಲಿಕಾಪ್ಟ್ರರ್ ಪ್ರವಾಸ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡರವರು ಈಗಾಗಲೇ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಭಾರಿ ಹಾಸನಾಂಭ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಹಃ ಹಲವು ಮಾರ್ಪಾಡುಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುಸುತೊ್ತ್ರೕವಾಗಿ ಜಾತ್ರಾ ಮಹೋತ್ಸವ ನಡೆಸಲು ಸಜ್ಜಾಗಿದೆ.